ಜಾರಿ ಬಿದ್ದ ಮೀರಾಬಾಯಿ ಚಾನು: ಕಂಚಿನ ಪದಕದಿಂದಲೂ ವಂಚಿತ

ಹ್ಯಾಂಗ್‌ಝೂ: ಮೀರಾಬಾಯಿ ಚಾನು ಅವರ ಏಷ್ಯಾಡ್ ಅಭಿಯಾನ ದುರಂತದಲ್ಲಿ ಕೊನೆಗೊಂಡಿದೆ. 49 ಕೆಜಿ ವಿಭಾಗದ ವೇಟ್‌ಲೀಪ್ಟಿಂಗ್ ಸ್ಪರ್ಧೆಯ ವೇಳೆ ಜಾರಿಬಿದ್ದ ಅವರು ಕಂಚಿನ ಪದಕದಿಂದಲೂ ವಂಚಿತರಾದರು..
ಸ್ನ್ಯಾಚ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣ ತೀವ್ರ ಒತ್ತಡದಲ್ಲಿದ್ದ ಮೀರಾಬಾಯಿ ಚಾನು, ಕ್ಲೀನ್ ಆಯಂಡ್ ಜರ್ಕ್‌ನಲ್ಲಿ ಈ ವೈಫಲ್ಯ ವನ್ನು ಹೊಡೆದೋಡಿಸುವ ಯೋಜನೆ ಯಲ್ಲಿದ್ದರು..
ಹೀಗಾಗಿ 117 ಕೆಜಿ ಗುರಿ ಇವರ ಮುಂದಿತ್ತು. ಇಲ್ಲಿ ಕೊನೆಯ ಪ್ರಯತ್ನ ಮಾಡುವಾಗ ಜಾರಿ ಬಿದ್ದರು. ಇದರಿಂದ ಕಂಚಿನ ಪದಕವನ್ನು ಕಳೆದುಕೊಂಡು 4ನೇ ಸ್ಥಾನಕ್ಕೆ ಕುಸಿದರು. ಕೊನೆಗೆ ಅವರನ್ನು ಕೋಚಿಂಗ್ ಸಿಬಂದಿ ಎತ್ತಿಕೊಂಡು ಹೋಗಬೇಕಾಯಿತು..
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದ ಮೀರಾಬಾಯಿ ಚಾನು ಮೇಲೆ ಏಷ್ಯಾಡ್‌ನಲ್ಲೂ ದೊಡ್ಡ ನಿರೀಕ್ಷೆ ಇರಿಸಿಕೊಳ್ಳಲಾಗಿತ್ತು. ಚಿನ್ನಕ್ಕೂ ಅವರು ಅರ್ಹರಾಗಿದ್ದರು. ಆದರೆ ದುರ್ದಿನವೊಂದು ಅವರನ್ನು ಕಾಡಿತು. ಮೀರಾಬಾಯಿ ಒಟ್ಟು 191 ಕೆಜಿ (83 ಕೆಜಿ ಪ್ಲಸ್ 108 ಕೆಜಿ) ಭಾರವೆತ್ತಿದರು. ತೂಕವನ್ನು ಹೆಚ್ಚಿಸಿಕೊಳ್ಳುವ ಗಡಿಬಿಡಿ ಹಾಗೂ ಒತ್ತಡದಲ್ಲಿದ್ದ ಮೀರಾಬಾಯಿ, ಅಂತಿಮ ಲಿಫ್ಟ್ ವೇಳೆ ಮುಂದಕ್ಕೆ ಮುಗ್ಗರಿಸಿದರು, “ಬಾರ್’ ಹಿಂದೆ ಹೋಗಿ ಬಿತ್ತು..
ಸ್ನ್ಯಾಚ್ ಸ್ಪರ್ಧೆಯಲ್ಲಿ ಮೀರಾಬಾಯಿ 6ನೇ ಸ್ಥಾನಕ್ಕೆ ಕುಸಿದಿದ್ದರು. ಮೂವರು 90 ಕೆಜಿಗೂ ಹೆಚ್ಚಿನ ಭಾರ ಎತ್ತಿದ್ದರು. ಎರಡು ಬಾರಿಯ ವಿಶ್ವ ಚಾಂಪಿಯನ್, ಚೀನದ ಜಿಯಾಂಗ್ ಹಿಯುವಾ ಸ್ನ್ಯಾಚ್‌ನಲ್ಲಿ 94 ಕೆಜಿ ಸಾಧನೆಯೊಂದಿಗೆ ಏಷ್ಯಾಡ್ ದಾಖಲೆ ನಿರ್ಮಿಸಿದರು.