Belagavi News In Kannada | News Belgaum

ಕಾಲುಬಾಯಿ ರೋಗ ಅಭಿಯಾನ ಯಶಸ್ವಿಗೆ ಹೆಚ್ಚಿನ ಶ್ರಮ ವಹಿಸಿ: ಜಿ. ಪಂ ಸಿಇಓ ಹರ್ಷಲ್ ಭೋಯರ್

ಕಾಲುಬಾಯಿ ರೋಗ ಲಸಿಕಾ ಅಭಿಯಾನ- ಸಭೆ

 

ಬೆಳಗಾವಿ, ಸೆ.20: ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 25 ರವರೆಗೆ ನಡೆಯಲಿರುವ ಜಾನುವಾರುಗಳ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಕೈಗೊಳ್ಳಲು ವ್ಯಾಕ್ಸೀನ್, ಸಿರಿಂಜ್ ಸೇರಿದಂತೆ ಯಾವುದೇ ರೀತಿಯ ವೈದಕೀಯ ಸೌಲಭ್ಯ ಕೊರತೆಯಾಗಬಾರದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಹರ್ಷಲ್ ಭೋಯರ್ ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಬುಧವಾರ (ಸೆ.20) ನಡೆದ ನಾಲ್ಕನೇ ಸುತ್ತಿನ ಜಾನುವಾರುಗಳ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

ಲಸಿಕಾ ಅಭಿಯಾನದ ಕುರಿತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಜಾಗೃತಿ ಮೂಡಿಸಲು ಸೂಚಿಸಬೇಕು. ಪ್ರತಿ ಗ್ರಾಮಗಳಲ್ಲಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಲಸಿಕಾ ಅಭಿಯಾನ ಯಶಸ್ವಿಗೆ ಅವಶ್ಯಕ ವೈದ್ಯಕೀಯ ಸಲಕರಣೆಗಳು ಪೂರೈಕೆ ಆಗಬೇಕು. ಯಾವುದೇ ಗ್ರಾಮದಲ್ಲಿ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ರೈತರಿಗೆ ಆರ್ಥಿಕ ಸಂಕಷ್ಟ ಉಂಟು ಮಾಡುತ್ತಿರುವ ಕಾಲುಬಾಯಿ ರೋಗದಿಂದ ರಾಜ್ಯವನ್ನು ಮಾಡುವಲ್ಲಿ ಸಹಕರಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ ಅಭಿಯಾನ ಚಾಲನೆಗೊಳ್ಳಲಿದೆ.

ಕಾಲುಬಾಯಿ ರೋಗ ಎತ್ತು, ಹೋರಿ, ಹಸು ಎಮ್ಮೆ ಮತ್ತು ಹಂದಿಗಳಲ್ಲಿ ಬರುವುದರಿಂದ ಆರ್ಥಿಕತೆ ನಷ್ಟ ಉಂಟುಮಾಡುವ ಮಾರಕ ರೋಗವಾಗಿದೆ. ರೋಗದಿಂದ ಗುಣಮುಖವಾದ ಜಾನುವಾರುಗಳಲ್ಲಿ ಗರ್ಭಕಟ್ಟುವಿಕೆಯಲ್ಲಿ ವಿಳಂಬ, ಸಾಮರ್ಥ್ಯ ನಷ್ಟ ಮತ್ತು ಹಾಲಿನ ಇಳುವರಿಯಲ್ಲಿ ಇಳಿಮುಖವಾಗುವ ಸಾಧ್ಯತೆಯಿರುತ್ತದೆ.

ರೋಗದಿಂದ ಪೂರ್ಣ ಸುರಕ್ಷತೆಗಾಗಿ ಮೂರು ತಿಂಗಳ ಮೇಲ್ಪಟ್ಟ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕುವುದು ಅತ್ಯಗತ್ಯವಾಗಿರುವುದರಿಂದ ಲಸಿಕೆದಾರರು ಎಲ್ಲಾ ಗ್ರಾಮಗಳಲ್ಲಿ ಉಚಿತವಾಗಿ ಲಸಿಕೆ ಹಾಕಲಿದ್ದಾರೆ, ರೈತರು ಸಾರ್ವಜನಿಕರು, ಹೈನುಗಾರಿಕೆಯಲ್ಲಿ ತೊಡಗಿರುವವರು ಜಾನುವಾರುಗಳಿಗೆ ಲಸಿಕೆ ಹಾಕಿಸಲು ಸೂಚಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಹರ್ಷಲ್ ಭೋಯರ್ ಅವರು ತಿಳಿಸಿದರು.

ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ರಾಜೀವ್ ಕೂಲೇರ್, ತಾಲೂಕಾ ವೈದ್ಯಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.////

ಜಿಲ್ಲಾ ಪ್ರಾಣಿ ದಯಾ ಸಂಘದ ಜಿಲ್ಲಾ ಸಮಿತಿ ಸಭೆ
—————————————-
ಬೀದಿ ನಾಯಿಗಳ ಸಂತಾನ ನಿಯಂತ್ರಣಕ್ಕೆ ಕ್ರಮ ವಹಿಸಿ: ಜಿ. ಪಂ ಸಿಇಓ ಹರ್ಷಲ್ ಭೋಯರ್

ಪ್ರಸ್ತುತ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ನಾಯಿ ಸಂತಾನ ನಿಯಂತ್ರಣಾ ಕಾರ್ಯಕ್ರಮ ಅನುಷ್ಠಾನಗೊಳಿಸಿದ್ದು, ಇದೇ ರೀತಿಯಲ್ಲಿ ಜಿಲ್ಲೆಯ ಇನ್ನುಳಿದ ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೂಡ ಕಾರ್ಯಕ್ರಮ ಅನುಷ್ಠಾನಗೊಳಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಹರ್ಷಲ್ ಭೋಯರ್ ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ (ಸೆ.20) ನಡೆದ ಜಿಲ್ಲಾ ಪ್ರಾಣಿದಯಾ ಸಂಘದ ಜಿಲ್ಲಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ನಗರಗಳಲ್ಲಿರುವ ಕಸ ವಿಲೇವಾರಿ ಘಟಕಗಳು ಹಾಗೂ ಹೋಟೆಲ್ ಗಳ ಹತ್ತಿರ ಹೆಚ್ಚಾಗಿ ನಾಯಿಗಳು ಕಂಡು ಬರುತ್ತಿದ್ದು, ಸಾರ್ವಜನಿಕರಿಗೆ ಮಕ್ಕಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಇದಕ್ಕೆ ಮಹಾನಗರ ಪಾಲಿಕೆ ವತಿಯಿಂದ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಪ್ರಾಣಿ ದಯಾ ಸಂಘದ ಅಧಿಕಾರೇತರ ಸದಸ್ಯರು ವಿನಂತಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಷಲ್ ಭೋಯರ್ ಅವರು ಸಂಬಂಧಿಸಿದ ನಾಯಿಗಳ ಸಂತಾನ ನಿಯಂತ್ರಣಕ್ಕೆ ಮಾಹಿತಿಗಳನ್ನು ಕಲೆಹಾಕಿ ಕೂಡಲೇ ಸಾರ್ವಜನಿಕರಿಗೆ ಸ್ಪಂದಿಸಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಮಾತನಾಡಿದ ಪಾಲಿಕೆ ಅಧಿಕಾರಿಗಳು ಬೀದಿ ನಾಯಿಗಳ ಸಂತಾನ ನಿಯಂತ್ರಣಕ್ಕೆ ನಗರದಲ್ಲಿ ಪ್ರತಿದಿನ 7 ರಿಂದ 8 ಬೀದಿ ನಾಯಿಗಳನ್ನು ಹಿಡಿಯಲಾಗುತ್ತಿದೆ. ಸಾರ್ವಜನಿಕರ ದೂರಿನ ಅನ್ವಯ ಕೂಡಲೇ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಪುರಸಭೆಗಳ ವ್ಯಾಪ್ತಿಯಲ್ಲಿ ನಾಯಿಗಳ ಸಂತತಿ ನಿಯಂತ್ರಣಕ್ಕೆ ತಾಲೂಕಾ ಮಟ್ಟದಲ್ಲಿ ಕಮಿಟಿ ರಚಿಸಲಾಗಿದೆ. ಡಾಗ್ ಕ್ಯಾಚರ್ಸ್ ಗಳನ್ನು ಕಳುಹಿಸಿ ಪಂಚಾಯತ್ ಗಳಿಗೆ ಸೂಚಿಸುವುದರ ಮೂಲಕ ನಾಯಿಗಳ ಸಂತತಿ ನಿಯಂತ್ರಣಕ್ಕೆ ಕ್ರಮ ವಹಿಸಲಾಗಿದೆ ಎಂದು ಪಶು ಪಾಲನಾ ಇಲಾಖೆಯ ತಾಲೂಕಾ ಸಹಾಯಕ ನಿರ್ದೇಶಕರು ವಿವರಿಸಿದರು.

ಕಳೆದ ವರ್ಷ ಪುಣ್ಯಕೋಟಿ ದತ್ತು ಯೋಜನೆಯಡಿ ಗೋಶಾಲೆಗಳಿಗೆ ಈಗಾಗಲೇ ಪ್ರಸಕ್ತ ಸಾಲಿನ ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಂದು ಸರ್ಕಾರಿ ಗೋಶಾಲೆ ಹಾಗೂ ನೋಂದಣಿಯಾದ ಒಟ್ಟು 14 ಇತರೆ ಸಂಸ್ಥೆಗಳ ಗೋಶಾಲೆಗಳಿವೆ.

ಸರ್ಕಾರಿ ಮಾರ್ಗಸೂಚಿಗಳು ಪ್ರಕಾರ ಒಟ್ಟು 50 ಜಾನುವಾರುಗಳು ಹೊಂದಿರುವ ಗೋಶಾಲೆಗಳ ಮಾತ್ರ ನೋಂದಣಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ರಾಜೀವ್ ಕೂಲೇರ್ ಅವರು ತಿಳಿಸಿದರು.

ಪ್ರಾಣಿ ದಯಾ ಸಂಘದ ಸದಸ್ಯರಾದ ರಾಜೇಂದ್ರ ಕಟಾರಿಯಾ, ಜಿಲ್ಲಾ ನಗರಾಭಿವೃದ್ಧಿ ಯೋಜನಾ ಕೋಶದ ಯೋಜನಾ ನಿರ್ದೇಶಕರಾದ ಮಲ್ಲಿಕಾರ್ಜುನ್ ಕಲಾದಗಿ, ಪಶು ಪಾಲನಾ ಇಲಾಖೆಯ ತಾಲೂಕಾ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.