ಬೌದ್ಧಿಕವಾಗಿ ಚುರುಕುಗೊಳ್ಳಲು ಚೆಸ್ ಪಂದ್ಯಾವಳಿ ಸಹಕಾರಿ: ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಾವಲಗಟ್ಟಿ

ಬೆಳಗಾವಿ: ಚೆಸ್ ಭಾರತೀಯ ಕ್ರೀಡೆಗಳಲ್ಲಿ ಒಂದಾಗಿದ್ದು, ಈ ಆಟವನ್ನು ಆಡುವುದರಿಂದ ಬೌದ್ಧಿಕವಾಗಿ ಚುರುಕುಗೊಳ್ಳಲು ಸಾಧ್ಯ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಹೇಳಿದರು.
ನಗರದ ಮಹಾವೀರ ಭವನದಲ್ಲಿ ಸತೀಶ್ ಅಣ್ಣಾ ಚೆಸ್ ಪಂದ್ಯಾವಳಿ ಮತ್ತು ಬೆಳಗಾವಿ ಜಿಲ್ಲಾ ಚೆಸ್ ಅಸೋಸಿಯೇಷನ್ ವತಿಯಿಂದ ನಡೆದ ಚೆಸ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿ, ಚೆಸ್ ಕ್ರೀಡೆಯು ಪ್ರಪಂಚದಾದ್ಯಂತ ಈಗಾಗಲೇ ಗುರುತಿಸಿಕೊಂಡಿದ್ದು, ಚೆಸ್ ಬೌದ್ಧಿಕ ಕಸರತ್ತಿನ ಆಟವಾಗಿದೆ. ದೈಹಿಕ ಹಾಗೂ ಮಾನಸಿಕವಾಗಿ ಇದು ಎಲ್ಲರನ್ನು ಚುರುಕುಗೊಳಿಸುತ್ತದೆ. ಮಾನಸಿಕ ಹಾಗೂ ದೈಹಿಕ ನೆಮ್ಮದಿಗೂ ಈ ಆಟ ಪೂರಕವಾಗಿದೆ. ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಕ್ರೀಡೆಯಲ್ಲಿ ಭಾಗವಹಿಸುವಂತೆ ಪೋ›ತ್ಸಾಹ ನೀಡುತ್ತಿರುವುದು ಸಂತೋಷದ ವಿಚಾರವಾಗಿದೆ. ಯಾವುದೇ ಕ್ಷೇತ್ರವಾದರೂ, ಶ್ರಮವಿಲ್ಲದೇ, ಸಾಧನೆ ಸಾಧ್ಯವಿಲ್ಲ. ಒಟ್ಟಾರೆ ರಾಜ್ಯದ ಎರಡನೇಯ ರಾಜಧಾನಿಯಾಗಿರುವ ಬೆಳಗಾವಿಯಲ್ಲಿ ಚೆಸ್ ಸ್ಪರ್ಧೆ ಆಯೋಜನೆ ಮಾಡಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.
ಸತೀಶ್ ಅಣ್ಣಾಅಭಿಮಾನಿಗಳ ಸಂಘದ ಅಧ್ಯಕ್ಷ ಇಮ್ರಾನ್ ತಪಕೀರ್ ಮಾತನಾಡಿ, ಮುಖ್ಯವಾಗಿ ಯಾವುದೇ ಕ್ರೀಡೆ ಇರಲಿ ಸೋಲು – ಗೆಲುವು ಸಹಜ. ಸ್ಪರ್ಧೆಯಲ್ಲಿ ಬಹುಮಾನ ಬರಲೇಬೇಕೆಂದು ಅಲ್ಲ. ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ ಮುಖ್ಯ ಎಂದರು.
ನಾವು ಜೀವನದಲ್ಲಿ ಇಡುವ ಪ್ರತಿಯೊಂದು ಹೆಜ್ಜೆಯೂ ಬಹಳ ಮುಖ್ಯ. ನಾವು ಜೀವನದಲ್ಲಿ ಯಾವುದೇ ಕೆಲಸಗಳಿಗೆ ಹೆಜ್ಜೆ ಇಡುವಾಗ ಜಾಣತನದಿಂದ, ಯೋಚಿಸಿ ಇಡಬೇಕು. ಹಾಗೆಯೇ ಈ ಚೆಸ್ ಪಂದ್ಯಾವಳಿ ಬುದ್ದಿವಂತಿಕೆಯ ಆಟ. ಚೆಸ್ ಪಾನ್‍ಗಳನ್ನು ಬುದ್ದಿವಂತಿಕೆಯಿಂದ ಯೋಚಿಸಿ ಇಡಬೇಕಾಗುತ್ತದೆ. ಬುದ್ದಿವಂತಿಕೆಯಿಂದ ಆಟ ಆಡಿದರೆ ಗೆಲುವು ಸಾಧ್ಯ ಎಂದರು.
ಈ ವೇಳೆ ರಿಯಾನ್ ಮುಜಾವರ, ನಿಲೇಶ ಬಂಡಾರಿ, ಪ್ರಶಾಂತ ಅನ್ವೇಕರಗ್, ಅಕ್ಬರ ಸಡೇಕರ್, ತಬಸು ಮುಲ್ಲಾ, ವಿಕ್ಕಿ ಸಿಂಗ್, ಶ್ಯಾ ಅವಾಗ್ ಕಿಲ್ಲೇದಾರ, ಜಗೀದ್ ಮಂಟಮೂರಿ, ಬಿಲಾವರ್ ಪಿಂಡಾರಿ ಸೇರಿದಂತೆ ಇತರ ಮುಖಂಡರು ಹಾಗೂ ಚೆಸ್ ಪಂದ್ಯಾವಳಿ ಸ್ಫರ್ಧಾಳುಗಳು ಇದ್ದರು.
ಗಮನ ಸೆಳೆದ ಚೆಸ್ ಪಂದ್ಯಾವಳಿ: ಸತೀಶ್ ಅಣ್ಣಾ ಚೆಸ್ ಪಂದ್ಯಾವಳಿ ಮತ್ತು ಬೆಳಗಾವಿ ಜಿಲ್ಲಾ ಚೆಸ್ ಅಸೋಸಿಯೇಷನ್ ವತಿಯಿಂದ ನಡೆದ ಚೆಸ್ ಪಂದ್ಯಾವಳಿಯಲ್ಲಿ ಒಟ್ಟು 100 ಸ್ಫರ್ಧಾಳುಗಳು ಭಾಗವಹಿಸಿದ್ದರು. ಈ ಸ್ಫರ್ಧೆಯಲ್ಲಿ ಚಿಣ್ಣರು ಸೇರಿದಂತೆ ರಾಜ್ಯ, ರಾಷ್ಟ್ರ ಹಾಗೂ ದೇಶ-ವಿದೇಶದಿಂದಲೂ ಚೆಸ್ ಆಟಗಾರರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಎಲ್ಲರ ಗಮನ ಸೆಳೆಯಿತು.//////