Belagavi News In Kannada | News Belgaum

“ಸ್ವಚ್ಛತಾ ಹಿ ಸೇವಾ” ವಿಶೇಷ ಆಂದೋಲನ ಸೆ.15 ರಿಂದ

ಬೆಳಗಾವಿ, ಸೆ.15 : ತ್ಯಾಜ್ಯ ಮುಕ್ತ ಭಾರತ ಎಂಬ ಘೋಷವಾಕ್ಯದೊಂದಿಗೆ ‘ಸ್ವಚ್ಛತಾ ಹಿ ಸೇವಾ’ ಸ್ವಚ್ಛತೆಯೇ ಸೇವೆ ಎಂಬ ವಿಶೇಷ ಜನಾಂದೋಲನವನ್ನು ಸೆ.15 ರಿಂದ ಅಕ್ಟೋಬರ್ 2, 2023 ರವರೆಗೆ ಜಿಲ್ಲೆಯ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಹರ್ಷಲ್ ಭೋಯರ್ ರವರು ತಿಳಿಸಿದರು.


‘ಸ್ವಚ್ಛತೆಯೇ ಸೇವೆ’ ವಿಶೇಷ ಜನಾಂದೋಲದ ಪ್ರಯುಕ್ತ ನಗರದ ಚೆನ್ನಮ್ಮಾ ವೃತ್ತದಲ್ಲಿ ಶುಕ್ರವಾರ (ಸೆ.15) ಏರ್ಪಡಿಸಲಾಗಿದ್ದ ‘ಸೈಕಲ್ ರ್ಯಾಲಿ’ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಅಕ್ಟೋಬರ್ 2 ರಂದು ಮಹಾತ್ಮಾ ಗಾಂಧೀಜಿಯವರ ಜನ್ಮ ದಿನದ ಸ್ಮರಣಾರ್ಥವಾಗಿ ಸ್ವಚ್ಛ ಭಾರತ ದಿನವನ್ನಾಗಿ ಆಚರಿಸಲಾಗುತ್ತಿದೆ. ಮಹಾತ್ಮರ ಧ್ಯೇಯ ವಾಕ್ಯ ‘ಸ್ವಚ್ಛತೆಯೇ ದೈವತ್ವ’ ಎಂಬ ಕನಸನ್ನು ನನಸಾಗಿಸಲು ಸೆಪ್ಟಂಬರ್ 15 ರಿಂದ ಅಕ್ಟೋಬರ್ 2, 2023 ರವರೆಗೆ ‘ಸ್ವಚ್ಛತಾ ಹಿ ಸೇವಾ’ ಎಂಬ ವಿಶೇಷ ಜನಾಂದೋಲನವನ್ನು ಹಮ್ಮಿಕೊಳ್ಳಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ತೀರ್ಮಾನಿಸಲಾಗಿದೆ.
ಜಿಲ್ಲೆಯ ಎಲ್ಲ ತಾಲೂಕಿನ ಗ್ರಾಮ ಪಂಚಾಯತಿಗಳು ಗ್ರಾಮಗಳ ಸ್ವಚ್ಛತೆಗಾಗಿ ಸ್ವಯಂ ಪ್ರೇರಿತವಾಗಿ ಶ್ರಮದಾನ ಚಟುವಟಿಕೆಗಳಲ್ಲಿ ಭಾಗವಹಿಸುವರು ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯ ಜನಜಂಗುಳಿ ಸ್ಥಳಗಳಾದ ಬಸ್ ನಿಲ್ದಾಣ, ರೈಲು ನಿಲ್ದಾಣ, ನದಿ, ಸಮುದಾಯ ಭವನ, ಪ್ರವಾಸಿ ತಾಣಗಳು, ಐತಿಹಾಸಿಕ ಸ್ಮಾರಕಗಳು, ಚರಂಡಿ, ನಾಲಾಗಳು ಮುಂತಾದವುಗಳಲ್ಲಿ ದೃಶ್ಯ ಸ್ವಚ್ಛತೆ ಕಾಯ್ದುಕೊಳ್ಳಲು ಶ್ರಮದಾನ ಚಟುವಟಿಕೆಗಳನ್ನು ಆಯೋಜಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
‘ಸ್ವಚ್ಛತಾ ಹಿ ಸೇವಾ’ ಆಂದೋಲನವನ್ನು ಉತ್ತಮವಾಗಿ ಯಶಸ್ವಿಗೊಳಿಸಲು ಪ್ರತಿಯೊಬ್ಬ ನಾಗರಿಕರ ಸಹಕಾರ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೊಯರ್ ಕರೆ ನೀಡಿದರು.
ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ರವಿ ಬಂಗಾರಪ್ಪನವರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕರಾದ ಬಿ. ಶ್ರೀ ನಿವಾಸ, ಜಿಲ್ಲಾ ಎಸ್.ಬಿ.ಎಮ್ ಸಮಾಲೋಚಕರಾದ ಬಾಹುಬಲಿ ಮೆಳವಂಕಿ, ಮಂಜುನಾಥ ಪಾಟೀಲ, ಪರಗೌಡ ಪಾಟೀಲ, ಸಾಗರ ರಾಮಗೊಂಡ ಮತ್ತು ಲಕ್ಷ್ಮಿಕಾಂತ ದೇವರಮನಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.