Belagavi News In Kannada | News Belgaum

ಮಹರ್ಷಿ ವಾಲ್ಮೀಕಿ ಜಯಂತಿ ವಿಜೃಂಭಣೆಯಿಂದ ಆಚರಣೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಪೂರ್ವಭಾವಿ ಸಭೆ: ಅಗತ್ಯ ಸಿದ್ಧತೆಗೆ ಸೂಚನೆ

ಬೆಳಗಾವಿ ಸೆ.27 : ಸರ್ಕಾರದ ನಿರ್ದೇಶನದ ಅನ್ವಯ ಪ್ರತಿವರ್ಷದಂತೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಅಕ್ಟೋಬರ್ 28 ರಂದು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು..
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ (ಸೆ.27) ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು..
ಜಯಂತಿ ಆಚರಣೆಯ ದಿನ ಬೆಳಿಗ್ಗೆ 10.30 ಗಂಟೆಗೆ ಕೋಟೆ ಕೆರೆ ಆವರಣದಿಂದ ಸಂಗೊಳ್ಳಿ ರಾಯಣ್ಣ ವೃತ್ತದ ಮಾರ್ಗವಾಗಿ ನಗರದ ಕುಮಾರ ಗಂಧರ್ವ ಕಲಾ ಮಂದಿರದವರೆಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಭವ್ಯ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ. .
ಹತ್ತು ಕಲಾ ತಂಡಗಳು ಭಾಗವಹಿಸಲಿದ್ದು, ಕುಂಭ ಮೇಳ, ಸ್ತ್ರೀ ಸಂಘಗಳು, ಸ್ವ ಸಹಾಯ ಸಂಘಗಳ ಸದಸ್ಯರು ಪಾಲ್ಗೊಳ್ಳಲು ಸಿದ್ಧತೆಗೆ ಮಾಡಿಕೊಳ್ಳಬೇಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಮಹಾನಗರ ಪಾಲಿಕೆ ವತಿಯಿಂದ ನಗರದ ಪ್ರಮುಖ ವೃತ್ತಗಳಲ್ಲಿ ವಾಲ್ಮೀಕಿಯವರ ಭಾವಚಿತ್ರಗಳು ಹಾಗೂ ಅವರ ಕುರಿತು ಶ್ಲೋಕಗಳ ಪೋಸ್ಟರ್, ಬ್ಯಾನರ್ ಗಳನ್ನು ಅಳವಡಿಸುವುದರ ಜೊತೆಗೆ ದೀಪಾಲಂಕಾರ ಮಾಡಬೇಕು ಎಂದು ಸಮಾಜದ ಮುಖಂಡರು ಮನವಿ ಮಾಡಿಕೊಂಡರು.
ಮಹಾನಗರ ಪಾಲಿಕೆಯ ಎಲ್. ಇ.ಡಿ ವಾಹನಗಳ ಮೂಲಕ ಪ್ರಚಾರ ಕೈಗೊಳ್ಳಲಾಗುವುದು. ಜಿಲ್ಲೆಯ ವಿವಧೆಡೆಯಿಂದ ಬರುವ ಜನರಿಗೆ ವಾಹನ ನಿಲುಗಡೆ ವ್ಯವಸ್ಥೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಅವರ ಕುರಿತ ಸಮಗ್ರ ಜ್ಞಾನವಿರುದ ಉಪನ್ಯಾಸಕರನ್ನು ವಿಶೇಷ ಉಪನ್ಯಾಸಕ್ಕಾಗಿ ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ಸುಮಾರು 10 ಸಾವಿರ ಜನರಿಗೆ ಕುಡಿಯುವ ನೀರು ಹಾಗೂ ಊಟದ ವ್ಯವಸ್ಥೆ ಮಾಡಲಾಗುವುದು. ಅದೇ ರೀತಿಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.
ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಆಸನ ಹಾಗೂ ವೇದಿಕೆ ಕಾರ್ಯಕ್ರಮದ ಸಿದ್ಧತೆ ಮಾಡಿಕೊಳ್ಳಲು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು. ಇತಿಹಾಸದ ಮಹಾನ್ ಪುರುಷರ ಹೆಸರುಗಳನ್ನು ವೇದಿಕೆಗೆ ನಾಮಕರಣ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.
ವಾಲ್ಮೀಕಿ ಜಯಂತಿ ಕಡ್ಡಾಯ ಆಚರಣೆಗೆ ಕಟ್ಟುನಿಟ್ಟಿನ ಕ್ರಮ:
ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಸರಕಾರದ ಮಾರ್ಗಸೂಚಿ ಪ್ರಕಾರ ಕಡ್ಡಾಯವಾಗಿ ಜಯಂತಿಯನ್ನು ಆಚರಿಸಬೇಕು. ಇದಲ್ಲದೇ ಎಲ್ಲ ಸರಕಾರಿ, ಖಾಸಗಿ ಶಾಲಾ-ಕಾಲೇಜುಗಳಲ್ಲಿ ಕೂಡ ಸರಕಾರದ ನಿರ್ದೇಶನದಂತೆ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲು ಸೂಚನೆ ನೀಡಬೇಕು ಎಂದು ಮಲ್ಲೇಶ ಚೌಗಲೆ ಸೇರಿದಂತೆ ಎಲ್ಲರೂ ಒಕ್ಕೊರಲಿನಿಂದ ಒತ್ತಾಯಿಸಿದರು.
ಈ ಕುರಿತು ಶೀಘ್ರವೇ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ ವತಿಯಿಂದ ಲಿಖಿತ ಆದೇಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಹೇಳಿದರು.
ಎಲ್ಲ ಗ್ರಾಮ ಪಂಚಾಯತಿ, ಶಾಲೆಗಳು, ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಮಹರ್ಷಿ ವಾಲ್ಮೀಕಿ ಅವರ ಛಾಯಾಚಿತ್ರಕ್ಕೆ ಪೂಜೆ ಸಲ್ಲಿಸಿ, ಜಯಂತಿ ಆಚರಣೆಗೆ ಸೂಚಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಹರ್ಷಲ್ ಭೋಯರ್ ಅವರು ತಿಳಿಸಿದರು.
ಜಿಲ್ಲೆಯ ಎಲ್ಲಾ ಸರ್ಕಾರಿ ಇಲಾಖೆಗಳು, ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜು ಸೇರಿದಂತೆ ತಾಲೂಕು, ಗ್ರಾಮ ಪಂಚಾಯತಿ ಮಟ್ಟದಲ್ಲಿ ಜಯಂತಿ ಆಚರಣೆ ಲಿಖಿತವಾಗಿ ಸೂಚನೆ ನೀಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಜಯಂತಿಯಲ್ಲಿ ಪಾಲ್ಗೊಳ್ಳಲಿದ್ದು, ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ವೈದ್ಯಕೀಯ ಸೇವೆ, ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಅದೇ ರೀತಿಯಲ್ಲಿ ಜಯಂತಿ ಆಚರಣೆಗೆ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು, ಪದವಿಪೂರ್ವ ವಿದ್ಯಾರ್ಥಿಗಳು ಹಾಜರಿರಲು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಎಂದು ಸೂಚಿಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಹಾಗೂ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಗಳು ಮತ್ತು ಅವುಗಳ ವ್ಯಾಪ್ತಿಯ ಕಾಲೇಜುಗಳಲ್ಲಿ ಕೂಡ ಜಯಂತಿಯನ್ನು ಆಚರಿಸಲು ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದರು.
ವಾಲ್ಮೀಕಿ ಭವನ ನಿರ್ಮಾಣಕ್ಕೆ ಕ್ರಮ:
ನಗರದಲ್ಲಿ ಸುಸಜ್ಜಿತವಾದ ಶ್ರೀ ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣ ಮಾಡಬೇಕು ಎಂದು ಸಮಾಜದ ಮುಖಂಡರು ಸಲಹೆ ನೀಡಿದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಐದು ಕೋಟಿ ರೂಪಾಯಿ ವೆಚ್ಚದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಸಮಾಜದ ಮುಖಂಡರ ಸಲಹೆಯಂತೆ ಕನಿಷ್ಠ ಒಂದು ಎಕರೆ ಜಾಗೆ ಗುರುತಿಸಿ ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಭವನ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಹೇಳಿದರು.
ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಹಾನಗರ ಪಾಲಿಕೆ ಆಯುಕ್ತರಾದ ಅಶೋಕ ದುಡಗುಂಟಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರ ಲಕ್ಷ್ಮಣ ಬಬಲಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ ಕುರಿಹುಲಿ,
ಸಮಾಜದ ಮುಖಂಡರಾದ ರಾಜಶೇಖರ್ ತಳವಾರ, ಭಾವಕಣ್ಣಾ ಬಂಕ್ಯಾಗೋಳ, ಯಲ್ಲಪ್ಪ ಕೋಳೇಕರ, ಮಹಾದೇವ ತಳವಾರ, ವಿಜಯ್ ತಳವಾರ, ಸುಶೀಲಾ ದಡ್ಡಿಕರ, ಡಾ. ಕವಿತಾ ಕುಸುಗಲ್, ಬಾಳೇಶ ದಾಸನಟ್ಟಿ, ಮಹೇಶ್ ಶಿಗಿಹಳ್ಳಿ, ಯಲ್ಲಪ್ಪ ಕೋಳೆಕರ್, ಯಲ್ಲಪ್ಪ ಬುಡ್ರಿ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.