Belagavi News In Kannada | News Belgaum

ಕುರುಬ ಸಮಾಜದ ಬೆನ್ನಿಗೆ ನಿಂತ ಸಚಿವ ಸತೀಶ್‌ ಜಾರಕಿಹೊಳಿ

 

ಬೆಳಗಾವಿ: ಬೆಳಗಾವಿ ಜಿಲ್ಲೆಯ 18 ಶಾಸಕರಲ್ಲಿ ಒಬ್ಬರೂ ಕುರುಬ ಸಮಾಜದವರು ಇಲ್ಲ. ಹೀಗಾಗಿ ಜಿಲ್ಲೆಯ ಎರಡು ಲೋಕಸಭಾ ಕ್ಷೇತ್ರದಲ್ಲಿ ಒಂದು ಟಿಕೆಟ್‌ನ್ನು ಕುರುಬ ಸಮಾಜದವರಿಗೆ ನೀಡಬೇಕೆಂಬ ಚಿಂತನೆ ನಡೆದಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

ನಗರದ ನೆಹರೂ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಶೆಫರ್ಡ್ ಇಂಡಿಯಾ ಇಂಟರ್ ನ್ಯಾಷನಲ್ ನ 9ನೇ ರಾಷ್ಟ್ರೀಯ ಸಮಾವೇಷದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಳಗಾವಿಯ ಎರಡು ಲೋಕಸಭಾ ಕ್ಷೇತ್ರದಲ್ಲಿ ಒಂದು ಟಿಕೆಟ್‌ನ್ನು ಕುರುಬ ಸಮಾಜದವರಿಗೆ ನೀಡಬೇಕೆಂಬ ಬೇಡಿಕೆ ಹೈಕಮಾಂಡ್‌, ರಾಜ್ಯ ಮುಖಂಡರ ಗಮನಕ್ಕೆ ತರಲಾಗುವುದು ಎಂದರು.

ಹಲವು ಬೇಡಿಕೆ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ವಿವಿಧ ವಿಷಯಗಳನ್ನು ತರುವುದಕ್ಕಾಗಿ ಕುರುಬ ಸಮಾಜವು ಶೆಫರ್ಡ್ ಇಂಡಿಯಾ ಇಂಟರ್ ನ್ಯಾಷನಲ್ ನ 9ನೇ ರಾಷ್ಟ್ರೀಯ ಸಮಾವೇಷ ಬೆಳಗಾವಿಯಲ್ಲಿ ಹಮ್ಮಿಕೊಂಡಿರುವುದು ಸಂತೋಷ ತಂದಿದೆ ಎಂದು ಹೇಳಿದರು.

ದೇಶದ ವಿವಿಧೆಡೆ 12 ಕೋಟಿ ಜನ ಸಂಖ್ಯೆ ಹೊಂದಿರುವ ಕುರುಬ ಸಮುದಾಯವು ಬೇರೆ ಬೇರೆ ಜಾತಿಗಳ, ಉಪ ಜಾತಿಗಳ ಹೆಸರಿನಲ್ಲಿ ಹಂಚಿ ಹೋಗಿದ್ದು, ಸಮುದಾಯದ ಎಲ್ಲರನ್ನು ಒಂದೇ ಅಡಿ ತರುವ ನಿಟ್ಟಿನಲ್ಲಿ ಸಮುದಾಯದ ಹಿರಿಯ ಮುಖಂಡರು, ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ಎಚ್.‌ ವಿಶ್ವಾನಾಥ್‌ ಅವರು ಶ್ರಮಿಸುತ್ತಿರುವುದು ಶಾಘ್ಲಾನೀಯ ಎಂದರು.

ದೇಶದ 12 ಕೋಟಿ ಜನ ಸಂಖ್ಯೆ ಇರುವ ಕುರುಬ ಸಮುದಾಯದ ಬೇಡಿಕೆಗಳು ಶೀಘ್ರವೇ ಈಡೇರಲಿ, ಜತೆಗೆ ತಮ್ಮೆಲ್ಲರ ಆಶೀರ್ವಾದದಿಂದ ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಹೊಸ ಸರ್ಕಾರ ಬಂದಿದ್ದು, ಇದೇ ವೇಳೆ 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಸರ್ಕಾರವನ್ನು ಮುನ್ನಡೆಸುತ್ತಿರುವ ಸಿದ್ದರಾಮಯ್ಯನವರನ್ನ ಸನ್ಮಾನಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಶೋಷಿತರಿಗೆ, ಧ್ವನಿ ಇಲ್ಲದ ಸಮುದಾಯಗಳಿಗೆ ಧ್ವನಿ ಕೊಡುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಆಗಿದೆ. ಎಲ್ಲ ವರ್ಗಗಳಿಗೆ ನ್ಯಾಯ ದೊರತಿದೆ. ಎಸ್ಸಿ ಎಸ್ಟಿ ಸಮುದಾಯಗಳಿಗೆ ಜನ ಸಂಖ್ಯೆ ಅನುಗುಣವಾಗಿ ಬಹುಶಃ ಆಂದ್ರ ಪ್ರದೇಶ ಬಿಟ್ಟರೇ ಹೆಚ್ಚಿನ ಅನುದಾನವನ್ನು 2013ರಲ್ಲಿ 30 ಸಾವಿರ ಕೋಟಿಕ್ಕಿಂತ ಹೆಚ್ಚು ಅನುದಾನವನ್ನು ಎಸ್ಸಿ, ಎಸ್ಟಿಗಳಿಗೆ ಸಿದ್ದರಾಮಯ್ಯನವರು ನೀಡಿದ್ದರು, ಈ ಶ್ರೇಯಸ್ಸು ಅವರಿಗೆ ಸಲ್ಲಬೇಕೆಂದು ನನ್ನ ವೈಯಕ್ತಿಕ ಭಾವನೆ ಎಂದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಗಿನೆಲೆ ಕನಕ ಗುರು ಪೀಠದ ಶ್ರೀ ಶ್ರೀ ನಿರಂಜನಾನಂದ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ಸೊದ್ದರಾಮಾನಂದ ಸ್ವಾಮೀಜಿ, ಅರ್ಜುನಾಭಾಯಿಪುರಿ ಸ್ವಾಮೀಜಿ, ಹರಿಯಾಣದ ರಾಜ್ಯಪಾಲ ಬಂಡಾರು ದತ್ತಾತ್ರೇಯ, ಶೆಫರ್ಡ್ ಇಂಡಿಯಾ ಇಂಟರ್ ನ್ಯಾಷನಲ್ ನ ಅಧ್ಯಕ್ಷ ಮಾಜಿ ಮಂತ್ರಿ ಹೆಚ್.ವಿಶ್ವನಾಥ್, ಕೇಂದ್ರ ಗ್ರಾಮೀಣಾಭಿವೃದ್ಧಿಯ ರಾಜ್ಯ ಸಚಿವ ಫಗ್ಗಾನ್ ಸಿಂಗ್ ಕುಲಾಸ್ತೆ, ಮಹಿಳಾ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಗೋವಾ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ಚಂದ್ರಕಾಂತ್ ಬಾಬು ಕಾವಲೇಕರ್, ಮಹಾರಾಷ್ಟ್ರ ರಾಜ್ಯದ ಮಾಜಿ ಸಚಿವ ಮಹದೇವ್ ಜನಕಾರ್, ದತ್ತಾತ್ರೇಯ ಭರ್ನೆ, ರಾಮ ಶಂಕರ್ ಶಿಂದೆ, ಶೆಫರ್ಡ್ ಇಂಟರ್ ನ್ಯಾಷನಲ್ ಉಪಾಧ್ಯಕ್ಷ ಹೆಚ್.ಎಂ.ರೇವಣ್ಣ, ಆಂಧ್ರ. ಪ್ರದೇಶ ರಾಜ್ಯದ ಸಚಿವೆ ಕೆ.ವಿ.ಉಷಾಶ್ರೀ ಚರಣ್, ಮಾತಾ ಅಹಿಲ್ಯಾಬಾಯಿ ಹೋಳ್ಕರ್ ಅವರ ಮೊಮ್ಮಗ ಭೂಷಣ್ ರಾಜೆ ಹೋಳ್ಕರ್, ಗುಜರಾತ್ ರಾಜ್ಯದ ಮುಖಂಡರಾದ ಸಾಗರ್ ರಾಯ್ಕ ಸೇರಿ 60 ಕ್ಕೂ ಹೆಚ್ಚು ಮಂದಿ ನಾನಾ ರಾಜ್ಯಗಳ ಕುರುಬ ಮತ್ತು ಗೋಪಾಲಕ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು.