ನಿಷ್ಕಲ ಮಂಟಪದ ನಿಜಗುಣಾನಂದ ಶ್ರೀಗೆ ದುಷ್ಕರ್ಮಿಗಳಿಂದ ಮತ್ತೆ ಜೀವ ಬೆದರಿಕೆ

ಬೆಳಗಾವಿ: ಜಿಲ್ಲೆಯ ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲ ಮಂಟಪದ ಬಸವಣ್ಣನವರ ವಿಚಾರಧಾರೆಯ ಪ್ರಚಾರಕ ನಿಜಗುಣಾನಂದ ಸ್ವಾಮೀಜಿಗೆ ದುಷ್ಕರ್ಮಿಗಳಿಂದ ಮತ್ತೆ ಜೀವ ಬೆದರಿಕೆ ಹಾಕಲಾಗಿದೆ.
ಆಗಸ್ಟ್ 8 ರಂದೇ ಜೀವ ಬೆದರಿಕೆ ಪತ್ರ ಬಂದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 2020ರಲ್ಲಿ ನಿನ್ನ ಹತ್ಯೆ ತಪ್ಪಿರಬಹುದು, 2023ರಲ್ಲಿ ತಪ್ಪುವುದಿಲ್ಲ. ನಿನ್ನ ಪಾಪದ ಕೊಡ ತುಂಬಿದೆ, ಬೇಗ ನಿನ್ನ ತಿಥಿ ಬಗ್ಗೆ ಭಕ್ತರಿಗೆ ಹೇಳು. ನಮ್ಮ ಧರ್ಮದ ದೇವತೆಗಳನ್ನು ನಿಂದಿಸುವ ನಿನ್ನ ಘೋರ ಹತ್ಯೆ ಆಗುತ್ತೆ. ನಿನ್ನ ಅಂತಿಮ ದಿನಗಳು ಆರಂಭವಾಗಿವೆ, ಇನ್ನು ದಿನಗಳನ್ನು ಎಣಿಸು ಎಂದು ಪೋಸ್ಟ್ ಮೂಲಕ ಜೀವ ಬೇದರಿಕೆ ಪತ್ರ ಮಠಕ್ಕೆ ಬಂದಿದೆ.
2020ರಲ್ಲಿ ಹತ್ಯೆ ಮಾಡುವುದಾಗಿ ಸ್ವಾಮೀಜಿಗೆ ಜೀವ ಬೆದರಿಕೆ ಪತ್ರ ಬಂದಿತ್ತು. ಇದೀಗ ಮತ್ತೆ ಜೀವ ಬೇದರಿಕೆ ಪತ್ರ ಬಂದಿದ್ದು, ಈವರೆಗೂ 5ಕ್ಕೂ ಹೆಚ್ಚು ಬಾರಿ ಜೀವ ಬೆದರಿಕೆ ಪತ್ರ ಬರೆದಿದ್ದಾರೆ. ಜೀವ ಬೆದರಿಕೆ ಪತ್ರದ ಬಗ್ಗೆ ಈವರೆಗೂ ದೂರು ದಾಖಲಿಸಿಕೊಳ್ಳದೇ ಕಿತ್ತೂರು ಠಾಣೆಯ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗುತ್ತಿದೆ.
ತಮ್ಮ ಖಡಕ್ ಮಾತುಗಳಿಂದಲೇ ರಾಜ್ಯದಲ್ಲಿ ಖ್ಯಾತಿಗಳಿಸಿರುವ ನಿಜಗುಣಾನಂದ ಶ್ರೀ, ಪ್ರಮುಖ ಲಿಂಗಾಯತ ಸ್ವಾಮೀಜಿಗಳಲ್ಲಿ ಒಬ್ಬರು. ದಶಕಗಳಿಂದ ಬಸವಣ್ಣನವರ ವಿಚಾರಧಾರೆಯ ಪ್ರಚಾರಕರಾಗಿದ್ದಾರೆ. ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲವನ್ನು ಕೇಂದ್ರವಾಗಿಸಿಕೊಂಡು ತಮ್ಮ ವಿಚಾರಗಳನ್ನು ಬಿತ್ತಿತ್ತು ಬಂದಿದ್ದಾರೆ. ಮೂರ್ತಿ ಪೂಜೆ, ಮೌಢ್ಯ ವಿರೋಧಿ ವಿಚಾರಗಳನ್ನು ಅವರ ಪ್ರವಚನದಲ್ಲಿ ಕಾಣಬಹುದಾಗಿದೆ.
ಜೀವ ಬೆದರಿಕೆ ಪತ್ರದಲ್ಲಿ ಏನಿದೆ? ಓಂ ಶ್ರೀ ಕಾಳಿಕಾದೇವಿ ನಮಃ ಓಂ ಶ್ರೀ ಕಾಳಿಕಾದೇವಿ ನಮಃ ನಿಜಗುಣನಂದಾ ನಿನ್ನ ಸಾವು 2020 ರಲ್ಲಿ ತಪ್ಪಿರಬಹುದು. 2023 ರಲ್ಲಿ ತಪ್ಪುದಿಲ್ಲ. ನಿನ್ನ ಪಾಪದ ಮಾತಿನ ಕೊಡ ತುಂಬಿದೆ. ಅತಿ ಬೇಗ ನಿನ್ನ ತಿಥಿಗೆ ನಿನ್ನ ಭಕ್ತಾದಿಗಳಿಗೆ ಹೇಳು. ನಮ್ಮ ಧರ್ಮ ದೇವತೆಗಳನ್ನು ನಿಂದಿಸುವ ನಿನಗೆ ಘೋರವಾದ ಹತ್ಯೆಯೇ ಬರುತ್ತೆ. ನಿನ್ನ ಅಂತಿಮ ದಿನಗಳು ಪ್ರಾರಂಭವಾಗಿದೆ. ಇನ್ನೂ ದಿನಗಳನ್ನು ಮಾತ್ರ ಎಣಿಸು. ಓಂ ಶ್ರೀ ಕಾಳಿಕಾದೇವಿ ನಮಃ ಓಂ ಶ್ರೀ ಕಾಳಿಕಾದೇವಿ ನಮಃ ಸಹಿಷ್ಣು ಹಿಂದೂ ಅಂತಾ ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ.//////