Belagavi News In Kannada | News Belgaum

ನಿಜಗುಣಾನಂದ ಶ್ರೀಗಳ ಕಾರ್ಯ ಶ್ಲಾಘನೀಯ: ಮಾಜಿ ಸಿಎಂ ಶೆಟ್ಟರ್

ಚನ್ನಮ್ಮನ ಕಿತ್ತೂರು: ಪೂಜ್ಯ ನಿಜಗುಣಾನಂದ ಶ್ರೀ ತಮ್ಮ ಪ್ರವಚನಗಳ ಮೂಲಕ ನಾಡಿನೆಲ್ಲೆಡೆ ಬಸವಣ್ಣನವರ ವೈಚಾರಿಕ ಚಿಂತನೆಗಳು, ಮೂಢನಂಬಿಕೆಗಳು ಕಂದಾಚಾರಗಳಿಂದ ಸಮಾಜದಲ್ಲಿ ಶೋಷಣೆಗೊಳಗಾಗುತ್ತಿರುವ ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಅವರ ಈ ಸೇವೆಗೆ ನಿರಂತರ ಸಹಕಾರ ಇದ್ದೇ ಇದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು.

ಬೈಲೂರಿನ ನಿಷ್ಕಲ ಮಂಟಪದಲ್ಲಿ ಆಯೋಜಿಸಲಾದ ಲಿಂಗಾನಂದ ಶ್ರೀಗಳ 28 ನೇಯ ಸಂಸ್ಮರಣೆ ಹಾಗೂ ಲಿಂಗಾನಂದ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿ ಸ್ಥಾನ ವಹಿಸಿ  ಮಾತನಾಡಿದ ಅವರು, ಲಿಂಗಾಯತ ಧರ್ಮದ ಆಚಾರ ವಿಚಾರ ಬಸವಣ್ಣನವರ ಆಶಯಗಳನ್ನು ನಾಡಿನೆಲ್ಲೆಡೆ ತಮ್ಮ ಅದ್ಭುತ ಪ್ರವಚನಗಳ ಮೂಲಕ ತಲುಪಿಸಿದ ಕೀರ್ತಿ ಲಿಂಗಾನಂದ ಶ್ರೀಗಳಿಗೆ ಸಲ್ಲತಕ್ಕದ್ದು. ಅವರ ನಂತರ ಅವರದೇ ದಾರಿಯಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಕೂಡ ಬಸವಣ್ಣ ತಲುಪುವಂತೆ ಮಾಡಿದ ಕೀರ್ತಿ ಪೂಜ್ಯ ನಿಜಗುಣಾನಂದ ಶ್ರೀಗಳಿಗೆ ಸಲ್ಲುತ್ತದೆಎಂದರು.

 

 

ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಶಾಸಕ ಬಾಬಾಸಾಹೇಬ ಪಾಟೀಲ, ಶ್ರೀಗಳ ನಿಸ್ವಾರ್ಥ ಸೇವೆಯಿಂದಾಗಿ ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಲಿಂಗಾಯತ ಧರ್ಮದ ಆಚಾರ ವಿಚಾರಗಳು ಕಾಯಕ ದಾಸೋಹ ಜಂಗಮ ಸೇವೆ ಲಿಂಗ ಪೂಜೆ ಮೊದಲಾದ ಆಚರಣೆಗಳಿಗೆ ಪುನರ್ ಜೀವ ತುಂಬುವ ಶ್ರೀಗಳ ಕೆಲಸ ಅನೇಕರಿಗೆ ಮಾದರಿಯಾಗಿದೆ ಎಂದರು.
ಇದೇ ವೇಳೆ ಬೀದರ ನಗರದ ಶರಣ ಬಸವ ಕುಮಾರ ಪಾಟೀಲ ಅವರಿಗೆ ಲಿಂಗಾನಂದ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪೂಜ್ಯ ಲಿಂಗಾನಂದ ಶ್ರೀಗಳ ಬದುಕು ಬರಹ ಕೃತಿಯನ್ನು ಜಗದೀಶ ಶೆಟ್ಟರ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯೆ ರೋಹಿಣಿ ಬಾಬಾಸಾಹೇಬ ಪಾಟೀಲ, ಯುವ ನಾಯಕ  ರಾಹುಲ್ ಜಾರಕಿಹೊಳಿ, ಶಿವಕುಮಾರ ಗುಂಜಾಳ, ಶಂಕರಗೌಡ ಪಾಟೀಲ, ವೀರೇಶ ಕಂಬಳಿ ಸೇರಿದಂತೆ ಇತತರರು ಇದ್ದರು.//////