ಪೆಟ್ರೋಲ್ ಬಂಕ್ ಆವರಣದಲ್ಲಿ ಕಾರಿಗೆ ಆಕಸ್ಮಿಕ ಬೆಂಕಿ

ಬೆಳಗಾವಿ: ಬೆಳಗಾವಿಯ ನೆಹರು ನಗರದ ಪೆಟ್ರೋಲ್ ಬಂಕ್ ಆವರಣದಲ್ಲೇ ಕಾರಿನ ಮುಂಭಾಗಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ..
ನೆಹರು ನಗರದ ಶ್ರೀಕೃಷ್ಣದೇವರಾಯ ವೃತ್ತದ ಬಳಿ ಇರುವ ಬಿ ಬಿ ಹೊಸಮನಿ ಆ್ಯಂಡ್ ಸನ್ಸ್ ಅವರಿಗೆ ಸೇರಿದ ಪೆಟ್ರೋಲ್ ಬಂಕ್ ಆವರಣದಲ್ಲಿ ಈ ಅವಘಡ ಸಂಭವಿಸಿದೆ. ಪೆಟ್ರೋಲ್ ಬಂಕ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಸಂಭವಿಸಲಿದ್ದ ಭಾರೀ ದುರಂತ ತಪ್ಪಿದೆ..
ವ್ಯಕ್ತಿಯೊಬ್ಬ ಡೀಸೆಲ್ ಹಾಕಿಸಿಕೊಳ್ಳಲು ಪೆಟ್ರೋಲ್ ಬಂಕ್ಗೆ ಬಂದಿದ್ದ. ಕಾರಿನ ಮುಂಭಾಗದ ಬೊನೆಟ್ನಲ್ಲಿ ದಿಢೀರ್ ಬೆಂಕಿ ಕಾಣಿಸುತ್ತಿದ್ದಂತೆ ಕೀ ಜೊತೆ ಕಾರು ಮಾಲೀಕ ಪರಾರಿಯಾಗಿದ್ದಾನೆ..
ಕೂಡಲೇ ಎಚ್ಚೆತ್ತುಕೊಂಡ ಬಂಕ್ ಸಿಬ್ಬಂದಿ ಅಗ್ನಿನಂದಕ ಸಹಾಯದಿಂದ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಸಿಬ್ಬಂದಿಯ ಈ ಕಾರ್ಯಾಚರಣೆ ಪೆಟ್ರೋಲ್ ಬಂಕ್ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ..
ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಎಪಿಎಂಸಿ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬೆಳಗಾವಿಯ ಶಹಾಪುರದ ಭಾರತ ನಗರ ನಿವಾಸಿ ನರೇಂದ್ರ ಬಿರ್ಜೆ ಎಂಬವರಿಗೆ ಸೇರಿದ ಕಾರು ಇದಾಗಿದೆ.