ವೈಜ್ಞಾನಿಕ ಯೋಗಕ್ಕೆ ನಮ್ಮನ್ನು ಸಾಮರ್ಥ್ಯಗೊಳಿಸುವ ಶಕ್ತಿ ಇದೆ: ಸ್ವಾಮಿ ಶ್ರೇಯಾನಂದ

ಬೆಳಗಾವಿ: “ಕ್ರಿಯಾ ಎಂಬುದು ಪ್ರಾಚೀನವಾದ ಒಂದು ವಿಜ್ಞಾನ. ಅದನ್ನು ಲಾಹಿರೀ ಮಹಾಶಯರು ತಮ್ಮ ಮಹಾನ್ ಗುರುಗಳಾದ ಬಾಬಾಜಿಯವರಿಂದ ಪಡೆದರು. ಅಂಧಕಾರದ ಯುಗಗಳಲ್ಲಿ ಅಡಗಿಹೋಗಿದ್ದ ಅದನ್ನು ಬಾಬಾಜಿಯವರು ಪುನಸ್ಸಂಶೋಧಿಸಿ ಹೊರತೆಗೆದು ಅದರ ತತ್ವವನ್ನು ಸ್ಪಷ್ಟಪಡಿಸಿ ಕ್ರಿಯಾಯೋಗವೆಂದು ಅದಕ್ಕೆ ಸರಳ ನಾಮಕರಣ ಮಾಡಲಾಗಿದೆ ಎಂದು ಲಾಹಿರಿ ಮಹಾಶಯರ ಬಗ್ಗೆ ಹಾಗೂ ಕ್ರಿಯಾಯೋಗದ ಮಹತ್ವದ ಬಗ್ಗೆ ಯೋಗದಾ ಸತ್ಸಂಗ ಆಶ್ರಮದ ಸನ್ಯಾಸಿ ಸ್ವಾಮಿ ಶ್ರೇಯಾನಂದ ಸ್ವಾಮೀಜಿ ತಿಳಿಸಿದರು.
ಬೆಳಗಾವಿಯಲ್ಲಿ ಮಂಗಳವಾರ ( ಸೆ 26) ರಂದು ಯೋಗದಾ ಸತ್ಸಂಗ ಧ್ಯಾನ ಮಂಡಳಿಯಲ್ಲಿ ಆಯೋಜಿಸಲಾದ ಪರಮ ಗುರು ಲಾಹಿರಿ ಮಹಾಶಯರ ಮಹಾ ಸಮಾಧಿ ಸ್ಮರಣಾ ದಿನದ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿ,
“ಈ ಹತ್ತೊಂಬತ್ತನೆಯ ಶತಮಾನದಲ್ಲಿ ನಿನ್ನ ಮೂಲಕ ನಾನು ಪ್ರಪಂಚಕ್ಕೆ ಕೊಡುತ್ತಿರುವ ಈ ಕ್ರಿಯಾಯೋಗವೆಂಬುದು ಸಹಸ್ರಾರು ವರ್ಷಗಳ ಹಿಂದೆ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ವಿಜ್ಞಾನದ ಪುರುಜ್ಜೀವನವಷ್ಟೆ; ಅದೇ ಆ ನಂತರ ಪತಂಜಲಿ, ಮತ್ತಿತರ ಶಿಷ್ಯರ ತಿಳಿವಳಿಕೆಗೆ ಬಂದಿದೆ” ಎಂದು ಬಾಬಾಜಿಯವರು ಲಾಹಿರಿ ಮಹಾಶಯರಿಗೆ ಹೇಳಿದರು.
ಶಿಷ್ಯನ ಸಮಸ್ಯೆ ಏನೇ ಆಗಿರಲಿ, ಅದಕ್ಕೆ ಪರಿಹಾರವಾಗಿ ಲಾಹಿರಿ ಮಹಾಶಯರು ಕ್ರಿಯಾಯೋಗವನ್ನು ಶಿಫಾರಸು ಮಾಡುತ್ತಿದ್ದರು. ಕ್ರಿಯಾಯೋಗದ ಶಕ್ತಿ ಹಾಗೂ ಸಾಮರ್ಥ್ಯದ ಬಗ್ಗೆ ವಿವರಿಸುತ್ತಾ ಲಾಹಿರಿ ಮಹಾಶಯರು ಈ ರೀತಿ ನುಡಿದಿದ್ದಾರೆ:
“ನಿಮಗೆ ಮಾರ್ಗದರ್ಶನ ನೀಡಲು ನಾನು ದೇಹದೊಡನೆ ಇಲ್ಲದಿದ್ದಾಗ್ಯೂ ಯೋಗಾಭ್ಯಾಸದ ಕೀಲಿಕೈ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುವುದಿಲ್ಲ. ಕೇವಲ ತತ್ವಾಧಾರದ ಸ್ಫೂರ್ತಿಗಳ ರೀತಿಯಲ್ಲಿ ಈ ತಂತ್ರವನ್ನು ಕಟ್ಟಿಹಾಕಿ, ಫೈಲುಮಾಡಿ, ಮರೆಯಲು ಸಾಧ್ಯವಿಲ್ಲ. ‘ಕ್ರಿಯಾ’ದ ಮೂಲಕ ನಿಮ್ಮ ಮುಕ್ತಿಮಾರ್ಗದಲ್ಲಿ ನೀವು ನಿರಂತರವಾಗಿ ಮುಂದುವರಿಯಿರಿ. ‘ಕ್ರಿಯಾ’ದ ಶಕ್ತಿಯಿರುವುದೇ ಅದರ ಅನುಷ್ಠಾನದಲ್ಲಿ.”
ದೇವತ್ವಕ್ಕೆ ಹಿಂತಿರುಗುವ ಯತ್ನದಲ್ಲಿ ತೊಡಗಿರುವ ಧ್ಯಾನಪರವಾದ ಮನಸ್ಸನ್ನು ಪ್ರಾಣಶಕ್ತಿ ಪ್ರವಾಹಗಳು ಸರ್ವದಾ ಇಂದ್ರಿಯಗಳ ಕಡೆಗೆ ಸೆಳೆಯುತ್ತಿರುತ್ತವೆ. ಪ್ರಾಣಶಕ್ತಿಯ ಮೂಲಕ ನೇರವಾಗಿ ಮನಸ್ಸನ್ನು ನಿಯಂತ್ರಿಸುವ ಕ್ರಿಯಾಯೋಗವೇ ಅನಂತತೆಯನ್ನು ಸೇರಲು ಇರುವ ಅತ್ಯಂತ ಸುಲಭವಾದ, ಅತ್ಯಂತ ಪರಿಣಾಮಕಾರಿಯಾದ ಮತ್ತು ಅತ್ಯಂತ ವೈಜ್ಞಾನಿಕವಾದ ಮಾರ್ಗ. “ಈ ವಿಶ್ವಕ್ಕೆ ಭಾರತದ ಕೊಡುಗೆ ಬೇರಾವುದೂ ಇಲ್ಲದಿದ್ದರೂ ಕ್ರಿಯಾಯೋಗವೊಂದೇ ರಾಜೋಚಿತ ಕೊಡುಗೆಯಾಗಲು ಸಾಕು” ಎಂದು ಪರಮಹಂಸ ಯೋಗಾನಂದರು ತಮ್ಮ ಆಧ್ಯಾತ್ಮಿಕ ಕೃತಿಯಾದ ಯೋಗಿಯ ಆತ್ಮಕಥೆಯಲ್ಲಿ ಬರೆದಿದ್ದಾರೆ ಎಂದು ಸ್ವಾಮೀಜಿಯವರು ಹೇಳಿದರು.
ಯೋಗಿಯ ಆತ್ಮಕಥೆಯ ಇ ಬುಕ್ ಕಳೆದವಾರ ಸ್ವಾಮೀಜಿಯವರಿಂದ ಬಿಡುಗಡೆಯಾಗಿದೆ. ಅದು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಬುಕ್ ಸ್ಟೋರ್ ನಲ್ಲಿ ಲಭ್ಯವಿದೆ.
ಬೆಳಗಾವಿ ಯೋಗದಾ ಸತ್ಸಂಗ ಧ್ಯಾನ ಮಂಡಳಿಯ ನೂತನ ಧ್ಯಾನ ಮಂದಿರದ ಐದನೇ ವಾರ್ಷಿಕೋತ್ಸವವೂ ಇದೇ ಕಾರ್ಯಕ್ರಮದೊಂದಿಗೆ ಆಚರಿಸಲಾಯಿತು. ಸ್ವಾಮೀಜಿಯವರು ಸಮೂಹ ಧ್ಯಾನದ ಮಹತ್ವವನ್ನು ತಿಳಿಸಿಕೊಟ್ಟರು.
ಧ್ಯಾನ ಕೇಂದ್ರದ ವ್ಯವಸ್ಥಾಪನಾ ಸಮಿತಿಯ ಶ್ರೀ ಶಶಿಕಾಂತ ಚುನಮರಿಯವರು ಸ್ವಾಮೀಜಿಯವರನ್ನು ಸ್ವಾಗತಿಸಿದರು ಹಾಗೂ ಎಲ್ಲರಿಗೂ ಸಮೂಹಧ್ಯಾನಕ್ಕೆ ಬರುವಂತೆ ಕರೆಕೊಟ್ಟರು.