ಶ್ರೀ ಕೃಷ್ಣ ಪರಮಾತ್ಮನ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ: ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ
ಬೆಳಗಾವಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ

ಬೆಳಗಾವಿ, ಸೆ.06 : ಶ್ರೀ ಕೃಷ್ಣ ಪರಮಾತ್ಮರ ಸತ್ಯ, ನ್ಯಾಯ, ನೀತಿ ಧರ್ಮದ ಮಾರ್ಗಗಳಲ್ಲಿ ನಾವೆಲ್ಲರೂ ನಡೆಯಬೇಕು. ಅವರ ಧರ್ಮ ನಿಷ್ಠೆ, ಆದರ್ಶಗಳನ್ನು ಪಾಲಿಸುವುದರ ಮೂಲಕ, ಶ್ರೇಷ್ಠ ರಾಷ್ಟ್ರನಿರ್ಮಾಣವಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ ಅವರು ಹೇಳಿದರು.
ಜಿಲ್ಲಾಡಳತ, ಜಿಲ್ಲಾ ಪಂಚಾಯತ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಗುರುವಾರ (ಸೆ.6) ಏರ್ಪಡಿಸಲಾಗಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡುವುದರ ಜೊತೆಗೆ ಕೃಷ್ಣ ಪರಮಾತ್ಮನ ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ಶಾಂತಿ, ಸುವ್ಯವಸ್ಥೆಯನ್ನು ಕಾಪಾಡೋಣ ಎಂದು ಹೇಳಿದರು.
ಶ್ರೀ ಕೃಷ್ಣ ಪರಮಾತ್ಮರನ್ನು ಇಡೀ ದೇಶ ಪೂಜಿಸುತ್ತದೆ. ಧರ್ಮದ ಮಾರ್ಗದಲ್ಲಿ ನಡೆಯುವುದರ ಮೂಲಕ ಇತರರಿಗೆ ಮಾದರಿಯಾಗಬೇಕು. ಮಹಾಭಾರತದಲ್ಲಿ ಅವರ ಧರ್ಮ ಭೋದನೆ ಪಾಂಡವರ ಗೆಲುವಿಗೆ ಕಾರಣವಾಯಿತು. ಅದರಂತೆ ಇಂದಿನ ಸಮಾಜದಲ್ಲಿ ನಾವೆಲ್ಲರೂ ಕೃಷ್ಣನ ಬೋಧನೆಯನ್ನು ಅರಿಯಬೇಕು ಎಂದು ಪ್ರೋಬೇಷನರಿ ಐ.ಎ.ಎಸ್. ಅಧಿಕಾರಿಗಳಾದ ಶುಭಂ ಶುಕ್ಲಾ ಅವರು ಹೇಳಿದರು.
ಈ ವೇಳೆ ವಿಶೇಷ ಉಪನ್ಯಾಸ ನೀಡಿದ ರವಿ ಶಾಸ್ತ್ರಿ ಅವರು ಪುರಾತನ ಕಾಲದಲ್ಲಿ ಯಾದವ ಸಮುದಾಯಕ್ಕೆ ಹೆಚ್ಚಿನ ವಿದ್ಯಾಬ್ಯಾಸ ಇರಲಿಲ್ಲ ಆದರೂ ಕೂಡಾ ಸಮಾಜದಲ್ಲಿರುವ ಎಲ್ಲ ಜನರನ್ನು ಪ್ರೀತಿ ವಿಶ್ವಾಸ, ಸರಳ ಸಜ್ಜನಕೆಯಿಂದ ಅವರು ಕಾಣುತ್ತಿದ್ದರು.
ಜಾನುವಾರುಗಳ, ಪಾಲನೆ, ಪೋಷಣೆ ಮಾಡುವುದರ ಜೊತೆಗೆ ಹೈನುಗಾರಿಕೆ ಮೂಲಕ ತಮ್ಮ ಆರ್ಥಿಕ ಸ್ಥಿತಿ-ಗತಿಗಳ ಅಭಿವೃದ್ಧಿ ಪಡಿಸಿಕೊಂಡು ಸಮಾಜದಲ್ಲಿ ಅನೇಕ ಸಹಾಯಗಳನ್ನು ಮಾಡಿಕೊಂಡು ಬಂದಂತಹ ಸಮುದಾಯ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಶ್ರೀ ಗಜಪತಿ ಮಠದ ಶ್ರೀಗಳಾದ ಕೃಷ್ಣಕುಮಾರ ಅಜ್ಜನ್ನವರ, ಜಿಲ್ಲಾ ಪಂಚಾಯತ ಸದಸ್ಯರಾದ ಮಂಜುನಾಥ ಪಾಟೀಲ, ಯಾದವ ಸಮುದಾಯದ ಜಿಲ್ಲಾಧ್ಯಕ್ಷರಾದ ಶೀತಲ ಮುಂಡೆ, ಗೌರವಧ್ಯಕ್ಷರಾದ ಜೈಗೌಡ ಪಾಟೀಲ್, ಉಪಾಧ್ಯಕ್ಷ ಎನ್.ಎನ್ ಪಾಟೀಲ, ಹೆಸ್ಕಾಂ ಅಧಿಕಾರಿ ಸಂಜೀವ ಹಮ್ಮನವರ, ನಗರ ಸೇವಕರಾದ ಬಸವರಾಜ ಮುದ್ದೆಕರ, ಘಟಪ್ರಭಾ ಸಕ್ಕರೆ ಕಾರ್ಖಾನೆ ನಿರ್ದೇಶಕರಾದ ಶಿವಲಿಂಗ ಪೂಜಾರ ಹಾಗೂ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮೆರವಣಿಗೆ ಕಾರ್ಯಕ್ರಮ:
ಇದಕ್ಕೂ ಮುಂಚೆ ಶ್ರೀ ಕೃಷ್ಣನ ಭಾವಚಿತ್ರದ ಭವ್ಯ ಮೆರವಣಿಗೆಗೆ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಶೋಭಾ ಸೋಮನಾಚೆ ಅವರು ಚಾಲನೆ ನೀಡಿದರು.
ಕಿಲ್ಲಾ ಕೋಟೆಯ ಅಶೋಕ ವೃತ್ತದಿಂದ ಆರಂಭವಾದ ಮೆರವಣಿಗೆ ಆರ್.ಟಿ.ಓ ವೃತ್ತದ ಮಾರ್ಗವಾಗಿ ಕುಮಾರ ಗಂಧರ್ವ ಕಲಾ ಮಂದಿರವನ್ನು ತಲುಪಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಉಪ ಮೇಯರ್ ರೇಷ್ಮಾ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಹಣಬರ ಯಾದವ ಸಂಘದ ಜಿಲ್ಲಾ ಅಧ್ಯಕ್ಷರಾದ ಶೀತಲ ಮುಂಡೆ ಹಾಗೂ ಸಮುದಾಯ ಮುಖಂಡರು ಹಾಜರಿದ್ದರು.