Belagavi News In Kannada | News Belgaum

ಹುಕ್ಕೇರಿಯಲ್ಲಿ ಹಳ್ಳ ಹಿಡಿದ ಜಲಜೀವನ ಮಿಷನ್..!

ಅಧಿಕಾರಿ-ಗುತ್ತಿಗೆದಾರರಿಂದ ನಿಧಾನವೇ ಪ್ರಧಾನ ನೀತಿ ಆರೋಪ

ಹುಕ್ಕೇರಿ: ಗ್ರಾಮೀಣ ಭಾಗದ ಜನತೆಗೆ ದಿನದ 24 ಗಂಟೆ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿರುವ ಜಲಜೀವನ ಮಿಷನ್ ಯೋಜನೆ(ಜೆಜೆಎಂ)ಯು ಹುಕ್ಕೇರಿ ತಾಲೂಕಿನಲ್ಲಿ ಕುಂಟುತ್ತಾ ಸಾಗಿದೆ..

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪವಿಭಾಗದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷö್ಯದಿಂದ ಮೂಲ ಉದ್ದೇಶ ಮಣ್ಣು ಪಾಲಾಗಿದೆ. ಅನುದಾನ ಕೊಳ್ಳೆ ಹೊಡೆಯುವ ಕುಳಗಳ ಪಾಲಿಗೆ ಅಕ್ಷಯ ಪಾತ್ರೆಯಂತಾಗಿ ಪರಿಣಮಿಸಿದ್ದು ಯೋಜನೆ ಸಂಪೂರ್ಣ ಹಳ್ಳ ಹಿಡಿದಿದೆ..

ಮನೆ ಮನೆಗೆ ಗಂಗೆ ಘೋಷವಾಕ್ಯದಡಿ ಪ್ರತಿ ಮನೆಗೆ ನೀರು ಪೂರೈಸುವ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಜಲಜೀವನ ಮಿಷನ್ ಅಡಿ ಎರಡು ವರ್ಷದ ಹಿಂದೆ ಕೈಗೆತ್ತಿಕೊಂಡ ಯೋಜನೆಯ ಮೊದಲ ಹಂತದ ಕಾಮಗಾರಿಗಳು ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ..

ಜೆಜೆಎಂ ಯೋಜನೆ ರಸ್ತೆ ಮತ್ತು ಚರಂಡಿಗಳಿಗೆ ಕಂಟಕವಾಗಿ ಪರಿಣಮಿಸಿದೆ. ಕಾಮಗಾರಿಗಳಿಗೆ ಬಳಸುತ್ತಿರುವ ಸಾಮಗ್ರಿಗಳು ಕಳಪೆಯಾಗಿದ್ದರೂ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಇದು ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಂತಿದೆ..

ಇಲಾಖೆಯ ದಾಖಲೆಗಳ ಪ್ರಕಾರ 2020-21 ನೇ ಸಾಲಿನಲ್ಲಿ ಹುಕ್ಕೇರಿ ತಾಲೂಕಿನಲ್ಲಿ ಮೊದಲ ಹಂತದಲ್ಲಿ ಕೈಗೆತ್ತಿಕೊಂಡ 188 ಕಾಮಗಾರಿಗಳ ಪೈಕಿ 176 ಪೂರ್ಣಗೊಂಡಿದ್ದು ಇನ್ನುಳಿದವು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ. ಒಟ್ಟು 52094 ಮನೆಗಳ ನಳ ಸಂಪರ್ಕ ಪೈಕಿ  45000 ಸಂಪರ್ಕಗಳನ್ನು ಕಲ್ಪಿಸಲಾಗಿದ್ದು 7094 ನಳ ಸಂಪರ್ಕ ಬಾಕಿ ಇವೆ. ಕಾಯ್ದಿರಿಸಿದ್ದ 75 ಕೋಟಿ ರೂ ಅನುದಾನದಲ್ಲಿ ಇದುವರೆಗೆ 48 ಕೋಟಿ ರೂ ಮಾತ್ರ ಖರ್ಚಾಗಿದೆ..

ಅಧಿಕಾರಿ ಮತ್ತು ಗುತ್ತಿಗೆದಾರರ ನಡುವಿನ ಒಳಒಪ್ಪಂದದಿAದ ಸಾರ್ವಜನಿಕರು ಶುದ್ಧ ನೀರಿಗಾಗಿ ಕಾಯುವಂತಾಗಿದೆ. ಜತೆಗೆ ಈ ಕಾಮಗಾರಿ ಜನತೆಗೆ ಅನುಕೂಲ ಆಗುವ ಬದಲು ಅನಾನುಕೂಲ ಆಗಿದೆ. ಕೆಲ ಹಳ್ಳಿಗಳಲ್ಲಿ ಅರೆಬರೆ ಕಾಮಗಾರಿ ಮಾಡಿ ಬಿಲ್ ಎತ್ತುವಳಿ ಮಾಡಲಾಗಿದೆ ಎಂಬ ದೂರುಗಳು ಸಾಮಾನ್ಯವಾಗಿವೆ..

ರಸ್ತೆ, ಚರಂಡಿಗೆ ಕಂಟಕ: ಯೋಜನೆ ಅನುಷ್ಠಾನ ಮಾಡುವಾಗ ಕಿತ್ತು ಹಾಕಿದ ಚರಂಡಿ, ರಸ್ತೆಗಳನ್ನು ಪುನಃ ಗುತ್ತಿಗೆದಾರರು ನಿರ್ಮಿಸಬೇಕೆಂಬ ನಿಯಮವಿದೆ. ಆದರೆ, ಕೆಲವು ಕಡೆಗಳಲ್ಲಿ ಗುತ್ತಿಗೆದಾರರು ರಸ್ತೆ ರಿಪೇರಿ ಮಾಡಿಲ್ಲ. ಪೈಪ್ ಹಾಕಲು ಕಿತ್ತ ರಸ್ತೆ ಹಾಗೆಯೇ ಉಳಿದಿದ್ದು ರಸ್ತೆಗಳ ಮಧ್ಯೆ ಗಲೀಜು ನೀರು ಹರಿಯುತ್ತಿದೆ. ಕೆಲ ಓಣಿಗಳಲ್ಲಿ ಪೈಪ್ ಹಾಕಲಾಗಿದೆ. ಆದರೆ, ಸಂಪರ್ಕ ಕೊಟ್ಟಿಲ್ಲ. ಇನ್ನು ಕೆಲ ಓಣಿಗಳಲ್ಲಿ ಪೈಪ್ ಹಾಕುವ ಕೆಲಸ ಬಾಕಿ ಉಳಿದಿದೆ..

ಕೆಲ ರಸ್ತೆಗಳ ನಡುವೆ ಕಸಕಡ್ಡಿ ಬೆಳೆದು ವಿಷ ಜಂತುಗಳ ಆವಾಸ ಸ್ಥಾನವಾಗಿ ಬದಲಾಗಿವೆ. ಗ್ರಾಮಸ್ಥರು ಬಳಸಿದ ಹೊಲಸು ನೀರು ರಸ್ತೆಯ ಮಧ್ಯದಲ್ಲಿಯೇ ಹರಿಯುತ್ತಿದೆ. ಇಷ್ಟೆಲ್ಲಾ ಅವಾಂತರ ಆದರೂ ಕೂಡ ಗುತ್ತಿಗೆದಾರರು ಮಾತ್ರ ಕೆಲಸ ಮುಗಿಸುವ ಗೋಜಿಗೆ ಹೋಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ..


ನಿಧಾನವೇ ಪ್ರಧಾನ:
ಯೋಜನೆ ಅನುಷ್ಠಾನದಲ್ಲಿ ನಿಧಾನವೇ ಪ್ರಧಾನ ಎಂಬ ಪರಿಸ್ಥಿತಿ ಇರುವುದರಿಂದ ಗ್ರಾಮೀಣ ಭಾಗದ ನಿವಾಸಿಗಳಿಗೆ, ಸರ್ಕಾರಿ ಶಾಲೆ, ಅಂಗನವಾಡಿಗಳಿಗೆ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಗುರಿಗೆ ಸಾಕಷ್ಟು ಹಿನ್ನಡೆಯಾಗುತ್ತಿದೆ. ಜತೆಗೆ ಗ್ರಾಮೀಣ ಭಾಗದ ಮೂಲಭೂತ ಸೌಕರ್ಯವಾದ ಮಳೆನೀರು ಕೌಯ್ಲು, ಜಲಮರುಪೂರಣ ಘÀಟಕ ಮತ್ತು ದ್ರವ ಮತ್ತು ಘನ ತ್ಯಾಜ್ಯ ವಿಲೇವಾರಿ ಕಾಮಗಾರಿಗಳನ್ನು ಒಗ್ಗೂಡಿಸುವಿಕೆ ಕಾರ್ಯವೂ ಹಿಂದುಳಿದಿದೆ..

ಸಚಿವ, ಶಾಸಕರ ಅಸಮಾಧಾನ:  ಜೆಜೆಎಂ ಯೋಜನೆ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬಕ್ಕೆ ಸಚಿವ ಸತೀಶ ಜಾರಕಿಹೊಳಿ, ಶಾಸಕ ನಿಖಿಲ್ ಕತ್ತಿ ಅವರು ಹುಕ್ಕೇರಿ ಕೆಡಿಪಿ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ನಿಗದಿತ ಅವಧಿಯಲ್ಲಿ ಗುಣಮಟ್ಟದೊಂದಿಗೆ ಪೂರ್ಣಗೊಳಿಸಲು ಸೂಚಿಸಿದ್ದರು. ಆದರೆ, ಸಚಿವ, ಶಾಸಕರ ಸೂಚನೆಗೂ ಬಗ್ಗದ ಅಧಿಕಾರಿ-ಗುತ್ತಿಗೆದಾರರು ಕಳಪೆ ಕಾಮಗಾರಿಯೊಂದಿಗೆ ಅರ್ಧಂಬರ್ಧ ಕೆಲಸ ಮಾಡಿದ್ದಾರೆ ಎಂಬುದು ಸಾರ್ವಜನಿಕರು ದೂರಿದ್ದಾರೆ..