ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ: ಮುಖ್ಯ ಶಿಕ್ಷಕನ ಪೊಲೀಸರ ವಶಕ್ಕೆ

ಗದಗ: 5ನೇ ತರಗತಿ ವಿದ್ಯಾರ್ಥಿನಿ ಮೇಲೆ ಮುಖ್ಯ ಶಿಕ್ಷಕ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕೇಳಿಬಂದಿರುವ ಘಟನೆ ಜಿಲ್ಲೆಯ ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ..
ಸರ್ಕಾರಿ ಉರ್ದು ಶಾಲೆಯ 5ನೇ ತರಗತಿ ವಿದ್ಯಾರ್ಥಿನಿಗೆ ಅಲ್ಲಿಯ ಮುಖ್ಯ ಶಿಕ್ಷಕನಿಂದ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಶಾಲಾ ಅವಧಿ ಮುಗಿದ ನಂತರ ಮುಖ್ಯ ಶಿಕ್ಷಕ ವಿದ್ಯಾರ್ಥಿನಿಯನ್ನು ತನ್ನ ಕಚೇರಿಗೆ ಕರೆಸಿಕೊಳ್ಳುತ್ತಿದ್ದ..
ಶನಿವಾರ ಸಹ ಮನೆಗೆ ತಡವಾಗಿ ಹೋಗುವಂತೆ ಹೇಳಿ ತನ್ನ ಆಫೀಸ್‌ಗೆ ಕರೆದು ಲೈಂಗಿಕ ಕಿರುಕುಳ ನೀಡಿದ್ದ. ಈ ವಿಷಯ ಮನೆಯವರಿಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆಯನ್ನು ಸಹ ಹಾಕಿದ್ದ ಎಂದು ಆರೋಪಿಸಲಾಗಿದೆ..
ಇದಾದ ಬಳಿಕ ಬಾಲಕಿ ಇನ್ಮುಂದೆ ಶಾಲೆಗೆ ಹೋಗುವುದಿಲ್ಲ ಎಂದು ಮನೆಯವರ ಬಳಿ ಅಳುತ್ತಾ ಹೇಳಿದ್ದಾಳೆ. ಈ ಬಗ್ಗೆ ಪೋಷಕರು ಯಾಕೆ, ಏನು ಎಂದು ವಿಚಾರಿಸಿದಾಗ ಮುಖ್ಯ ಶಿಕ್ಷಕನ ಕಾಮ ಪುರಾಣವನ್ನು ಬಾಲಕಿ ಬಿಚ್ಚಿಟ್ಟಿದ್ದಾಳೆ..
ನಂತರ ಬಾಲಕಿಯ ಕುಟುಂಬಸ್ಥರು ಸಹಾಯವಾಣಿ ಮೂಲಕ ಮಕ್ಕಳ ರಕ್ಷಣಾ ಘಟಕಕ್ಕೆ ದೂರು ಸಲ್ಲಿಸಿದ್ದಾರೆ. ದೂರಿನ ಅನ್ವಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ..
ಈ ಬಗ್ಗೆ ಎಫ್‌ಐಆರ್ ದಾಖಲಿಸಿಕೊಂಡು ಮುಖ್ಯ ಶಿಕ್ಷಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.