Belagavi News In Kannada | News Belgaum

ಶಿಕ್ಷಕರ ನೇಮಕಕ್ಕೆ ಎಐಕೆಕೆಎಮ್ಎಸ್ ಆಗ್ರಹ

ಕೆಂಭಾವಿ:ಪಟ್ಟಣ ಸಮೀಪದ ನಗನೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರ ಕೊರತೆ ನೀಗಿಸುವಂತೆ ಆಗ್ರಹಿಸಿ ಶುಕ್ರವಾರ ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆಯ‌ ವತಿಯಿಂದ ಸುರಪುರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಉಪ ನಿರ್ದೇಶಕರಿಗೆ ಬರೆದ ಮನವಿಯನ್ನು ಬಿಇಓ ರವರ ಮ‌ೂಲಕ ಸಲ್ಲಿಸಿದರು.
ನಗನೂರು ಸರಕಾರಿ ಶಾಲೆಯಲ್ಲಿ ಸುಮಾರು 360 ಕ್ಕೂ ಅಧಿಕ ಮಕ್ಕಳು ಇದ್ದು 13 ಜನ ಶಿಕ್ಷಕರ ಅವಶ್ಯಕತೆ ಇದೆ. ಆದರೆ ಇಲ್ಲಿ ಪ್ರಧಾನ ಗುರು ಸೇರಿದಂತೆ ಕೇವಲ ಇಬ್ಬರು ಶಿಕ್ಷಕರು ಮಾತ್ರ ಇರುತ್ತಾರೆ. ಇದರಿಂದ ನಮ್ಮ ಮಕ್ಕಳ ಶಿಕ್ಷಣ ಸಂಪೂರ್ಣ ಕುಂಠಿತಗೊಳ್ಳುತ್ತಿದೆ. ಪ್ರಸ್ತುತ ಕಾರ್ಯನಿರ್ವಹಿಸುವ ಮುಖ್ಯ ಗುರುಗಳು ಕೂಡ ಮೂರ್ನಾಲ್ಕು ತಿಂಗಳಲ್ಲಿ ನಿವೃತ್ತರಾಗುತ್ತಿದ್ದಾರೆ. ಕೂಡಲೆ ಶಾಲೆಗೆ ಶಿಕ್ಷಕರನ್ನು ನೇಮಿಸಿ ಮಕ್ಕಳ ಕಲಿಕೆಗೆ ಅನುಕೂಲ ಮಾಡಿಕೊಡಬೇಕು ಇಲ್ಲವಾದರೆ ಮಕ್ಕಳೊಂದಿಗೆ ಪಾಲಕರು ಸೇರಿದಂತೆ ನಮ್ಮ ಸಂಘಟನೆಯ ವತಿಯಿಂದ ಶಾಲೆಗೆ ಬೀಗ ಜಡಿದು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು‌ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಈ ಸಂದರ್ಭದಲ್ಲಿ ಎಐಕೆಕೆಎಮ್ಎಸ್ ಜಿಲ್ಲಾ ಅಧ್ಯಕ್ಷ ಶರಣಗೌಡ ಗೂಗಲ್, ತಾಲೂಕು ಅಧ್ಯಕ್ಷ ಗುರಪ್ಪಗೌಡ, ಈರಯ್ಯ ಸ್ಥಾವರ ಮಠ, ಮಲ್ಲಯ್ಯ ಮಡ್ಡಿ, ಗುರಪ್ಪ ಗೌಡ, ಸಿದ್ದಣ್ಣ ಗೂಗಲ್, ಬಸಣ್ಣ ದೇಶಪಾಂಡೆ, ಚಂದಾ ಹುಸೇನ್ ಭಗವಾನ್, ಗುರುಲಿಂಗ್ ತಳ್ವಾರ್, ದೇವು ಬೆಳೆ, ದೇವಿಂದ್ರ ಹಡಪದ್ ಸೇರಿದಂತೆ ಇತರರು ಇದ್ದರು.