ಆಚರಣೆಗಳು ಸಾರ್ವತ್ರಿಕ ಸಂಭ್ರಮ ಕಾಣುವಂತಾಗಲಿ

ಕೆಂಭಾವಿ: ಈ ವರ್ಷ ಗಣೇಶ ಉತ್ಸವ ಮತ್ತು ಈದ್ ಮಿಲಾದ್ ಹಬ್ಬಗಳು ಹೆಚ್ಚುಕಮ್ಮಿ ಒಂದೆ ವಾರದ ಅಂತರದೊಳಗೆ ಆಚರಿಸಲಾಗುತ್ತಿದ್ದು, ಎರಡೂ ಹಬ್ಬಗಳು ಭಾವೈಕ್ಯತೆ ಹಾಗೂ ಸೌಹಾರ್ದಯುತವಾಗಿ ಆಚರಿಸುವಂತೆ ಡಿ.ಎಸ್.ಪಿ ಜಾವೀದ್ ಇನಾಮದಾರ್ ರವರು ಕರೆ ನೀಡಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬದ ಆಚರಣೆ ನಿಮಿತ್ಯ ಗುರುವಾರ ಕರೆದ ಸೌಹಾರ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಹಬ್ಬ ಹರಿದಿನಗಳು, ಪ್ರತಿಯೊಂದು ಆಚರಣೆಗಳು ತನ್ನದೆಯಾದ ಚಾರಿತ್ರಿಕ ಮತ್ತು ಧಾರ್ಮಿಕ ಹಿನ್ನೆಲೆ ಹೊಂದಿರುತ್ತವೆ. ಅವುಗಳ ಮಹತ್ವ ಅರಿತಾಗ ಆಚರಣೆಯಲ್ಲಿ ಸಾರ್ವತ್ರಿಕ ಸಂಭ್ರಮ ಕಾಣಬಹುದು. ಅದೇ ರೀತಿ ಮುಂಬರುವ ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬವನ್ನು ಬೇಧವಿಲ್ಲದೆ ಎಲ್ಲರೂ ಭಾಗವಹಿಸುತ್ತಾ ಸ್ನೇಹ ಸೌಹಾರ್ದತೆಯಿಂದ ಯಾವುದೆ ಅಹಿತಕರ ಘಟನೆಗೆ ಆಸ್ಪದ ನೀಡದೆ ಸಂಭ್ರಮಿಸುವಂತೆ ತಿಳಿಸಿದರು.
ಸಿಪಿಐ ವಿಜಯಕುಮಾರ ಬಿರಾದಾರ್ ಮಾತನಾಡಿ ಭಾರತ ನೆಲದಲ್ಲಿ ಆಚರಿಸುವ ಪ್ರತಿಯೊಂದು ಹಬ್ಬವನ್ನು ಜಾತಿ ಧರ್ಮದ ಹೆಸರಿನಲ್ಲಿ ವಿಂಗಡಣೆ ಮಾಡದೆ ಪ್ರತಿಯೊಂದು ಹಬ್ಬಗಳನ್ನು ಭಾವೈಕ್ಯ ಭಾವದಿಂದ ಭಾರತೀಯ ಹಬ್ಬವಾಗಿ ಆಚರಿಸಬೇಕು ಅಂದಾಗ ಮಾತ್ರ ನಮ್ಮಲ್ಲಿ ಸೌಹಾರ್ದತೆ ಮೂಡಲು ಸಾಧ್ಯ. ಈದ್ ಮಿಲಾದ್ ಹಬ್ಬವು ಕೊನೆಯ ಪ್ರವಾದಿ ಮಹಮ್ಮದ್ ಸಲ್ಲಲ್ಲಾಹು ಅಲಹಿವ ಸಲ್ಲಮ್ಮರ ಜನ್ಮದಿನವಾಗಿದ್ದು, ಈ ನಾಡಿನಲ್ಲಿ ಎಲ್ಲಾ ಶರಣರು ಸಂತರು ಪ್ರವಾದಿಗಳು ದೇವನೊಬ್ಬ ನಾಮ ಹಲವು ಎನ್ನುವಂತೆ ಜನಮನದಲ್ಲಿ ಐಕ್ಯತೆಯನ್ನು ಬಿತ್ತಿ ತಮ್ಮ ಸಂದೇಶದ ಮೂಲಕ ಶಾಂತಿ, ಕರುಣೆಯನ್ನು ಸಾರಿದ್ದಾರೆ. ಆಚರಣೆಯ ಮೂಲಕ ಅವರ ಆದರ್ಶಗಳು ನಮಗೆ ಬದುಕಿಗೆ ಹಾಸುಹೊಕ್ಕಾಗಬೇಕು ಎಂದರು.
ಪಿ ಎಸ್ ಐ ರಾಜಶೇಖರ ರಾಠೋಡರವರು, ಕೆಂಭಾವಿ ಠಾಣಾ ವ್ಯಾಪ್ತಿಯ ಗಣೇಶೋತ್ಸವಗಳಲ್ಲಿ 6 ಅತೀ ಸೂಕ್ಷ್ಮ, 20 ಕ್ಕೂ ಹೆಚ್ಚು ಸೂಕ್ಷ್ಮವೆಂದು ಪರಿಗಣಿಸಲಾಗಿದೆ. ಎಡಿಜಿಪಿ ರವರು ಹಾಗೂ ಎಸ್ ಪಿ ಯವರ ನಿರ್ದೇಶನದಂತೆ ಉತ್ಸವ ಸಮಿತಿಯವರು ವಹಿಸಿಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಹಾಗೂ ನಿಯಮಗಳ ಕುರಿತು ತಿಳಿಸಿದರು.
ಕ್ರೈಮ್ ಪಿಎಸ್ಐ ವೆಂಕಣ್ಣ ಶಹಾಪುರ, ಉಪ ತಹಶಿಲ್ದಾರ ಮಲ್ಲಿಕಾರ್ಜುನ ಪಾಟೀಲ್, ಜೆಸ್ಕಾಮ್ ಶಾಖಾಧಿಕಾರಿ ಶ್ರೀಶೈಲ ತಮದೊಡ್ಡಿ ಭಾಗವಹಿಸಿದ್ದರು. ಮುಖಂಡರಾದ ಸಾಹೇಬಲಾಲ್ ಆಂದೇಲಿ, ಶಿವಶರಣರ ವಾಡಿ, ಶ್ರೀಶೈಲ ಖಾಚಾಪುರ, ಡೆವಿಡ್ ದೇವು, ಭೀಮರಡ್ಡಿ ಬೆಕಿನಾಳ ಇತರರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಖಾಜಾಪಟೇಲ ಕಾಚೂರ, ಗಾಲಿಬಸಾಬ್ ಮೌಲಾನಾ, ಕುಮಾರ ಮೋಪಗಾರ್, ರಹೇಮಾನ್ ಪಟೇಲ್, ಸೈಯದ್ ಮೌಲಾನಾ, ಬಂದೇನವಾಜ್ ನಾಶಿ, ಬುಡ್ಡೆಸಾಬ್ ಖುರೇಶಿ, ಭೀಮರಡ್ಡಿ ಬೇಕಿನಾಳ್, ದೇವಿಂದ್ರ ವಠಾರ್, ರಾಮನಗೌಡ ಯಾಕ್ತಾಪುರ ಸೇರಿದಂತೆ ವಲಯದ ಮುಖಂಡರು ವಿವಿಧ ಸಂಘಟನೆಯ ಪದಾಧಿಕಾರಿಗಳು ಇದ್ದರು.