ನಿಯೋಜನೆಗೊಂಡ ಪೊಲೀಸರಿಗೆ ನೀಡಿದ ಊಟದಲ್ಲಿ ಇಲಿ ಪತ್ತೆ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ನಗರದಾದ್ಯಂತ ಪೊಲೀಸ್ ಬಿಗಿಬಂದೋಬಸ್ತ್ ಮಾಡಲಾಗಿದೆ..
ಪ್ರತಿಭಟನೆಯ ಭದ್ರತೆಗೆ ನಿಯೋಜನೆ ಮಾಡಿದ ಪೊಲೀಸರಿಗೆ ಹೋಟೆಲ್‌ನಿಂದ ತಿಂಡಿ ಸರಬರಾಜು ಮಾಡಲಾಗಿದ್ದು, ಪೊಲೀಸರಿಗೆ ನೀಡಿದ ತಿಂಡಿಯಲ್ಲಿ ಸತ್ತ ಇಲಿ ಪತ್ತೆಯಾಗಿದೆ. ಮಂಗಳವಾರ ಬೆಳಗ್ಗೆ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭದ್ರತೆಗೆ ನಿಯೋಜಿಸಲಾಗಿದ್ದ ಯಶವಂತಪುರ ಟ್ರಾಫಿಕ್ ಪೊಲೀಸರಿಗೆ ತಂದಿದ್ದ ಉಪಾಹಾರದಲ್ಲಿ ಸತ್ತ ಇಲಿ ಪತ್ತೆಯಾಗಿದೆ. ಪೊಲೀಸ್ ಇಲಾಖೆಯಿಂದ ಸರಬರಾಜು ಮಾಡಿದ ಊಟದ ಪ್ಯಾಕೆಟ್ ತೆರೆದಾಗ ಅದರಲ್ಲಿ ಇಲಿ ಕಂಡುಬಂದಿದೆ. ಈ ಫೋಟೋ ಈಗ ಎಲ್ಲೆಡೆ ವೈರಲ್ ಆಗಿದೆ..
ಪೊಲೀಸ್ ಸಿಬ್ಬಂದಿಗೆ ನೀಡಿದ ಊಟದಲ್ಲಿ ಇಲಿ ಇರುವ ವಿಚಾರ ತಿಳಿದು ಸಂಚಾರಿ ವಿಭಾಗ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಗರಂ ಆಗಿದ್ದಾರೆ. ಊಟ ಸಪ್ಲೈ ಮಾಡಿದ ಯಶವಂತಪುರ ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಒಂದು ದಿನದ ಊಟಕ್ಕೆ ಸರ್ಕಾರ 200 ರೂಪಾಯಿ ಕೊಡುತ್ತದೆ. ಆದರೆ ಗುಣಮಟ್ಟದ ಊಟ ಯಾಕೆ ಕೊಟ್ಟಿಲ್ಲ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ..
ಇನ್ನು ಅಶೋಕ್ ಟಿಫಿನ್ ಸೆಂಟರ್‌ನಿಂದ ಉಪಹಾರ ಸಪ್ಲೈ ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ಅಶೋಕ್ ಟಿಫಿನ್ ಸೆಂಟರ್ ಒಟ್ಟು 180 ಊಟ ನೀಡಿದೆ ಎನ್ನಲಾಗಿದೆ. ಸತ್ತ ಇಲಿ ಇರುವ ಊಟ ನೀಡಿರುವ ಬಗ್ಗೆ ಪೊಲೀಸ್ ಸಿಬ್ಬಂದಿ ಆಕ್ರೋಶಗೊಂಡಿದ್ದಾರೆ..