ಹುಕ್ಕೇರಿ ಮಹಾವೀರ ಸಹಕಾರಿಗೆ 2.65 ಕೋಟಿ ಲಾಭ: ನಿಲಜಗಿ

ಹುಕ್ಕೇರಿ: ಜಿಲ್ಲೆಯ ಜನರ ಜೀವನಾಡಿಯಾಗಿ ಸಹಕಾರಿ ತತ್ವದ ಮೂಲಕ ಬ್ಯಾಂಕಿಂಗ್ ವಲಯದಲ್ಲಿ ಜನಸ್ನೇಹಿ ಆಡಳಿತಕ್ಕೆ ಹೆಸರುವಾಸಿಯಾದ ಹುಕ್ಕೇರಿ ಮಹಾವೀರ ಮಲ್ಟಿಪರಪಜ್ ಸೌಹಾರ್ದ ಸಹಕಾರಿ ಸಂಘ ಕಳೆದ 2022-23ನೇ ಸಾಲಿನ ಆರ್ಥಿಕ ವರ್ಷದಲ್ಲಿ ಪ್ರಗತಿ ಪಥದತ್ತ ಸಾಗಿದ್ದು 2.65 ಕೋಟಿ ರೂ ನಿವ್ಹಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷರೂ ಆದ ಪುರಸಭೆ ಹಿರಿಯ ಸದಸ್ಯ ಮಹಾವೀರ ನಿಲಜಗಿ ಹೇಳಿದರು.
ಪಟ್ಟಣದಲ್ಲಿ ಶನಿವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್‌ನ ಸೇವೆಯನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲು ಆದ್ಯತೆ ನೀಡಲಾಗಿದೆ ಎಂದರು.
ಒಟ್ಟು13431 ಸದಸ್ಯರಿದ್ದು ಪ್ರಧಾನ ಕಚೇರಿ ಸೇರಿ ಸಹಕಾರಿಯು ಒಟ್ಟು 16 ಶಾಖೆಗಳನ್ನು ಹೊಂದಿದೆ. 2022-23ನೇ ಸಾಲಿನ ಆರ್ಥಿಕ ವರ್ಷದಲ್ಲಿ ಸಹಕಾರಿ ಒಟ್ಟು ವಾರ್ಷಿಕ 851 ಕೋಟಿ ರೂ ವಹಿವಾಟು ನಡೆಸಿದ್ದು 34 .86 ಲಕ್ಷ ರೂ ಶೇರು ಬಂಡವಾಳವಿದೆ. 6.99 ಕೋಟಿ ಕಾಯ್ದಿಟ್ಟ ಹಾಗೂ ಇತರೆ ನಿಧಿಗಳಿದ್ದು222 ಕೋಟಿ ದುಡಿಯುವ ಬಂಡವಾಳವಿದೆ. 180 ಕೋಟಿ ರೂ ಸಾಲ ವಿತರಿಸಲಾಗಿದ್ದು197 ಕೋಟಿ ರೂ ಠೇವುಗಳಿವೆ. 21.61 ಕೋಟಿ ಹೂಡಿಕೆಗಳಿದ್ದು 2.65 ಕೋಟಿ ರೂ ಲಾಭ ಗಳಿಸಿದ್ದು. ಶೇ. 25 ರಷ್ಟು ಲಾಭಾಂಶ ವಿತರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಮುಂಬರುವ ದಿನಗಳಲ್ಲಿ ಬ್ಯಾಂಕ್‌ನ ಕಾರ್ಯಕ್ಷೇತ್ರವನ್ನು ವಿಸ್ತರಿಸುವ ಚಿಂತನೆಯಿದ್ದು ಎಟಿಎಂ, ಮೊಬೈಲ್ ಬ್ಯಾಂಕಿಂಗ್ ಸೇರಿದಂತೆ ಸಂಪೂರ್ಣ ಡಿಜಿಟಲೀಕರಣ ವ್ಯವಸ್ಥೆ ಒದಗಿಸಲಾಗುವುದು. ಬ್ಯಾಂಕ್‌ನ ಮುಂದಿನ ಕಾರ್ಯ ಯೋಜನೆಗಳೆಲ್ಲವೂ ಕ್ರಿಯಾತ್ಮಕ ಹಾಗೂ ಜನೋಪಕಾರಿಯಾಗಿವೆ. ಸಾಲಗಾರರಿಗೆ ಆರ್ಥಿಕ ಹೊರೆಯಾಗದಂತೆ ಹಾಗೂ ಠೇವುದಾರರ ವಿಶ್ವಾಸ ಉಳಿಸಿಕೊಂಡು ಗಟ್ಟಿಯಾಗಿ ನಿಂತಿದೆ. ಸಾಲಗಾರರು ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.
ಉಪಾಧ್ಯಕ್ಷ ಕಿರಣ ಸೊಲ್ಲಾಪುರೆ, ನಿರ್ದೇಶಕರಾದ ಬಾಹುಬಲಿ ಸೊಲ್ಲಾಪುರೆ, ರೋಹಿತ ಚೌಗಲಾ, ಸಂಜಯ ನಿಲಜಗಿ, ಅಕ್ಕಪ್ಪ ಖತಗಲ್ಲಿ, ಪ್ರಜ್ವಲ ನಿಲಜಗಿ, ಮುಖ್ಯ ಕಾರ್ಯನಿರ್ವಾಹಕ ರಾಜೇಂದ್ರ ಪಾಟೀಲ, ಶಾಖಾ ಕಾರ್ಯದರ್ಶಿ ಸಂತೋಷಸಿಂಗ್ ರಜಪೂತ ಮತ್ತಿತರರು ಇದ್ದರು.//////