Belagavi News In Kannada | News Belgaum

ಬರಗಾಲದ ಹಿನ್ನೆಲೆ, ರೈತರು ಸಂಕಷ್ಟದಲ್ಲಿ ಮೇವು ಬ್ಯಾಂಕ್, ಗೋಶಾಲೆ ಆರಂಭಿಸಿ

ಬರಪೀಡಿತ ತಾಲೂಕುಗಳಿಗೆ ಕೂಡಲೇ ರೂ. 10 ಕೋಟಿ ಬಿಡುಗಡೆಗೊಳಿಸುವಂತೆ ಮಾಜಿ ಮುಖ್ಯಮಂತ್ರಿ ಕಾರಜೋಳ ಆಗ್ರಹ

ಮುಧೋಳ : ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಸಂಪೂರ್ಣವಾಗಿ ವಿಫಲವಾಗಿದೆ. ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಅನುಸರಿಸದೇ ಇರುವುದರಿಂದ ರಾಜ್ಯದ ಒಂದು ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿ ರೈತರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ರೈತರು ರೈತರು ಹಿಡಿಶಾಪ ಹಾಕುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಅವರು ತಮ್ಮ ಗೃಹ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬರಪೀಡಿತ ತಾಲೂಕುಗಳಿಗೆ ಈ ಕೂಡಲೇ ಕನಿಷ್ಠ ರೂ. 10 ಕೋಟಿ ಹಣ ಬಿಡುಗಡೆ ಮಾಡಬೇಕೆಂದು ಅವರು ಸರ್ಕಾರಕ್ಕೆ ಒತ್ತಾಯಿಸಿದರು. ಬರಗಾಲ ಪೀಡಿತ ತಾಲೂಕುಗಳಲ್ಲಿ ಬರಗಾಲ ಕಾಮಗಾರಿ ಆರಂಭಿಸಿ ರೈತರಿಗೆ, ಕೂಲಿಕಾರ್ಮಿಕರಿಗೆ ಉದ್ಯೋಗ ನೀಡಬೇಕು. ರೈತರ ಸಂಪತ್ತು ಹಾಗೂ ಜೀವನಾಡಿಯಾಗಿರುವ ದನಕರುಗಳನ್ನು ಉಳಿಸಲು ಮೇವು ಬ್ಯಾಂಕ್, ಗೋಶಾಲೆಗಳನ್ನು ಆರಂಭಿಸಬೇಕೆಂದು ಆಗ್ರಹಿಸಿದರು..

ರಾಜ್ಯದಲ್ಲಿ 31 ಸಾವಿರ ಮೆ.ವ್ಯಾಟ್ ವಿದ್ಯುತ್ ಉತ್ಪಾದನಾ ಸಾಮಥ್ರ್ಯವಿದ್ದರೂ 7 ರಿಂದ 7.5 ಸಾವಿರ ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ರಾಜ್ಯದಲ್ಲಿ ಸರಾಸರಿ 13 ಸಾವಿರ ಮೆ.ವ್ಯಾಟ್ ವಿದ್ಯುತ್ ಅವಶ್ಯಕತೆ ಇದೆ. ಅವಶ್ಯಕತೆಯ ಅರ್ಧದಷ್ಟು ಉತ್ಪಾದನೆ ಇರುವುದರಿಂದ ವಿದ್ಯುತ್ ಹಾಹಾಕಾರ ಉಂಟಾಗಿದೆ. ರೈತರಿಗೆ ದಿನಕ್ಕೆ ಇನಿಷ್ಠ 7 ಘಂಟೆ ವಿದ್ಯುತ್ ನೀಡಲು ಸಾಧ್ಯವಾಗುತ್ತಿಲ್ಲ. ಇದು ಮುಂದಾಲೋಚನೆ ಇಲ್ಲದ ಸರ್ಕಾರವಾಗಿದೆ.

 

ಕಲ್ಲಿದ್ದಲು ಖರೀದಿಸದೇ ಇರುವುದರಿಂದ ಥರ್ಮಲ್ ವಿದ್ಯುತ್ ಘಟಕದೆ ಉತ್ಪಾದನೆ ಶೇ. 20ರಷ್ಟು ಇಳಿಕೆಯಾಗಿದೆ ಎಂದು ಆರೋಪಿಸಿ ಯಾವ ಯಾವ ಮೂಲದಿಂದ ಹಿಂದೆ ಎಷ್ಟು ವಿದ್ಯುತ್ ಉತ್ಪತ್ತಿಯಾಗುತ್ತಿತ್ತು, ಈಗ ಎಷ್ಟಾಗುತ್ತಿದೆ ಎಂಬುದನ್ನು ಅವರು ವಿವರಿಸಿದರು.

ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾದರೂ ಒಂದೇ ಒಂದು ಅಭಿವೃದ್ಧಿ ಕಾಮಗಾರಿ ಆರಂಭಿಸಿಲ್ಲ. ಎಸ್ಸಿ, ಎಸ್ಟಿ ಜನಾಂಗದವರಿಗೆ ಮೀಸಲಿಟ್ಟ ರೂ. 11144 ಕೋಟಿ ಹಣವನ್ನು ದುರ್ಬಳಕೆ ಮಾಡಲಾಗಿದೆ. ಈ ಜನಾಂಗದ ಶಿಕ್ಷಣ, ಉದ್ಯೋಗ, ಭೂಒಡೆತನ, ನೀರಾವರಿ, ನೇರ ಸಾಲ ಮುಂತಾದವುಗಳಿಗೆ ಈ ಸರ್ಕಾರ ಒಂದೇ ಒಂದು ರೂಪಾಯಿಯನ್ನೂ ನೀಡಿಲ್ಲ. ನಮ್ಮ ಬಿಜೆಪಿ ಸರ್ಕಾರ ತಲಾ ರೂ. 25 ಕೋಟಿ ವೆಚ್ಚದ 200 ವಸತಿ ಶಾಲೆಗಳಿಗೆ ಮಂಜೂರಾತಿ ಹಾಗೂ ಹಣ ಬಿಡುಗಡೆ ಮಾಡಿತ್ತು.

 

ಇದರಲ್ಲಿ ಶೇ.60 ರಷ್ಟು ಪೂರ್ಣಗೊಂಡು ಉದ್ಘಾಟನೆಯಾಗಿದ್ದು ಇನ್ನುಳಿದವುಗಳು ಹಾಗೆ ಇವೆ. ತಲಾ ರೂ.5 ಕೋಟಿ ವೆಚ್ಚದ 180 ಹಾಸ್ಟೇಲ್ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿತ್ತು. ಬಹಳಷ್ಟು ಕಾಮಗಾರಿಗಳು ಸ್ಥಗಿತಗೊಂಡಿವೆ. ನಮ್ಮ ಬಿಜೆಪಿ ಸರ್ಕಾರ ಎಸ್ಸಿ ಜನಾಂಗದವರಿಗೆ ಭೂಒಡೆತನ ಯೋಜನೆಗೆ ಒಂದು ಸಾವಿರ ಕೋಟಿ ಹಣದಲ್ಲಿ 10 ಸಾವಿರ ಎಕರೆ ಭೂಮಿಯನ್ನು

 

8 ಸಾವಿರ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿತ್ತು. ಎಸ್ಟಿ ಜನಾಂಗಕ್ಕೆ ರೂ. 400 ಕೋಟಿ ವೆಚ್ಚದಲ್ಲಿ 5 ಸಾವಿರ ಎಕರೆ ಭೂಮಿಯನ್ನು 4 ಸಾವಿರ ಫಲಾನುಭವಿಗಳಿಗೆ ನೀಡಲಾಗಿದೆ. ಈ ಸರ್ಕಾರ ಒಂದು ಇಂಚು ಭೂಮಿಯನ್ನು ಸಹ ನೀಡಿಲ್ಲ. ಇದು ದಲಿತ ವಿರೋಧಿ ಸರ್ಕಾರವಿದೆ ಎಂದು ಅವರು ದೂರಿದರು.

2012 ರಿಂದ 2018ರವರೆಗೆ ಕಾಂಗ್ರೆಸ್ ಸರ್ಕಾರವಿತ್ತು. ಅವರು ಎಸ್ಸಿ, ಎಸ್ಟಿ ಜನಾಂಗಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಶ್ವೇತಪತ್ರವನ್ನು ಹೊರಡಿಸಲಿ ಎಂದು ಅವರು ಸವಾಲು ಹಾಕಿದರು. ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸಿ ಅಧಿಕಾರಕ್ಕೆ ಬಂದು ಅವರ ಕಣ್ಣೀರು ಒರೆಸಲು ಮುಂದೆ ಬರುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ.

 

ಮುಂದುವರೆಯುತ್ತಿರುವ ಕಾಮಗಾರಿಗಳನ್ನು ಲಂಚಕ್ಕಾಗಿ ಸ್ಥಗಿತಗೊಳಿಸಲಾಗಿದೆ. ವರ್ಗಾವಣೆ ದಂಧೆಯಾಗಿದೆ ಎಂದು ಕಾಂಗ್ರೆಸ್ ಪಕ್ಷದ 41 ಶಾಸಕರೇ ದೂರುತ್ತಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳು ಉತ್ತರಿಸಬೇಕೆಂದು ಅವರು ಆಗ್ರಹಿಸಿದರು.

ಕಾಂಗ್ರೆಸ್ ಸರ್ಕಾರಕ್ಕೆ ಕಾಂಗ್ರೆಸ್ಸಿಗರಿಂದಲೇ ಅಪಾಯವಿದೆ ಎಂಬುದನ್ನು ಮುಖ್ಯಮಂತ್ರಿ ಮನವರಿಕೆ ಮಾಡಿಕೊಂಡು ಸರಿದಾರಿಗೆ ತರದಿದ್ದರೇ ಅಪಾಯ ತಪ್ಪಿದ್ದಲ್ಲ. ಮೂರು ಡಿಸಿಎಂ ಹುದ್ದೆಯ ಬೇಡಿಕೆ ತಲೆಯೆತ್ತಿ ನಿಂತಿದೆ. ಹಲಾವರು ಸಚಿವರು, ಶಾಸಕರು ಇದಕ್ಕೆ ಸಹಮತ ವ್ಯಕ್ತಪಡಿಸುತ್ತಿದ್ದಾರೆ.

 

ಇದೆಲ್ಲ ಡಿಸಿಎಂ ಡಿ.ಕೆ.ಶಿವಕುಮಾರ ಅವರನ್ನು ಕಟ್ಟಿ ಹಾಕುವ ತಂತ್ರ ಎಂದು ಸಿಎಂ ಸುತ್ತ ಇರುವ ಬುದ್ಧಿಜೀವಿಗಳು ಹೇಳುತ್ತಿದ್ದಾರೆ. ಸರ್ಕಾರಕ್ಕೆ ತಮ್ಮ ಸ್ವಪಕ್ಷ ಕಾಂಗ್ರೆಸ್ಸಿನಿಂದಲೇ ಅಪಾಯವಿದೆ. ಬಿಜೆಪಿ ಏನಾದರೂ ಸರ್ಕಾರ ಬೀಳಿಸುವ ಯೋಚನೆ ಇದೆಯಾ ಎಂಬ ಪ್ರಶ್ನೆಗೆ ಹಾಲು ಕುಡಿದು ಸಾಯುವವರಿಗೆ ವಿಷ ಹಾಕುವ ಅಗತ್ಯ ಇಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ 25 ಸಂಸದರು ಬಿಜೆಪಿಯಿಂದ ಆಯ್ಕೆಯಾಗಲಿದ್ದಾರೆ. ಬಾಗಲಕೋಟೆ ಹಾಗೂ ವಿಜಯಪುರದಿಂದ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗುವುದು ಖಚಿತ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಗ್ರಾಮೀಣ ಅಧ್ಯಕ್ಷ ಹಣಮಂತ ತುಳಸಿಗೇರಿ, ಬಿಜೆಪಿ ಮುಖಂಡ ಕೆ.ಆರ್.ಮಾಚಪ್ಪನವರ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಬಸವರಾಜ ಮಳಲಿ, ಸೋನಾಪ್ಪಿ ಕುಲಕರ್ಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.