ಕರಾಳ ದಿನಾಚರಣೆಗೆ ಅನಮತಿ ಇಲ್ಲ
ಅದ್ದೂರಿ ಕನ್ನಡ ರಾಜ್ಯೋತ್ಸವ- ಸಿದ್ಧತೆಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ

ಬೆಳಗಾವಿ, ಅ.12 : ಎಲ್ಲಾ ಕನ್ನಡಪರ ಸಂಘಟನೆಗಳ ಒಕ್ಕೊರಲಿನ ಒತ್ತಾಯದಂತೆ ಈ ಬಾರಿ ಕೂಡ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುವುದು. ಇದಕ್ಕಾಗಿ ಒಂದು ಕೋಟಿ ರೂಪಾಯಿ ಅನುದಾನ ಕೋರಿ ಸರಕಾರಕ್ಕೆ ಪ್ರಸ್ತಾವನೆ ಕಳಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ರಾಜ್ಯೋತ್ಸವ ಆಚರಿಸುವ ಕುರಿತು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ (ಅ.12) ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ವರ್ಷ ಸುಮಾರು ಐದು ಲಕ್ಷ ಜನರು ರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು. ಈ ಬಾರಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಲಿದ್ದಾರೆ. ದಸರಾ ಉತ್ಸವ ಮಾದರಿಯಲ್ಲಿ ಅತೀ ವಿಜೃಂಭಣೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಕನ್ನಡ ಪರ ಹೋರಾಟಗಾರರು-ಮಾಧ್ಯಮ ಪ್ರತಿನಿಧಿಗಳಿಗೆ ಸನ್ಮಾನ:
ರಾಜ್ಯೋತ್ಸವ ಸಂದರ್ಭದಲ್ಲಿ ಐದು ಜನ ಕನ್ನಡಪರ ಹೋರಾಟಗಾರರು ಹಾಗೂ 5 ಜನ ಪತ್ರಕರ್ತರಿಗೆ ಜಿಲ್ಲಾಡಳಿತದಿಂದ ಸನ್ಮಾನಿಸಲಾಗುವುದು.
ಸನ್ಮಾನಿತರ ಆಯ್ಕೆಗಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಕಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಲಾಗುವುದು.
ಅಗತ್ಯ ಸಿದ್ಧತೆಗೆ ಸೂಚನೆ:
ಜಿಲ್ಲಾ ಕ್ರೀಡಾಂಗಣದಲ್ಲಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಲಾಗುವುದು.
ಪೊಲೀಸ್ ಇಲಾಖೆ, ಎನ್.ಎನ್.ಸಿ.ಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಶಾಲಾ ಕಾಲೇಜು ವಿದ್ಯಾರ್ಥಿಗಳು, ಗೃಹರಕ್ಷಕ ದಳದ ಸಿಬ್ಬಂದಿ, ಭಾರತ ಸೇವಾ ದಳ ಪರೇಡ್ ನಡೆಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ರಾಜ್ಯೋತ್ಸವ ಆಚರಣೆಗೆ ವೇದಿಕೆ, ಆಸನ ವ್ಯವಸ್ಥೆ, ದೀಪಾಲಂಕಾರ, ಮೈಕ್, ಸೂಕ್ತ ಪೊಲೀಸ್ ಬಂದೋಬಸ್ತ್, ಕವಾಯತು ನಂತರ ಅಲ್ಪೋಪಹಾರ ಸೇರಿದಂತೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ಮೆರವಣಿಗೆಯ ರೂಪಕ ವಾಹನಗಳು, ಕೋಲಾಟ, ಡೊಳ್ಳಿನ ಮೇಳ ಸೇರಿದಂತೆ ಇತರೆ ಕಾರ್ಯಕ್ರಮ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.
ಕನ್ನಡ ಫಲಕಗಳು ಕಡ್ಡಾಯ:
ರಾಜ್ಯೋತ್ಸವ ಆಚರಣೆ ಹೆಚ್ಚಿನ ಅನುದಾನ ನೀಡಲು ಸರ್ಕಾರಕ್ಕೆ ನಿರಂತರ ಮನವಿಗಳನ್ನು ಸಲ್ಲಿಸಲಾಗುತ್ತಿದೆ. ಅದಕ್ಕೆ ಈವರೆಗೆ ಸ್ಪಂದನೆ ಸಿಗುತ್ತಿಲ್ಲ.
ನಗರದ ಚನ್ನಮ್ಮ ಸರ್ಕಲ್, ಕನ್ನಡ ಸಾಹಿತ್ಯ ಭವನ ಹತ್ತಿರದಲ್ಲಿ ಹಾಗೂ ನಗರದ ಪ್ರಮುಖ ವೃತ್ತಗಳಲ್ಲಿ ಇಂಗ್ಲಿಷ್ ಫಲಕಗಳಿವೆ. ನಗರದ ಯಾವುದೇ ಒಂದು ಸ್ಥಳದಲ್ಲಿಯೂ ಕನ್ನಡ ಫಲಕಗಳಿಲ್ಲ. ಇಂತಹ ಜಾಹೀರಾತು ಫಲಕಗಳನ್ನು ಅಳವಡಿಸಲು ಅನುಮತಿ ನೀಡಬಾರದು ಎಂದು ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ ಅವರು ಸಭೆಯಲ್ಲಿ ಒತ್ತಾಯಿಸಿದರು.
ಜಿಲ್ಲೆಯ ವಿವಿಧೆಡೆಯಿಂದ ಬರುವ ಜನರಿಗೆ ಸೂಕ್ತ ವಾಹನ ನಿಲುಗಡೆ ವ್ಯವಸ್ಥೆ, ಕುಟುಂಬ ಪರಿವಾರದೊಡನೆ ಜನರಿಗೆ ನಗರದ ಆಸನದ ವ್ಯವಸ್ಥೆ ಕಲ್ಪಿಸಬೇಕು. ಸರ್ಕಾರಕ್ಕೆ ಈಗಾಗಲೇ ಸಾಕಷ್ಟು ಬಾರಿ ಅನುದಾನ ಹೆಚ್ಚಳಕ್ಕೆ ಮನವಿ ಸಲ್ಲಿಸಲಾಗಿದೆ ಸರ್ಕಾರ ಇದಕ್ಕೆ ಸ್ಪಂದಿಸುತ್ತಿಲ್ಲ ಕೂಡಲೇ ಜಿಲ್ಲಾಡಳಿತ ಈ ಕುರಿತು ಸರ್ಕಾರದ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಪತ್ರಿಕಾಭವನ ನಿರ್ಮಾಣಕ್ಕೆ ಒತ್ತಾಯ:
ಕನ್ನಡ ಸಂಘಟನೆಗಳ ಜೊತೆಗೆ ಪತ್ರಕರ್ತರು ನಿರಂತರ ಕನ್ನಡ ಸೇವೆ ಸಲ್ಲಿಸುತ್ತಿದ್ದಾರೆ. ಪತ್ರಕರ್ತರಿಗೆ ಸ್ಥಳ ಇಲ್ಲದೆ ಕನ್ನಡ ಸಾಹಿತ್ಯ ಭವನ ಆವರಣದಲ್ಲಿ ವರದಿ ಮಾಡುತ್ತಿದ್ದಾರೆ. ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಕ್ರಮ ವಹಿಸಬೇಕು ಎಂದು ಮಹಾದೇವ ತಳವಾರ ಅವರು ಹೇಳಿದರು.
ರಾಜ್ಯೋತ್ಸವ ವೀಕ್ಷಣೆಗೆ ಬರುವ ಮಹಿಳೆಯರು ಹಾಗೂ ಮಕ್ಕಳಿಗೆ ಚನ್ನಮ್ಮ ವೃತ್ತದಲ್ಲಿ ಬಳಿಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ವೇದಿಕೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಸಂಬಂಧಿಸಿದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಪೂರ್ವ ಸಿದ್ಧತೆಗಳ ಕುರಿತು ಸೂಚನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಹೇಳಿದರು.
ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡ 50 ವರ್ಷಗಳು ಪೂರೈಸಿವೆ. ಆದಕಾರಣ 50 ವರ್ಷಗಳ ಸಂಭ್ರಮಾಚರಣೆ ಅದ್ದೂರಿಯಾಗಿರಬೇಕು. ಪೌರಕಾರ್ಮಿಕರು, ಪೊಲೀಸ್ ಇಲಾಖೆ ಸಿಬ್ಬಂದಿಗಳ ಸೇವೆ ಶ್ಲಾಘನಿಯ ರಾಜ್ಯೋತ್ಸವ ದಿನ ಅವರನ್ನೂ ಸನ್ಮಾನಿಸಬೇಕು ಹಾಗೂ ಎಲ್ಲಾ ಸರ್ಕಾರಿ ಕಚೇರಿಗಳನ್ನು ಹಳದಿ ಕೆಂಪು ಬಣ್ಣದ ದೀಪಾಲಂಕಾರ ಮಾಡಬೇಕು ಎಂದು ಕನ್ನಡಪರ ಹೋರಾಟಗಾರ ಶ್ರೀನಿವಾಸ ತಾಳೂರಕರ ಅವರು ಮನವಿ ಮಾಡಿಕೊಂಡರು.
ರಾಜ್ಯೋತ್ಸವ ಆಚರಣೆಗಾಗಿ 1 ಕೋಟಿ ಅನುದಾನ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಅನುದಾನ ಬಂದಲ್ಲಿ ಇನ್ನೂ ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.
ಚನ್ನಮ್ಮ ವೃತ್ತದ ಅಗಲೀಕರಣಕ್ಕೆ ಮನವಿ:
ನಗರದ ಚನ್ನಮ್ಮ ವೃತ್ತದ ಸುತ್ತಮುತ್ತ ಕಿರು ಕೋಟೆ ನಿರ್ಮಾಣ ಮಾಡಬೇಕು ಎಂದು
ಇದೇ ವೇಳೆ ನಗರದ ಚನ್ನಮ್ಮ ವೃತ್ತದ ಅಗಲೀಕರಣ, ಮೂರ್ತಿ ಎತ್ತರ ಹಾಗೂ ಮೂರ್ತಿಯ ಸುತ್ತ ಮುತ್ತ ಕಬ್ಬಿಣ ಸರಪಳಿ ವ್ಯವಸ್ಥೆ ಮಾಡಬೇಕು ಎಂದು ಕನ್ನಡ ಪರ ಹೋರಾಟಗಾರ ಭಾವಕಣ್ಣಾ ಬಂಕ್ಯಾಗೋಳ ಅವರು ಮನವಿ ಸಲ್ಲಿಸಿದರು.
ಕನ್ನಡಪರ ಹೋರಾಟಗಳಲ್ಲಿ ಈಗಾಗಲೇ ಎಫ್.ಐ.ಆರ್ ದಾಖಲಾಗಿರುವ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ
ಗಡಿ ವಿವಾದಗಳ ಪರಿಹಾರಕ್ಕೆ ಕ್ರಮ ವಹಿಸಲು ಒತ್ತಾಯ:
ಕರ್ನಾಟಕದ ಗಡಿ ವಿವಾದಗಳು ಪದೇ ಪದೇ ಕೇಳಿ ಬರುತ್ತಿದ್ದು, ಬೆಳಗಾವಿಯಲ್ಲಿ ಯಾವುದೇ ಸ್ಥಳಗಳಲ್ಲಿ ಕರಾಳ ದಿನಾಚರಣೆ ನಡೆಸಲು ಜಿಲ್ಲಾಡಳಿತ ಅನುಮತಿ ಕೊಡಬಾರದು. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರಕಾರ ಕಳೆದ ಒಂದು ವರ್ಷದಲ್ಲಿ ಕೈಕೊಳ್ಳುತ್ತಿರುವ ಆಕ್ರಮಣಕಾರಿ ಮತ್ತು ಕರ್ನಾಟಕ ವಿರೋಧಿ ನಿಲವುಗಳ ಬಗ್ಗೆ ಕನ್ನಡ ಸಂಘಟನೆಗಳು ಕರ್ನಾಟಕ ಸರಕಾರಕ್ಕೆ ನಿರಂತರ ವರದಿ ಸಲ್ಲಿಸುತ್ತಿವೆ. ಆದರೆ ಸರ್ಕಾರದ ಈ ಸಂಬಂಧ ಯಾವುದೇ ದೃಢ ನಿರ್ಧಾರ ಕೈಗೊಂಡಿಲ್ಲ.
ಕರ್ನಾಟಕದ 5 ಜಿಲ್ಲೆಗಳ 855 ಹಳ್ಳಿ ಪಟ್ಟಣಗಳಲ್ಲಿ ವಾಸಿಸುವ ಮರಾಠಿ ಭಾಷಿಕರಿಗೆ ಅನ್ವಯವಾಗುವಂತೆ ಮಹಾತ್ಮ ಫುಲೇ ಜನಾರೋಗ್ಯ ಯೋಜನೆಯನ್ನು ಜಾರಿಗೊಳಸಲು ಇದೇ ವರ್ಷದ ಮಾರ್ಚ ತಿಂಗಳಲ್ಲಿ ಮಹಾರಾಷ್ಟ್ರ ಸರಕಾರ ನಿರ್ಧಾರ ಕೈಕೊಂಡಿದೆ. ಈ ನಿರ್ಧಾರದಿಂದ ಮಹಾರಾಷ್ಟ್ರವು ಕರ್ನಾಟಕದ ಆಡಳಿತದಲ್ಲಿ ನೇರವಾಗಿ, ಹಸ್ತಕ್ಷೇಪ ಮಾಡಿದೆ ಇದನ್ನು ತಡೆಯಲು ಜಿಲ್ಲಾಡಳಿತದಿಂದ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿ ಕರವೇ ಕನ್ನಡಪರ ಹೋರಾಟಗಾರ ರವರ ನೇತೃತ್ವದಲ್ಲಿ ಸಭೆ ಆರಂಭಕ್ಕೂ ಮುಂಚೆ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ನವೆಂಬರ್ 1 ರಂದು ಕರಾಳ ದಿನಾಚರಣೆಗೆ ಅನುಮತಿ ನೀಡುವುದಿಲ್ಲ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಷಲ್ ಭೋಯರ್, ಡಿಸಿಪಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ,
ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷರಾದ ಅಶೋಕ್ ಚಂದರಗಿ, ಕರವೇ ಕರವೇ ರಾಜ್ಯ ಸಂಚಾಲಕರಾದ (ರೈತ ಸಂಘಟನೆ) ಸುರೇಶ್ ಗವನ್ನವರ, ಕನ್ನಡಪರ ಹೋರಾಟ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆಯ ಜಿಲ್ಲಾಧ್ಯಕ್ಷ ಬಾಳಪ್ಪ ಗುಡಗೇನಟ್ಟಿ, ಇನ್ನುಳಿದ ಕನ್ನಡ ಹೋರಾಟಗಾರರ ಸಂಘಟನೆ ಅಧ್ಯಕ್ಷರುಗಳು ಯಲ್ಲಪ್ಪ ಹುದಲಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.