ಡಿಸಿಎಂ ಮಾಡುವುದು, ಬಿಡುವುದು ಹೈಕಮಾಂಡ ತೀರ್ಮಾನ: ಸಚಿವ ಸತೀಶ್ ಜಾರಕಿಹೊಳಿ..

ಬೆಂಗಳೂರು: ನಾನಾಗಲಿ, ಸಚಿವ ರಾಜಣ್ಣ, ಗೃಹ ಸಚಿವ ಪರಮೇಶ್ವರ್ ಅವರಾಗಲಿ ಡಿಸಿಎಂ ಮಾಡಿ ಎಂದು ಕೇಳುತ್ತಿಲ್ಲ. ಹೈಕಮಾಂಡ್ ಮಾಡಬೇಕೆಂದು ಅಲ್ಲಿ ಒತ್ತಡ ಇದೆ. ನಾವು ವೈಯಕ್ತಿಕವಾಗಿ ಕೇಳುತ್ತಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದ್ದಾರೆ..
ನಗರದಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಸಮುದಾಯದವರನ್ನು ಡಿಸಿಎಂ ಮಾಡಿದ್ದರು. ಹಿಂದೆ ಡಾ. ಜಿ. ಪರಮೇಶ್ವರ್ ಅವರನ್ನ ಮಾಡಿದ್ದರು. ಚುನಾವಣೆ ಮೇಲೆ ಈ ವಿಚಾರ ಪ್ರಭಾವ ಬೀರುವುದಿಲ್ಲ. ಅದನ್ನ ಕೊಟ್ಟರೆ ಎಷ್ಟು ಲಾಭ ಆಗುತ್ತೆ ಎಂದು ಹೇಳುವುದಕ್ಕೆ ಆಗಲ್ಲ ಎಂದಿದ್ದಾರೆ..
ವಿಧಾನಸಭೆ ಚುನಾವಣೆ ಮುನ್ನ ನಾವು ಏನಾಗಿದ್ದೇವು, ಜನ ಪಕ್ಷ ನೋಡಿ ತೀರ್ಮಾನ ಮಾಡುತ್ತಾರೆ. ಸಿಎಂ, ಡಿಸಿಎಂ ಆದರೆ ಜನ ಓಟು ಕೊಡುತ್ತಾರೆ ಎಂದು ಹೇಳುವುದಕ್ಕೆ ಆಗಲ್ಲ. ಡಿಸಿಎಂ ಮಾಡುವುದು, ಬಿಡುವುದು ಹೈಕಮಾಂಡ ತೀರ್ಮಾನ ಮಾಡುತ್ತದೆ. ನಾನೇನು ಆಕಾಂಕ್ಷಿಯಲ್ಲ, ಪಕ್ಷ ಮೊದಲು ತೀರ್ಮಾನ ಮಾಡಬೇಕು. ನಮ್ಮನ್ನು ಕೇಳಿ ಮಾಡುವುದಿಲ್ಲ, ಯಾರು ಮಾಡಬೇಕೆಂದು ಅವರು ತೀರ್ಮಾನ ಮಾಡುತ್ತಾರೆ. ಕಾದು ನೋಡೋಣ, ನಾವು ಆಕಾಂಕ್ಷಿಯಲ್ಲ ಎಂದಿದ್ದಾರೆ..
ಕಾವೇರಿ ಸಮಸ್ಯೆ ಎಲ್ಲ ಸರ್ಕಾರದ ವೇಳೆಯೂ ಬಂದಿದೆ. ಮಾಜಿ ಸಿಎಂ ಗಳಾದ ಹೆಚ್ಡಿ ಕುಮಾರ ಸ್ವಾಮಿ, ಬಸವರಾಜ ಬೊಮ್ಮಾಯಿ ಎಲ್ಲರ ಕಾಲದಲ್ಲೂ ನೀರು ಬಿಟ್ಟಿದ್ದಾರೆ. ಎಲ್ಲರ ಕಾಲದಲ್ಲೂ ಈ ಸಮಸ್ಯೆಯನ್ನ ಅನುಭವಿಸಿದ್ದೇವೆ. ಅವರು ಹೇಗೆ ನೋಡುತ್ತಾರೆ ಹಾಗೆ ಕಾಣುತ್ತೆ. ಅವರು ರಾಜಕೀಯವಾಗಿ ನೋಡಿದರೆ ಹಾಗೆ ಇರುತ್ತೆ. ರಾಜ್ಯದ ದೃಷ್ಟಿಯಿಂದ ಎಲ್ಲರೂ ಒಂದಾಗಿ ನೋಡಬೇಕಾಗುತ್ತೆ. ಕಾವೇರಿ ವಿಚಾರವಾಗಿ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದೇವೆ ಎಂದರು. .
ಎಸ್ಎಂ ಕೃಷ್ಣ ಅವರ ಕಾಲದಲ್ಲಿ ಈ ರೀತಿಯಾದಾಗ, ನೀರು ಬಿಡದಿದ್ದಾಗ ಮುಖ್ಯಮಂತ್ರಿಯವರನ್ನೆ ಹಾಜರಾಗುವಂತೆ ಕೋರ್ಟ್ ಹೇಳಿತ್ತು. ಮಹದಾಯಿ, ಕಾವೇರಿ ಈ ವಿಚಾರವಾಗಿ ಎಲ್ಲರೂ ಒಗ್ಗಟ್ಟಾಗಿ ಪರಿಹಾರ ಕಂಡುಕೊಳ್ಳಬೇಕು. ರೈತರು ಪ್ರತಿಭಟನೆ ಮಾಡುತ್ತಾರೆ, ಅವರಿಗೆ ಹಕ್ಕಿದೆ. ಆದರೆ ಪಕ್ಷಗಳು ಇದರಲ್ಲಿ ರಾಜಕೀಯ ಮಾಡಬಾರದು. ಒಬ್ಬರ ವಿರುದ್ಧ, ಒಬ್ಬರು ಹೋರಾಟ ಮಾಡುವ ಸಂಧರ್ಭ ಅಲ್ಲ ಇದು. ಎಲ್ಲರು ಒಂದೇ ಎಂದು ನೋಡಿದರೆ ಒಳ್ಳೆಯದು ಎಂದು ಹೇಳಿದ್ದಾರೆ..
ಶಾಶ್ವತ ಹೋರಾಟ ಮಾಡಬೇಕು. ಮಳೆ ಕಡಿಮೆ ಇರುವುದರಿಂದ ಸಮಸ್ಯೆ ಉದ್ಭವ ಆಗಿದೆ. ನೀರನ್ನ ತರಲು ಆಗುವುದಿಲ್ಲ, ನೀರನ್ನ ಕಾಯ್ದುಕೊಳ್ಳಬೇಕು. ಮಳೆನೇ ಆಗದಿದ್ದಾಗ ನೀರು ಹೇಗೆ ಬಿಡುವುದು. ಒಂದು ಬೆಳೆಗೆ ಮಾತ್ರ ನೀರನ್ನ ಬಿಟ್ಟಿದ್ದೀವಿ. ಇನ್ನೊಂದು ಬೆಳೆಗೆ ನೀರು ಬಿಡಲು ಆಗುತ್ತಿಲ್ಲ. 8 ತಿಂಗಳು ಕುಡಿಯುವ ನೀರು ಇಟ್ಟುಕೊಳ್ಳಬೇಕು ಎಂದರು..
ಮಂಡ್ಯ ಬಂದ್ ವಿಚಾರವಾಗಿ ಮಾತನಾಡಿದ ಅವರು, ಎಲ್ಲರೂ ಪ್ರತಿಭಟನೆ ಮಾಡಿದ್ದಾರೆ. ರಾಜಕೀಯವಾಗಿ ಬಿಜೆಪಿಯವರು ಪ್ರತಿಭಟನೆ ಮಾಡುತ್ತಾರೆ. ಜೆಡಿಎಸ್‌ನವರು ಪ್ರತಿಭಟನೆ ಮಾಡಿದ್ದಾರೆ. ನಾವು ಸಹ ಪ್ರತಿಭಟನೆ ಮಾಡಿದ್ದೇವೆ. ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಇದನ್ನ ರಾಜಕೀಯವಾಗಿ ನೋಡಬಾರದು ರಾಜ್ಯದ ಹಿತದೃಷ್ಟಿಯಿಂದ ನೋಡಬೇಕು ಎಂದು ಹೇಳಿದ್ದಾರೆ..