ಭಾರತಕ್ಕೆ ಚಂದ್ರನ ಜೊತೆಗೆ ವಿಶೇಷ ಸಂಬಂಧವಿದೆ : ಸುರೇಂದ್ರ ಬಿಂದಗಿ

ಗದಗ : ಚಿಕ್ಕಂದಿನಿಂದಲೂ ಶ್ರೀ ತೋಂಟದಾರ್ಯ ಮಠದ ಅನ್ನದಾಸೋಹ, ಜ್ಞಾನದಾಸೋಹ, ಪುಸ್ತಕದಾಸೋಹ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಗಳನ್ನು ನೋಡುತ್ತ ಬೆಳೆದಿದ್ದೇನೆ. ಅನಾದಿ ಕಾಲದಿಂದಲೂ ಸೂರ್ಯ, ಚಂದ್ರ, ನಕ್ಷತ್ರಗಳ ಬಗ್ಗೆ ಸಾಕಷ್ಟು ಕುತೂಹಲಗಳಿದ್ದವು. ನಮ್ಮ ಜನರಿಗೆ ಚಂದ್ರನ ಜೊತೆಗೆ ವಿಶೇಷ ಸಂಬಂಧವಿದೆ ಎಂದು ಸುರೇಂದ್ರ ಬಿಂದಗಿಯವರು ಮಾತನಾಡಿದರು.
ಲಿಂಗಾಯತ ಪ್ರಗತಿಶೀಲ ಸಂಘದ 2657 ನೆಯ ಶಿವಾನುಭವ ಕಾರ್ಯಮಕದಲ್ಲಿ ಇಸ್ರೋ ವಿಜ್ಞಾನಿ ಸುರೇಂದ್ರ ಬಿಂದಗಿಯವರು ಮಾತನಾಡಿ ಬ್ರಹ್ಮಾಂಡ ತುಂಬಾ ದೊಡ್ಡದಿದೆ. ವಿಜ್ಞಾನಿಗಳಲ್ಲಿ ಅನೇಕ ವಿಷಯಗಳನ್ನು ತಿಳಿಯಬೇಕೆಂಬ ಕುತೂಹಲಗಳಿರುತ್ತವೆ. ಮಂಗಳಯಾನ ಮುಟ್ಟಿದ ಏಕೈಕ ರಾಷ್ಟ್ರ ಭಾರತ. ಚಂದ್ರನ ದಕ್ಷಿಣ ಭಾಗದಲ್ಲಿ ನೀರಿನ ಅಂಶವನ್ನು ಗುರುತಿಸಿ ಆ ಭಾಗಕ್ಕೆ ತಲುಪಿದ ಮೊಟ್ಟಮೊದಲ ದೇಶ ಭಾರತ. ಚಂದ್ರಯಾನ ಪ್ರಯೋಗ ಮಾಡುವಾಗ ಸಫಲತೆ-ವಿಫಲತೆಗಳು ಇದ್ದೆ ಇರುತ್ತವೆ. ಆ ದೋಷಗಳನ್ನು ಚಂದ್ರಯಾನ-3 ರಲ್ಲಿ ಸರಿಪಡಿಸಿಕೊಂಡು ಯಶಸ್ವಿಯಾಗಿದ್ದೇವೆ. ಈ ಯಶೋಗಾಥೆಯ ಹಿಂದೆ ವಿಜ್ಞಾನಿಗಳ ಶ್ರಮ ಮತ್ತು ಕಷ್ಟದ ಪರಿಸ್ಥಿತಿಗಳನ್ನು ಸುರೇಂದ್ರ ಬಿಂದಗಿಯವರು ಹಂಚಿಕೊಂಡರು. ಕೊರೋನಾ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಬಿಡುವಿಲ್ಲದೇ ಶ್ರಮಿಸಿದ್ದೇವೆ ಎಂದು ತಿಳಿಸಿದರು. ಚಂದ್ರಯಾನ-3 ರಲ್ಲಿ ನನ್ನ ಪಾತ್ರ ಉಷ್ಣ ನಿಯಂತ್ರಣ. ವೈಪರೀತ್ಯವಾದ ವಾತಾವರಣದ ಮಧ್ಯೆ ನಿಖರವಾಗಿ ನಿರ್ಧಿಷ್ಟವಾಗಿ ಉಷ್ಣಾಂಶವನ್ನು ನಿಯಂತ್ರಣ ಮಾಡುವುದು ಬಹುದೊಡ್ಡ ಸವಾಲಿನ ಸಂಗತಿ. ತಾಪಮಾನ ನಿರ್ವಹಣೆಯ ನನ್ನ ಜವಾಬ್ದಾರಿಯು ಅತ್ಯಂತ ಯಶಸ್ಸು ಕಂಡಿರುವುದು ನನಗೆ ಬಹಳಷ್ಟು ಸಂತೋಷ ಮತ್ತು ಹೆಮ್ಮೆಯೆನಿಸಿದೆ ಎಂದು ತಿಳಿಸಿದರು. 1960 ರಿಂದ ದಕ್ಷಿಣ ಧ್ರುವದ ಮೇಲೆ ಅನ್ವೇಷಣೆಗಳು ನಡೆಯುತ್ತಿದ್ದು, ರಷ್ಯಾ, ಜಪಾನ್, ಇಸ್ರೇಲ್ ಸೇರಿದಂತೆ ನಮ್ಮ ಭಾರತ ಕೂಡ ವಿಫಲವಾಗಿತ್ತು. ದಕ್ಷಿಣ ಧ್ರುವದಲ್ಲಿ ಉಪಗ್ರಹ ಇಳಿಸಲು ಅನೇಕ ಸವಾಲುಗಳೇ ಇವೆ. ಅವುಗಳಲ್ಲಿ ಕೆಲವನ್ನು ಸುರೇಂದ್ರ ಬಿಂದಗಿಯವರು ಜನತೆಯೊಂದಿಗೆ ಹಂಚಿಕೊಂಡರು. ಚಂದ್ರನ ಮೇಲೆ ಗಾಳಿಯ ವಾತಾವರಣ ಇಲ್ಲ. ದುರ್ಗಮವಾದ ಗುಡ್ಡ, ತಗ್ಗು ದಿಣ್ಣೆಗಳಿಂದ ತುಂಬಿದ ಪ್ರದೇಶ. 1 ಗಂಟೆಗೆ 5000 ಕಿ.ಮಿ. ವೇಗವಾಗಿ ಚಲಿಸುವ ಉಪಗ್ರಹ ಸಾಪ್ಟ್ ಲ್ಯಾಂಡಿಂಗ್ ಸಮಯದಲ್ಲಿ ಕೊನೆಯ 15 ನಿಮಿಷ ಅತ್ಯಂತ ಕ್ಲಿಷ್ಟಕರವಾದ ಸನ್ನಿವೇಶವಾಗಿದೆ. ಪ್ರತಿಕ್ಷಣಕ್ಕೂ ಸಾಪ್ಟ್‍ಲ್ಯಾಂಡಿಂಗ್ ಅತ್ಯಂತ ಮಹತ್ವದ್ದಾಗಿರುತ್ತದೆ. ಚಂದ್ರಯಾನ-3 ಕುರಿತು ಮಹತ್ತರವಾದ ವಿಷಯಗಳನ್ನು ಜನತೆಗೆ ತಿಳಿಸಿಕೊಟ್ಟರು. ಈ ಮಹತ್ತರವಾದ ಸಾಧನೆಗೆ 148 ಕೋಟಿ ಭಾರತೀಯರ ಪ್ರೋತ್ಸಾಹ, ಹಾರೈಕೆಯನ್ನು ಸ್ಮರಿಸಿದರು.
ಸಾನಿಧ್ಯ ವಹಿಸಿ ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರು ಮಾತನಾಡಿ ಚಂದ್ರನ ದಕ್ಷಿಣ ಧ್ರುವಕ್ಕೆ ತಲುಪಿದ ಮೊಟ್ಟಮೊದಲ ದೇಶ ಭಾರತವಾಗಿದೆ. ನರೇಂದ್ರ ಮೋದಿಯವರು ವಿಜ್ಞಾನಕ್ಕೆ ವಿಜ್ಞಾನಿಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತಿರುವುದು ಅಭಿನಂದನೀಯ. ಚಂದ್ರಯಾನ-2 ರಲ್ಲಿ ವಿಜ್ಞಾನಿಗಳು ಹತಾಶರಾದಾಗ ಪ್ರಧಾನಮಂತ್ರಿಗಳು ಹುರಿದುಂಬಿಸಿ ಪ್ರೋತ್ಸಾಹಿಸಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತ ಬಹಳಷ್ಟು ಮುಂದುವರೆದಿರುವ ದೇಶ ಎಂಬುದನ್ನು ವಿಶ್ವಕ್ಕೆ ಸಾರಿದ್ದಾರೆ. ಅನೇಕ ಖನಿಜ ಸಂಪತ್ತುಗಳು ಚಂದ್ರನ ಮೇಲೆ ಇರುವುದನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಚಂದ್ರಯಾನ-3 ರಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯಸಾಧಿಸಿದ ವಿಜ್ಞಾನಿ ಸುರೇಂದ್ರ ಬಿಂದಗಿಯವರು ಗದಗ ನಗರದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ತಿಳಿಸಿದರು.
ಶಿವಾನುಭವದಲ್ಲಿ ಮಾಜಿ ಸಚಿವ ಎಸ್. ಎಸ್. ಪಾಟೀಲ, ಶ್ರೀನಿವಾಸ ಹುಯಿಲಗೋಳ, ಗುಡಗುಂಟಿ ಶರಣರು ಭಾಗವಹಿಸಿದ್ದರು. ಪೂಜ್ಯ ಕಮಲಮ್ಮ ತಾಯಿ, ಆಧ್ಯಾತ್ಮ ಆಶ್ರಮ ಹಳೇ ಹುಬ್ಬಳ್ಳಿ ಅವರು ಪ್ರವಚನ ನೀಡಿದರು. ಶಿಕ್ಷಕರ ದಿನಾಚರಣೆ ಅಂಗವಾಗಿ ರಾಮಚಂದ್ರ ಕುಶಾಲರಾವ ಮೋನೆ, ವಿಜ್ಞಾನ ಶಿಕ್ಷಕರು, ವಿ.ಡಿ.ಎಸ್.ಟಿ. ಪ್ರೌಢಶಾಲೆ, ಗದಗ, ನಜೀರಸಾಬ ಸುಲೇಮಾನಸಾಬ ನದಾಫ, ಕನ್ನಡ ಭಾಷಾ ಶಿಕ್ಷಕರು, ಸೇಂಟ್‍ಪಾಲ್ ಸಿ.ಬಿ.ಎಸ್.ಇ. ಶಾಲೆ, ರೋಣ ಅವರಿಗೆ ‘ಆದರ್ಶ ಶಿಕ್ಷಕ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀಮಠದ ಕರ್ತೃಗದ್ದುಗೆಗೆ ಭಕ್ತಿಸೇವೆ ಸಲ್ಲಿಸಿದ ನಿಮಿತ್ಯ ಪ್ರಭಯ್ಯ ಶಂಕರಯ್ಯ ವಿರಕ್ತಮಠ, ಗೌರಮ್ಮ ಪ್ರಭಯ್ಯ ವಿರಕ್ತಮಠ ದಂಪತಿಗಳು ಬೆಳವಣಿಕೆ ಮತ್ತು ಬಿ.ಇಡಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಜ್ಯೋತಿ ತಳವಾರ ಅವರನ್ನು ಸಂಮಾನಿಸಲಾಯಿತು. ಪ್ರಸಾದ ಸುತಾರ ಮತ್ತು ಗುರುನಾಥ ಸುತಾರ ತಂಡದವರು ವಚನ ಸಂಗೀತ ಹಾಡಿದರು. ಕು. ಕೀರ್ತಿರಾಜ ಎಂ. ಹೂಗಾರ ಧರ್ಮಗ್ರಂಥ ಪಠಣಗೈದರು, ಕು. ಅರಮಾನ ಎಂ. ನಾಗನೂರ ಇವರಿಂದ ವಚನ ಚಿಂತನ ನಡೆಯಿತು.
ಸರ್ವರನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ವಿವೇಕಾನಂದಗೌಡ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ವಿ. ಕರೇಗೌಡ್ರ, ಕಾರ್ಯದರ್ಶಿ ಮಹೇಶ ಗಾಣಿಗೇರ, ಸಹಕಾರ್ಯದರ್ಶಿ ವಿಜಯಕುಮಾರ ಹಿರೇಮಠ, ವಿರುಪಾಕ್ಷಪ್ಪ ಅರಳಿ, ಸಂಘಟನಾ ಕಾರ್ಯದರ್ಶಿ ಅಶೋಕ ಹಾದಿ, ಕೋಶಾಧ್ಯಕ್ಷ ಸುರೇಶ ನಿಲೂಗಲ್, ರತ್ನಕ್ಕ ಪಾಟೀಲ ಉಪಸ್ಥಿತರಿದ್ದರು.