Belagavi News In Kannada | News Belgaum

ಅತ್ಯಾಚಾರ ಆರೋಪ: ಇನ್ಸ್‌ಪೆಕ್ಟರ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

ಉತ್ತರ ಪ್ರದೇಶ: ಆಗ್ರಾ ಜಿಲ್ಲೆಯ ಬರ್ಹಾನ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜೈಲು ಪಾಲಾಗಿರುವ ಇನ್ಸ್‌ಪೆಕ್ಟರ್ ಸಂದೀಪ್ ಕುಮಾರ್‌ಗೆ ಸಂಕಷ್ಟ ಹೆಚ್ಚಾಗಿದೆ.
ಬಾಲಕಿಯ ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್​ಪೆಕ್ಟರ್ ವಿರುದ್ಧ ಪೊಲೀಸರು ಶುಕ್ರವಾರ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇದರಲ್ಲಿ ಸಂತ್ರಸ್ತೆ ಸೇರಿದಂತೆ 17 ಮಂದಿಯನ್ನು ಸಾಕ್ಷಿಗಳನ್ನಾಗಿ ಉಲ್ಲೇಖಿಸಲಾಗಿದೆ..

ಸೆಪ್ಟೆಂಬರ್ 17 ರ ರಾತ್ರಿ ಪೊಲೀಸ್ ಇನ್ಸ್‌ಪೆಕ್ಟರ್ ಸಂದೀಪ್ ಕುಮಾರ್ ಅವರು ಹಳ್ಳಿಯೊಂದಕ್ಕೆ ಹೋಗಿದ್ದರು. ಈ ವೇಳೆ ಗೋಡೆ ಹಾರಿ ಮನೆಯೊಂದನ್ನು ಪ್ರವೇಶಿಸಿದ್ದು, ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ. ಆರೋಪಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದಾಗ ಗ್ರಾಮಸ್ಥರು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ್ದರು. ಘಟನೆಯ ಬಳಿಕ ಸಂದೀಪ್ ಕುಮಾರ್‌ ಅವರನ್ನು ಎಸ್‌ಎನ್ ವೈದ್ಯಕೀಯ ಕಾಲೇಜಿನ ತುರ್ತು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಜೊತೆಗೆ, ಸಂತ್ರಸ್ತ ಕುಟುಂಬದ ಮೇಲೆ ರಾಜಿ ಮಾಡಿಕೊಳ್ಳುವಂತೆ ಒತ್ತಡ ಕೂಡ ಹೇರಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. .

ಈ ಹಿನ್ನೆಲೆ ಸಾರ್ವಜನಿಕರು ಮರುದಿನ ಬರ್ಹಾನ್ ಪೊಲೀಸ್ ಠಾಣೆಗೆ ಆಗಮಿಸಿ, ಕೆಲ ಕಾಲ ಪ್ರತಿಭಟನೆ ನಡೆಸಿದ್ದರು. ಬಳಿಕ ಪೊಲೀಸರು ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಇದರಲ್ಲಿ ಅತ್ಯಾಚಾರ ನಡೆದಿರುವುದು ದೃಢಪಟ್ಟಿತ್ತು. ಗಲಾಟೆ ಮತ್ತು ಪ್ರತಿಭಟನೆಯ ಬಳಿಕ ಸಂತ್ರಸ್ತೆಯ ಕುಟುಂಬಸ್ಥರ ಬೇಡಿಕೆಯ ಮೇರೆಗೆ ಪ್ರಕರಣದ ತನಿಖೆಯನ್ನು ಸಯ್ಯಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು..

ಇನ್ನು ಚಾರ್ಜ್ ಶೀಟ್‌ಗೂ ಮುನ್ನ ಇನ್ಸ್​ಪೆಕ್ಟರ್ ವಿರುದ್ಧ ಸಾಕ್ಷ್ಯ ಸಂಗ್ರಹಿಸಲಾಗಿದೆ ಎಂದು ತನಿಖಾಧಿಕಾರಿ ಸಮರೇಶ್ ಸಿಂಗ್ ತಿಳಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಆಕ್ಷೇಪಾರ್ಹ ವಸ್ತುಗಳು ಪತ್ತೆಯಾಗಿದ್ದು, ಅವುಗಳನ್ನು ಸೀಲ್ ಮಾಡಲಾಗಿದೆ. ಸಂತ್ರಸ್ತೆಯ ಬಟ್ಟೆಗಳನ್ನೂ ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಜೊತೆಗೆ ಡಿಎನ್‌ಎ ಪರೀಕ್ಷೆ ಕೂಡ ನಡೆಸಲಾಗಿದೆ ಎಂದರು..

ಆಗ್ರಾ ಪೊಲೀಸ್ ಕಮಿಷನರ್ ಡಾ.ಪ್ರೀತೀಂದರ್ ಸಿಂಗ್ ಮಾತನಾಡಿ, ‘ಸಯ್ಯಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಮರೇಶ್ ಸಿಂಗ್ ಅವರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಇನ್ಸ್​ಪೆಕ್ಟರ್ ವಿರುದ್ಧ 19 ದಿನಗಳೊಳಗೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಇದರಲ್ಲಿ ಇನ್ಸ್ ಪೆಕ್ಟರ್ ವಿರುದ್ಧ ಹಲವು ಸಾಕ್ಷ್ಯಗಳನ್ನು ಸೇರಿಸಲಾಗಿದೆ. ಚಾರ್ಜ್ ಶೀಟ್ ನಲ್ಲಿ ಸಂತ್ರಸ್ತೆ ಸೇರಿದಂತೆ 17 ಸಾಕ್ಷಿಗಳಿದ್ದಾರೆ. ಘಟನಾ ಸ್ಥಳದಲ್ಲಿ ಇನ್ಸ್​ಪೆಕ್ಟರ್ ಹಾಜರಿರುವ ಹಾಗೂ ಆತನ ಬಂಧನದ ವಿಡಿಯೋ ಕೂಡ ಇದೆ. ಈ ವಿಡಿಯೋ ಕೂಡ ಚಾರ್ಜ್ ಶೀಟ್‌ನ ಭಾಗವಾಗಿದೆ’ ಎಂದು ಮಾಹಿತಿ ನೀಡಿದ್ದಾರೆ..