Belagavi News In Kannada | News Belgaum

ಸರಕಾರಕ್ಕೆ ಶೀಘ್ರ ಖಾನಾಪುರ ತಾಲ್ಲೂಕುಗಳ ಬರ ಪರಿಸ್ಥಿತಿ, ಬೆಳೆಹಾನಿ ಪರಿಶೀಲನೆ ವಿಶೇಷ ವರದಿ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಬೆಳಗಾವಿ-ಖಾನಾಪುರ ತಾಲ್ಲೂಕುಗಳ ಬರ ಪರಿಸ್ಥಿತಿ, ಬೆಳೆಹಾನಿ ಪರಿಶೀಲನೆ

ಬೆಳಗಾವಿ, ಸೆ.27 : ಮಳೆ ಕೊರತೆಯಿಂದಾಗಿ ಬೆಳಗಾವಿ ಹಾಗೂ ಖಾನಾಪುರ ತಾಲ್ಲೂಕಿನಲ್ಲಿ ಉಂಟಾಗಿರುವ ಬೆಳೆಹಾನಿ ಹಾಗೂ ಬರ ಪರಿಸ್ಥಿತಿಯನ್ನು ಸಮಗ್ರವಾಗಿ ಪರಿಶೀಲನೆ ನಡೆಸಲಾಗಿದ್ದು, ಈ ಕುರಿತು ಸರಕಾರಕ್ಕೆ ಕೂಡಲೇ ವಿಶೇಷ ವರದಿಯನ್ನು ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಖಾನಾಪುರ ಹಾಗೂ ಬೆಳಗಾವಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಬುಧವಾರ(ಸೆ.27) ಭೇಟಿ ನೀಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ ಅವರು ಮಳೆಕೊರತೆಯಿಂದ ಉಂಟಾದ ಹಾನಿಯನ್ನು ಖುದ್ದಾಗಿ ವೀಕ್ಷಿಸಿದ ಬಳಿಕ ಈ ವಿಷಯ ತಿಳಿಸಿದರು.

ಈ ಸಂದರ್ಭದಲ್ಲಿ ಭತ್ತ, ಸೋಯಾಬಿನ್, ಆಲೂಗಡ್ಡೆ, ಗೆಣಸು, ಕ್ಯಾಬೇಜ್, ಶೇಂಗಾ ಮತ್ತಿತರ ಬೆಳೆಹಾನಿ ಹಾಗೂ ಮೇವಿನ ಕೊರತೆಯ ಕುರಿತು ರೈತರಿಂದಲೇ ಮಾಹಿತಿಯನ್ನು ಪಡೆದುಕೊಂಡರು.

ಬೆಳಗಾವಿ ತಾಲ್ಲೂಕಿನ ತಾರಿಹಾಳ ಗ್ರಾಮದ ರಾಮಲಿಂಗ ಭೀಮಣ್ಣ ನಾಯಕ ಅವರ ಮೂರು ಎಕರೆ ಭತ್ತದ ಬೆಳೆ ಹಾನಿಯನ್ನು ಪರಿಶೀಲಿಸಿದರು.
ಸೋಮನಿಂಗ ಕಣಗಾಂವಕರ ಅವರ ಜಮೀನಿನಲ್ಲಿ ಸೋಯಾಬಿನ್ ಬೆಳೆಹಾನಿಯನ್ನು ವೀಕ್ಷಿಸಿದರು.
ಸ್ಥಳದಲ್ಲಿ ಉಪಸ್ಥಿತರಿದ್ದ ರೈತರು, ಬೆಳೆ ಸಂಪೂರ್ಣ ಹಾಳಾಗಿದೆ. ವಾತಾವರಣ ತಂಪಾಗಿರುವುದರಿಂದ ತೇವಾಂಶ ಕಂಡುಬರುತ್ತಿದೆ. ಆದರೆ ಇಳುವರಿ ಬರುವುದಿಲ್ಲ ಎಂದು ವಿವರಿಸಿದರು.

ಅದೇ ರೀತಿ ಮಾರುತಿ ಗೌಂಡವಾಡಕರ ಜಮೀನಿನಲ್ಲಿ ಆಲೂಗಡ್ಡೆ ಹಾಗೂ ಸೋಯಾಬಿನ್ ಬೆಳೆ ಹಾನಿಯನ್ನು ವೀಕ್ಷಿಸಿದರು. ಪ್ರತಿ ಎಕರೆಗೆ ಏಳೆಂಟು ಟನ್ ಆಲೂಗಡ್ಡೆ ಇಳುವರಿ ಬರುತ್ತದೆ. ಆದರೆ ಮಳೆ ಕೊರತೆಯಿಂದ ಬೆಳೆಹಾನಿಯಾಗಿದ್ದು, ಅತ್ಯಂತ ಕಡಿಮೆ ಇಳುವರಿ ಬರಲಿದೆ ಎಂದು ಗ್ರಾಮಸ್ಥರು ತಿಳಿಸಿದರು.
ನಂತರ ಚಂದನ ಹೊಸೂರ ಗ್ರಾಮದ ಹದ್ದಿಯಲ್ಲಿ ಅಣ್ಷಪ್ಪ ಪಾಟೀಲ ಅವರ ಜಮೀನಿನಲ್ಲಿ ಕ್ಯಾಬೇಜ್ ಬೆಳೆ ಹಾನಿಯಾಗಿರುವುದನ್ನು ಜಿಲ್ಲಾಧಿಕಾರಿಗಳು ವೀಕ್ಷಿಸಿದರು.

ಖಾನಾಪುರ ತಾಲ್ಲೂಕಿನಲ್ಲಿ ಪರಿಶೀಲನೆ:

ಇದಕ್ಕೂ ಮುಂಚೆ ಖಾನಾಪುರ ತಾಲ್ಲೂಕಿನ ಕೌಂದಲ, ಲಾಲವಾಡಿ, ಜಂಜವಾಡ ಕೆ.ಎನ್., ಬೀಡಿ, ಭೂರಣಕಿ, ಮಂಗೇನಕೊಪ್ಪ, ಕೇರವಾಡಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿಯೂ ಕೂಡ ಭತ್ತ, ಸೋಯಾಬಿನ್, ಗೆಣಸು ಮತ್ತಿತರ ಬೆಳೆಹಾನಿ ಮತ್ತು ಮೇವಿನ ಕೊರತೆಯನ್ನು ಪರಿಶೀಲಿಸಿದರು.

ಈ ಎರಡೂ ತಾಲ್ಲೂಕುಗಳಲ್ಲಿ ಬೆಳೆಹಾನಿಯ ಸಮಗ್ರ ಸಮೀಕ್ಷೆ ಕೈಗೊಂಡು ಸಮಗ್ರ ಮಾಹಿತಿಯನ್ನು ಒದಗಿಸುವಂತೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಿವನಗೌಡ ಪಾಟೀಲ ಅವರು, ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕಿನಲ್ಲಿ ಬೆಳೆಹಾನಿಯ ಕುರಿತು ಮಾಹಿತಿಯನ್ನು ನೀಡಿದರು.
ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಹಾಂತೇಶ ಮುರಗೋಡ, ತೋಟಗಾರಿಕೆ ಬೆಳೆಯ ಬಗ್ಗೆ ವಿವರಿಸಿದರು.
ಮಳೆ ಕೊರತೆಯಿಂದ ಎರಡೂ ತಾಲ್ಲೂಕುಗಳಲ್ಲಿ ಮೇವಿನ ಕೊರತೆ ಕೂಡ ಉಂಟಾಗಲಿದೆ ಎಂದು ಪಶುವೈದ್ಯಕೀಯ ಮತ್ತು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಡಾ.ರಾಜೀವ್ ಕೂಲೇರ್ ತಿಳಿಸಿದರು.

ಬೆಳಗಾವಿ ತಾಲ್ಲೂಕಿನಲ್ಲಿ ಮುಂಗಾರು ಮಳೆಯ ಪ್ರಮಾಣ ಶೇ.38 ರಷ್ಟು ಕೊರತೆಯಾಗಿದೆ. ಆದಾಗ್ಯೂ ಶೇ.99 ರಷ್ಟು ಭಿತ್ತನೆಯಾಗಿರುತ್ತದೆ.
ಅದೇ ರೀತಿ ಖಾನಾಪುರ ತಾಲ್ಲೂಕಿನಲ್ಲಿ ಶೇ.8ರಷ್ಟು ಕೊರತೆಯಾಗಿರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಬೆಳಗಾವಿ ಮತ್ತು ಖಾನಾಪುರ ಎರಡೂ ತಾಲ್ಲೂಕಿನಲ್ಲಿ ಮಳೆಕೊರತೆಯಿಂದ ಉಂಟಾಗಿರುವ ಬೆಳೆಹಾನಿಯನ್ನು ಪರಿಶೀಲನೆ ನಡೆಸಲಾಗಿದೆ. ಈ ಕುರಿತು ಸರಕಾರಕ್ಕೆ ವಿಶೇಷ ವರದಿಯನ್ನು ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಈ ಸಂದರ್ಭದಲ್ಲಿ ರೈತರಿಗೆ ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಶಿವನಗೌಡ ಪಾಟೀಲ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಹಾಂತೇಶ ಮುರಗೋಡ, ಪಶುವೈದ್ಯಕೀಯ ಮತ್ತು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಡಾ.ರಾಜೀವ್ ಕೂಲೇರ್, ಬೆಳಗಾವಿ ತಹಶೀಲ್ದಾರ ನಾಗರಾಳ ಮತ್ತಿತರರು ಉಪಸ್ಥಿತರಿದ್ದರು.