Belagavi News In Kannada | News Belgaum

ಕೆಂಭಾವಿ ತಾಲೂಕು ಘೋಷಣೆಗೆ ಒತ್ತಾಯ ಜನತಾ ದರ್ಶನದಲ್ಲಿ ಹಲವು ಬೇಡಿಕೆಗಳಿಗೆ ಆಗ್ರಹ

ಕೆಂಭಾವಿ: ಜಿಲ್ಲಾ ಕೇಂದ್ರ ಯಾದಗಿರಿಯಲ್ಲಿ ಸೋಮವಾರ ನಡೆದ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ರವರ ಜನತಾ ದರ್ಶನ ಕಾರ್ಯಕ್ರಮದಲ್ಲಿ ಪಟ್ಟಣದ ಹಿರೇಮಠದ ಪೀಠಾಧಿಪತಿ ಚನ್ನಬಸವ ಶಿವಾಚಾರ್ಯರ ನೇತೃತ್ವದಲ್ಲಿ ಕೆಂಭಾವಿ ತಾಲೂಕು ಹೋರಾಟ ಸಮೀತಿ ಹಾಗೂ ಸಾಮೂಹಿಕ ಸಂಘಟನೆಗಳ ಒಕ್ಕೂಟದ ವತಿಯಿಂದ ಕೆಂಭಾವಿ ತಾಲೂಕು ಘೋಷಣೆ ಸೇರಿದಂತೆ ಹಲವು ಬೇಡಿಕೆಗಳ ಇಡೇರಿಕೆಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ವ್ಯಾಪ್ತಿಯಲ್ಲಿ ನೂರಾರು ಎಕರೆ ಸರಕಾರಿ ಜಮೀನು ಅಲ್ಲದೇ ಸುಸಜ್ಜಿತ ಕಟ್ಟಡಗಳು ಇವೆ. 2015 ರಲ್ಲಿ ಪಟ್ಟಣ ಪುರಸಭೆಯಾಗಿ ಮೇಲ್ದರ್ಜೆಗೇರಿದೆ, ಈಗಾಗಲೆ ಅದೆಷ್ಟೋ ಪಟ್ಟಣ ಪಂಚಾಯತ್, ಗ್ರಾಮ ಪಂಚಾಯತಗಳನ್ನು ಅರ್ಹತೆ ಇಲ್ಲದಿದ್ದರೂ ತಾಲೂಕು ಕೇಂದ್ರಗಳಾಗಿ ಘೋಷಣೆ ಮಾಡಲಾಗಿದೆ. ಕೆಂಭಾವಿ ಹೋಬಳಿಯಲ್ಲಿ ಸುಮಾರು 46 ಕ್ಕೂ ಅಧಿಕ ಗ್ರಾಮಗಳು 8 ಗ್ರಾಮ ಪಂಚಾಯತಿಗಳು ಸೇರಿದಂತೆ 1 ಲಕ್ಷ 30 ಸಾವಿರ ಜನಸಂಖ್ಯೆ ಹೊಂದಿರುವ ಶಹಪುರ ವಿಧಾನಸಭೆಯ ನಿರ್ಣಾಯಕ ಕ್ಷೇತ್ರವಾಗಿದೆ. ಪದವಿ, ಪದವಿ ಪೂರ್ವ, ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳು ಖಾಸಗಿ ಹಾಗೂ ಸರಕಾರಿ ಸೇರಿಂದತೆ 20 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಇದ್ದು ಶೈಕ್ಷಣಿಕವಾಗಿ ಮುಂಚುಣಿಯಲ್ಲಿರುತ್ತದೆ. ನ್ಯಾಯಾಲವು‌ಕೂಡ ತಾಲೂಕು ಪುನರಚನೆಯ ಎಲ್ಲಾ ವರದಿಗಳನ್ನು ಪರಿಶೀಲಿಸಿ ಕೆಂಭಾವಿಯು ತಾಲೂಕು ಕೇಂದ್ರವಾಗಲು ಅರ್ಹತೆ ಇದ್ದರೂ ಘೋಷಣೆ ಮಾಡದಿರುವುದಕ್ಕೆ ಸೂಕ್ತ ವರದಿ ಸಲ್ಲಿಸುವಂತೆ ಸರಕಾರಕ್ಕೆ ಆದೇಶಿಸಿದೆ. ಹೀಗಿದ್ದು, ಹಲವು ದಶಕಗಳ ನಿರಂತ ಹೋರಾಟವಿದ್ದರೂ ಕೆಂಭಾವಿ ತಾಲೂಕು ಕೇಂದ್ರದ ಕುರಿತು ಆಶ್ವಾಸನೆ ಸಿಗುತ್ತಿದೆಯೆ ಹೊರತು ಘೋಷಣೆಯಾಗುತ್ತಿಲ್ಲ. ಮುಂಬರುವ ಅಧಿವೇಶನದಲ್ಲಿ ಕೆಂಭಾವಿ ಪಟ್ಟಣವನ್ನು ತಾಲೂಕು ಘೋಷಣೆ ಮಾಡುವುದರ ಮೂಲಕ ಈ ಭಾಗದ ಜನತೆಗೆ ಅನುಕೂಲ ಮಾಡಿಕೊಡಬೇಂದು ಅಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಹಿರೇಮಠದ ಪೀಠಾಧಿಪತಿ ಚನ್ನಬಸವ ಶಿವಾಚಾರ್ಯರು, ಮಡಿವಾಳಪ್ಪ ಹೆಗ್ಗಣದೊಡ್ಡಿ, ಬಂದೇನವಾಜ್ ನಾಲ್ತವಾಡ್, ಶಂಕರ ಸೇರಿದಂತೆ ಇತರರು ಇದ್ದರು.

ಮೇಲ್ದರ್ಜೆಗೆ‌ ಒತ್ತಾಯ

ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆರಂಭವಾಗಿ ಎರಡು ದಶಕಗಳು ಕಳೆದರೂ ಇನ್ನೂವರೆಗೂ ಪದವಿ ಪೂರ್ವ ಕಾಲೇಜಾಗಿ ಮೇಲ್ದರ್ಜೇಗೇರಿಲ್ಲ. ಕಾಲೇಜು ಸ್ಥಾಪನೆಗೆ ಬೇಕಾದ ಎಲ್ಲಾ ಮೂಲಭುತ ಸೌಕರ್ಯಗಳು ಇಲ್ಲಿದ್ದು,  ಎಲ್ಲಾ ವರ್ಗದ ಮಕ್ಕಳ‌ ಕಲಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ವಸತಿ ಶಾಲೆಯನ್ನು ಪದವಿ ಪೂರ್ವ ಕಾಲೇಜನ್ನಾಗಿ ಮೇಲ್ದರ್ಜೇಗೆ ತರುವಂತೆ ಒತ್ತಾಯಿಸಲಾಗಿದೆ. ಜತೆಗೆ ಇಲ್ಲಿನ ಸರಕಾರಿ ಆಸ್ಪತ್ರೆ ಸುಸಜ್ಜಿತ 30 ಹಾಸಿಗೆಯ ಕಟ್ಟಡವಿದ್ದು, ನಿತ್ಯ 300ಕ್ಕೂ ಅಧಿಕ ಹೊರ ರೋಗಿಗಳು, ನಿತ್ಯ ಐದಾರು ಹೆರಿಗೆಗಳು, ಆಫಘಾತ, ವಿಷಪ್ರಾಶನ ಸೇರಿದಂತೆ ಹತ್ತಾರು ಒಳ ರೋಗಿಗಳ ಒತ್ತಡದಲ್ಲಿ ವೈದ್ಯಾಧಿಕಾರಿಗಳು ಸೇರಿದಂತೆ ಸಾಕಷ್ಟು ಸಿಬ್ಬಂದಿ ಕೊರತೆ ಎದುರಿಸುವಂತಾಗಿದೆ, ಅಲ್ಲದೇ ಇನ್ನೂ ಈ ಆಸ್ಪತ್ರೆ ಪ್ರಾಥಮಿಕ ಆಸ್ಪತ್ರೆಯಾಗಿಯೇ ಮುಂದುವರಿದಿದ್ದು ಸಮುದಾಯ ಆರೋಗ್ಯ ಕೇಂದ್ರವೆಂದು ಮೇಲ್ದರ್ಜೆಗೇರಿಸಿ ಸೂಕ್ತ ಸಿಬ್ಬಂದಿ ಒದಗಿಸುವಂತೆ ಆಗ್ರಹಿಸಲಾಗಿದೆ.