Belagavi News In Kannada | News Belgaum

ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವತ್ತ ಶಿಕ್ಷಕರು ಗಮನ ಹರಿಸಲಿ: ಸಚಿವ ಸತೀಶ್‌ ಜಾರಕಿಹೊಳಿ

ಬೆಳಗಾವಿ: ‘ರಾಜ್ಯದಲ್ಲಿ ಶೈಕ್ಷಣಿಕ ವ್ಯವಸ್ಥೆ ಉನ್ನತೀಕರಣವಾಗಬೇಕು. ತಮ್ಮಲ್ಲಿ ಕಲಿತ ವಿದ್ಯಾರ್ಥಿಗಳ ಪೈಕಿ ಎಷ್ಟು ಮಂದಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ ಎನ್ನುವ ಕುರಿತು ಶಿಕ್ಷಕರು ನಿಗಾ ವಹಿಸಬೇಕು. ಅವರ ಸಾಧನೆ ಇತರೆ ಮಕ್ಕಳಿಗೂ ಪ್ರೇರಣೆಯಾಗಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿನ ಗಾಂಧಿ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬೆಳಗಾವಿ ಶೈಕ್ಷಣಿಕ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಪ್ರತಿಭಾಕಾರಂಜಿ ಮತ್ತು ಕಲೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ‘ಇಂದು ದೆಹಲಿಯಲ್ಲಿ ಸರ್ಕಾರಿ ಶಾಲೆಗಳು ಮಾದರಿಯಾಗಿ ಹೊರಹೊಮ್ಮಿವೆ. ಆದರೆ, ನಮ್ಮ ಸರ್ಕಾರಿ ಶಾಲೆಗಳಲ್ಲಿ ಕಲಿತ ಮಕ್ಕಳು ಖಾಸಗಿ ಶಾಲೆ ಮಕ್ಕಳೊಂದಿಗೆ ಪೈಪೋಟಿ ನಡೆಸಲು ಆಗುತ್ತಿಲ್ಲ. ಹಾಗಾಗಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವತ್ತ ಶಿಕ್ಷಕರು ಗಮನ ಹರಿಸಬೇಕಿದೆ’ ಎಂದರು. 

‘ಹಲವು ಶಾಲೆಗಳಲ್ಲಿ ದುರಸ್ತಿ ಕಾಮಗಾರಿ ನಡೆಯಬೇಕು. ಸಕಾಲಕ್ಕೆ ಅತಿಥಿ ಶಿಕ್ಷಕರ ನೇಮಕಾತಿ ಆಗಬೇಕು. ಸರ್ಕಾರ ಈ ಬಗ್ಗೆ ಚಿಂತನೆ ನಡೆಸಬೇಕಿದೆ’ ಎಂದು ಅಭಿಪ್ರಾಯಪಟ್ಟರು. ‘ಶಿಕ್ಷಣ, ಅರಣ್ಯ, ಪರಿಸರ, ಕ್ರೀಡಾ ರಂಗಗಳು ಈಗ ಕೆಳಸ್ತರದಲ್ಲಿವೆ. ಅವುಗಳನ್ನು ಮೇಲೆತ್ತುವ ಕೆಲಸವಾಗಬೇಕಿದೆ. ಈ ನಾಲ್ಕು ರಂಗಗಳು ಅಗ್ರಸ್ಥಾನಗಳಿಗೆ ಬಂದರೆ, ದೇಶ ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತದೆ’ ಎಂದ ಸತೀಶ, ‘ನಮಗೆ ಇತಿಹಾಸದ ಅರಿವಿರಬೇಕು. ಬುದ್ಧ, ಬಸವಣ್ಣ, ಅಂಬೇಡ್ಕರ್ ಸೇರಿದಂತೆ ಮಹಾನ್‌ ನಾಯಕರ ಕೊಡುಗೆ ಸ್ಮರಿಸಬೇಕು. ಅವರ ಹೋರಾಟದ ಹಾದಿಯನ್ನು ಮಕ್ಕಳಿಗೂ ತಿಳಿಸಿಕೊಡಬೇಕು’ ಎಂದು ಸಲಹೆ ನೀಡಿದರು.

‘ಬೇರೆ ದೇಶಗಳಲ್ಲಿ ಶಿಕ್ಷಣ ನೀಡಬೇಕೆನ್ನುವ ಧ್ಯೇಯದಿಂದಲೇ ಶಾಲೆಗಳನ್ನು ತೆರೆಯಲಾಗುತ್ತಿದೆ. ಆದರೆ, ನಮ್ಮಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಶಾಲೆ ತೆರೆಯಲಾಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದರಿಂದ ಕೆಲವೆಡೆ ಸರ್ಕಾರಿ ಶಾಲೆ ಮುಚ್ಚಲಾಗುತ್ತಿದೆ. ಇದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ಪ್ರಸ್ತುತ ದಿನಗಳಲ್ಲಿ ಶಿಕ್ಷಕರ ಸಮಸ್ಯೆಗಳ ಜತೆಗೆ, ಶೈಕ್ಷಣಿಕ ವ್ಯವಸ್ಥೆಯಲ್ಲಿರುವ ಸಮಸ್ಯೆಗಳ ಕುರಿತಾಗಿಯೂ ಚರ್ಚೆ ಆಗಬೇಕಿದೆ’ ಎಂದರು. 

‘ಉತ್ತರ ಕನ್ನಡ, ಶಿವಮೊಗ್ಗ, ಕೊಡಗು ಸೇರಿದಂತೆ ಮಲೆನಾಡು ಪ್ರದೇಶಗಳಲ್ಲಿನ ಕಾಲುಸಂಕಗಳು ಹಾಳಾಗಿದ್ದರಿಂದ ವಿದ್ಯಾರ್ಥಿಗಳಿಗೆ ತರಗತಿಗೆ ಹೋಗಲು ತೊಂದರೆಯಾಗಿತ್ತು. ಅವರಿಗೆ ಅನುಕೂಲವಾಗಲೆಂದು ₹35 ಕೋಟಿ ವೆಚ್ಚದಲ್ಲಿ 350 ಕಡೆ ಚಿಕ್ಕಸೇತುವೆ ನಿರ್ಮಿಸುತ್ತಿದ್ದೇವೆ’ ಎಂದು ಹೇಳಿದರು. ಸಾಧಕರಿಗೆ ಬೆಳಗಾವಿ ಶೈಕ್ಷಣಿಕ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿಕ್ಷಣ ರಂಗದಲ್ಲಿ ಸಾಧನೆ ಮೆರೆದವರನ್ನು ಗೌರವಿಸಲಾಯಿತು. 

ಶಾಸಕ ಆಸೀಫ್‌ ಸೇಠ್‌ ಅಧ್ಯಕ್ಷತೆ ವಹಿಸಿದ್ದರು. ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌, ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಭೊಯರ್‌, ಡಿಡಿಪಿಐ ಬಸವರಾಜ ನಾಲತವಾಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಯಕುಮಾರ ಹೆಬ್ಳಿ ಇತರರಿದ್ದರು.//////