ಗುಜರಿಗೆ ಹಾಕ್ಬೇಕಿದ್ದ ಸಾರಿಗೆ ಬಸ್‌ಗಳಲ್ಲಿ ಬೆಳಗಾವಿ ಜನತೆ ಸಂಚಾರ..! ದೂರದಿಂದ ಮಾತ್ರ ಹೊಳಪು ಒಳಗೆಲ್ಲ ಕೊಳಕು

ಬೆಳಗಾವಿ: ಹಿಂದೆ ಸಾರಿಗೆ ಇಲಾಖೆ ಬಸ್‌ಗಳು ಎಂದರೆ ಸಾಕು, ಜನ ಎಲ್ಲವೂ ಸರಿಯಾಗಿರುತ್ತದೆ ಎಂದು ಭಾವಿಸುವುದುಂಟು! ಆದರೆ ಸದ್ಯವಿರುವ ಬೆಳಗಾವಿ ಹಾಗೂ ಚಿಕ್ಕೋಡಿ ಸಾರಿಗೆ ಇಲಾಖೆ ಬಸ್‌ಗಳ ಪರಿಸ್ಥಿತಿ ನೋಡಿದರೆ ಈ ಬಸ್‌ಗಳು ತಾಂತ್ರಿಕ ವಿಭಾಗಗಕ್ಕೆ ಹೋಗತ್ತವೆಯೋ ಇಲ್ಲವೋ ಎಂಬ ಸಂಶಯ ಮೂಡಿಸುತ್ತಿವೆ.
ಹೌದು…ಬೆಳಗಾವಿಯಲ್ಲಿ 566, ಚಿಕ್ಕೋಡಿಯಲ್ಲಿ 620 ಬಸ್‌ಗಳಿದ್ದು, ಇವುಗಳಲ್ಲಿ ಬೆರಳೆನಕೆಯಷ್ಟು ಬಸ್ಸಗಳು ಮಾತ್ರ ಉತ್ತಮ ಸೀತಿಯಲ್ಲಿದ್ದು, ಬಾಕಿ ಬಸ್ಗಳು ಗುಜರಿ ಸೇರುವ ಸ್ಥಿತಿಯಲ್ಲಿವೆ. ಆದರೆ ಇಲ್ಲಿ ಮುಖ್ಯವಾಗಿ ಸಂಚರಿಸುವ ಗುಜರಿ ಬಸ್‌ಗಳು ಎಷ್ಟರ ಮಟ್ಟಿಗೆ ಸುರಕ್ಷಿತವಾಗಿವೆ ಎಂದು ಸ್ವತಃ ಪ್ರಯಾಣಿಕರೇ ಪರೀಕ್ಷಿಸಿ ಬಸ್ ಹತ್ತುವ ಪರಿಸ್ಥಿತಿ ಇಲ್ಲಿನ ಪ್ರಯಾಣಿಕರಿಗೆ ಎದುರಾಗಿದೆ.
ಬಸ್ಸಿನಲ್ಲಿವೆ ಅನೇಕ ಲೋಪದೋಷಗಳು: ಇಲ್ಲಿನ ಸಾರಿಗೆ ಬಸ್‌ಗಳು ನೋಡಲು ದೂರದಿಂದ ಮಾತ್ರ ಹೊಳಪು ಕಾಣಿಸುತ್ತಿದ್ದು, ಆರೇ ವ್ಹಾ ಎಂಥ ಬಸ್! ಎಂದು ಎಲ್ಲರೂ ಹೆಬ್ಬೇರುಸುವಂತೆ ಬಣ್ಣ ಮಾಡಲಾಗಿದೆ. ಆದರೆ ಒಳಗೆ ಮಾತ್ರ ಎಲ್ಲೆಂದರಲ್ಲಿ ಗಲೀಜು, ಹೀಗೆ ನಾನಾ ಸಮಸ್ಯೆ ಹೊಂದಿರುವ ಬಸ್‌ಗಳನ್ನು ದೂರಿನಿಂದಲ್ಲದೇ ಸಮಿಪದಿಂದ ನೋಡಿದರೆ ಮಾತ್ರ ಬಸ್ಸಿನಲ್ಲಿರುವ ಲೋಪದೋಷಗಳು ಕಣ್ಣಿಗೆ ಭೀಕರವಾಗಿ ಕಾಣಲಾರಂಭಿಸುತ್ತಿವೆ ಎಂದು ಪ್ರಯಾಣಿಕರ ಆರೋಪಿಸುತ್ತಿದ್ದಾರೆ.
ಪಲ್ಟಿ ಹೊಡೆಯುತ್ತಿವೆ ಗುಜರಿ ಬಸ್‌ಗಳು: ಬೆಳಗಾವಿ ಜಿಲ್ಲೆಯನ್ನು ಎರಡನೇ ರಾಜಧಾನಿ ಎನಿಸಿಕೊಂಡಿದ್ದು, ಜಿಲ್ಲೆಯ ವಿವಿಧೆಡೆ ಇಲ್ಲಿರುವ ಸಾರಿಗೆ ಬಸ್ ಗಳು ಪಲ್ಟಿ ಹೊಡೆದು ಪ್ರಯಣಿಕರ ನಿದ್ದೆಗೆಡುವಂತೆ ಮಾಡುತ್ತಿವೆ. ಅದಕ್ಕೆ ತಾಜಾ ಉದಾಹರಣೆ ಎಂಬಂತೆ ನಿನ್ನೆ ಚಿಕೊಪ್ಪ ಗ್ರಾಮದಿಂದ ರಾಮದುರ್ಗ ಕಡೆ ಬರುವ ಸಾರಿಗೆ ಬಸ್ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಈ ಘಟನೆಯಲ್ಲಿ 20ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಇಬ್ಬರು ಶಿಕ್ಷಕರ ಕೈ ಮುರಿದಿದೆ. ಕಳೆದ ದಿನಗಳ ಹಿಂದೆಯೇ ಬೆಳಗಾವಿ-ಕೆ.ಕೆ.ಕೊಪ್ಪ ನಡುವೆ ಸಂಚರಿಸುವ ಬಸ್ ಸುವರ್ಣ ವಿಧಾನಸೌಧದ ಬಳಿ ರಸ್ತೆ ಪಕ್ಕ ಮಗುಚಿದ ಪರಿಣಾಮ ಬಸ್ಸಿನಲ್ಲಿದ್ದವರು ಗಾಯಗೊಂಡಿದ್ದರು. ಅಲ್ಲದೇ ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಸುಮಾರು 35 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಸಾರಿಗೆ ಬಸ್, ಬ್ರೇಕ್ ಹಾಳಾದ ಹಿನ್ನಲೆಯಲ್ಲಿ ಹಳ್ಳದ ದಂಡೆಗೆ ಉರುಳಿಬಿದ್ದು, ಪ್ರಯಾಣಿಕರಿಗೆ ಗಾಯಗಳಾಗಿದ್ದವು.ಇಂತಹ ಅಹಿತಕರ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಜಾನಮೌನಕ್ಕೆ ಶರಣಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ.
ನಿರ್ಲಕ್ಷ್ಯ ಯಾಕೆ?: ಸಾರಿಗೆ ಬಸ್ಗಳು 9 ಲಕ್ಷ ಕಿ.ಮೀ ಸಂಚರಿಸಿದರೆ ಬಸ್ ಗುಜರಿಗೆ ಹಾಕಬೇಕೆಂಬ ಕಾನೂನು ಇದೆ. ಆದರೆ ಬೆಳಗಾವಿ ವಿಭಾಗವೊಂದರಲ್ಲೇ 10 ಲಕ್ಷ ಕಿ.ಮೀಗೂ ಹೆಚ್ಚು ಓಡಿದ ಅನೇಕ ಬಸ್‌ಗಳಿವೆ. ನಗರ ಹಾಗೂ ಗ್ರಾಮೀಣ ಭಾಗ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಸಂಚರಿಸುವ ಬಸ್ಸುಗಳು ಅಲ್ಲಲ್ಲಿ ಮುಗುಚಿ ಬಿದ್ದಿರುವ ಉದಾಹರಣೆಗಳು ಸಾಕಷ್ಟಿವೆ. ಆದರೂ ಕೆಲವು ಬಸ್ಸುಗಳು ತಾಂತ್ರಿಕವಾಗಿ ದೋಷ ಹೊಂದಿದರೂ ಬಸ್ಗಳಿಗೆ ಸಾರಿಗೆ ಸಂಚಾರ ಪರವಾಣಿಗೆ ನೀಡುವುದು ಯಾವ ಕಾರಣಕ್ಕೆ ಎಂಬುವುದು ತಿಳಿಯುತ್ತಿಲ್ಲ. ವರ್ಷಕ್ಕೊಮ್ಮೆ ಆರ್ ಟಿಒ ಅಧಿಕಾರಿಗಳು ಪರವಾಣಿಗೆ ಮರು ನೋಂದಣಿ ಮಾಡುವಾಗ ಇಂತಹ ಬಸ್‌ಗಳ ಬಗ್ಗೆ ಗಮನ ಹರಿಸಬೇಕು. ಆದರೆ ನಿರ್ಲಕ್ಷ್ಯ ಮನೋಭಾವದಿಂದಾಗಿ ಬಸ್‌ಗಳು ಈವರೆಗೂ ಸುಧಾರಣೆ ಕಂಡಿಲ್ಲ. ಇನ್ನದಾರೂ ಸಾರಿಗೆ ಅಧಿಕಾರಿಗಳು ಇಂತಹ ಗುಜರಿ ಬಸ್‌ಗಳ ಕಡೆ ಗಮನ ಹರಿಸಿ ಮುಂದಾಗುವ ದುರ್ಘಟನೆ ಬಗ್ಗೆ ಎಚ್ಚರ ವಹಿಸಲು ಮುಂದಾಗಬೇಕು ಎಂದು ಹಿರಿಯ ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಕ್ರಮ ಎಂದು? ಬೆಂಗಳೂರಿಗೆ ಬೆಣ್ಣೆ, ಬೆಳಗಾವಿಗೆ ಸುಣ್ಣ ಎಂಬ ನಡೆಯನ್ನು ಸರ್ಕಾರ ಮಾಡುತ್ತಿದ್ದು, ಎರಡನೇ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬೆಳಗಾವಿಗೆ ಗುಜರಿ ಬಸ್ಗಳನ್ನು ನೀಡಿ ರಾಜ್ಯ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ. ಅಲ್ಲದೇ ಸಾರಿಗೆ ಅಧಿಕಾರಿಗಳು ಹಳೆ ಬಸ್ ಅನ್ನು 1 ಲಕ್ಷ ರೂಪಾಯಿಗೆ ಖರೀದಿಸಿ ಹೊಸ ಬಣ್ಣ ಬಳಿದು ಓಡಾಡಿಸುತ್ತಿದ್ದಾರೆ. ಈಗಾಗಲೇ ಕೆಲವು ಬಸ್ಗಳು ನಡು ರಸ್ತೆಯಲ್ಲಿ ಕೆಟ್ಟು ನಿಲ್ಲುತ್ತಿರುವುದು ಅಧಿಕಾರಿಗಳ ಬೇಜವಾಬ್ದಾರಿ ನಡೆಗೆ ಕಾರಣವಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಬ್ರೇಕ್ -ಲೈಟ್ ಗಳ ಸಮಸ್ಯೆ: ಗ್ರಾಮೀಣ ಪ್ರದೇಶದಲ್ಲಿ ಸಂಚರಿಸುವ ಬಸ್ಗಳಲ್ಲಿ ತಾಂತ್ರಿಕ ಸಮಸ್ಯೆ ಹೇಳತಿರದಾಗಿದೆ. ಹಲವು ಬಸ್ಗಳಲ್ಲಿ ಬ್ರೇಕ್ ಲೈಟುಗಳು ಚಾಲನೆಯಲಿಲ್ಲ.. ಪರಿನಾಮ ಬಸ್ ಹಿಂದೆ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕಿಡಾದ ಉದಾಹರಣೆಗಳಿವೆ. ಈ ಸಮಸ್ಯೆ ಹಲವು ಬಾರಿ ಜಗಳಕ್ಕೆ ಕಾರಣವಾಗುತ್ತಿವೆ. ಮುಖ್ಯವಾಗಿ ಸಾರಿಗೆ ಇಲಾಖೆ ನೀಡಿರುವ ಬಸ್‌ಗಳಲ್ಲಿ ಗ್ರಾಮೀಣ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳೇ ಸಂಚಾರ ಮಾಡುತ್ತಾರೆ. ಬಸ್‌ಗಳಲ್ಲಿ ಏನಾದರೂ ಅನಾಹುತ ಆದರೆ ಯಾರು ಹೊಣೆ? ಹೀಗಾಗಿ ಅಪಘಾತ ಸಂಭವಿಸುವ ಮುನ್ನ ಸಾರಿಗೆ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.
ನಮ್ಮಲ್ಲಿ ದಿನನಿತ್ಯ ಒಟ್ಟು 520 ಬಸ್ಗಳು ಗ್ರಾಮೀಣ ಹಾಗೂ ನಗರಕ್ಕೆ ಸಂಚರಿಸುತ್ತಿವೆ. ಸಾರಿಗೆ ಬಸ್ಗಳು 9 ಲಕ್ಷ ಕಿ.ಮೀ ಸಂಚರಿಸಿದರೆ ಬಸ್ ಗುಜರಿಗೆ ಹಾಕಬೇಕೆಂಬ ಕಾನೂನು ಇದೆ. ಆದರೆ 10 ಲಕ್ಷ ಕಿ.ಮೀಗೂ ಹೆಚ್ಚು ಸಂಚರಿಸಿದ 10 ಬಸ್ ಗಳನ್ನು ಗುಜರಿಗೆ ಹಾಕಲಾಗಿದೆ. ತಾಂತ್ರಿಕ ಸಮಸ್ಯೆಗಳಿರುವ ಬಸ್ಗಳತ್ತ ಹೆಚ್ಚು ಗಮನ ಹರಿಸಲಾಗುವುದು. ಇನ್ನೂ ಶೀಘ್ರವೇ ಬೆಳಗಾವಿಯ ಜನತೆ ಹೀತದೃಷ್ಟಿಯಿಂದ ನೂತನ ವಿದ್ಯುತ್ ಚಾಲಿತ ಬಸ್ ಗಳನ್ನು ನೀಡಲು ಸಾರಿಗೆ ಇಲಾಖೆ ಮುಂದಾಗಿದೆ.
*ಗಣೇಶ ರಾಠೋಡ್ . ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ
ನಿತ್ಯ ಇತರ ಕೆಲಸಗಳಿಗೆಂದೆ ಬಸ್ಸಿನಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ನಮಗಿದೆ. ಆದರೆ ಬೆಳಗಾವಿಯಲ್ಲಿ ಸ್ಮಾಟ್ ಸಿಟಿ ಮಾಡಲಾಗಿದೆ ಎಂದು ಬಿಂಬಿಸಿಕೊಳ್ಳುತ್ತಿರುವ ಜನಪ್ರತಿನಿಧಿಗಳು ಗ್ರಾಮೀಣ ಭಾಗಕ್ಕೆ ಸಂಚರಿಸುತ್ತಿರುವ ಗುಜರಿ ಬಸ್ಸುಗಳತ್ತ ನೋಡಬೇಕಿದೆ. ಅಲ್ಲಲ್ಲಿ ಈ ಡಕೋಟಾ ಬಸುಗಳು ನಿಯಂತ್ರನ ತಪ್ಪಿ ಪಲ್ಟಿ ಹೊಡೆಯುತ್ತಿರುವದನ್ನು ನೋಡಿ ನಿತ್ಯ ಸಂಚರಿಸುವ ನಾವುಗಳು ಏದುಸಿರು ಬಿಡುವಂತಾಗಿದೆ.
*ನವೀನ ಬೆಂಡಿಗೇರಿ, ಪ್ರಯಾಣಿಕ