Belagavi News In Kannada | News Belgaum

ಗ್ಯಾರಂಟಿ ಗುಂಗಿನಲ್ಲಿರುವ ಕಾಂಗ್ರೆಸ್ ಸರ್ಕಾರ ರೈತರ ಕಣ್ಣೀರೊರೆಸುವ ಕೆಲಸ ಮಾಡುತ್ತಿಲ್ಲ!!ಜಿ.ಟಿ.ದೇವೇಗೌಡ

ವಿಜಯಪುರದಲ್ಲಿ ಜೆ.ಡಿ.ಎಸ್ ಪಕ್ಷದ ಪುನಶ್ವೇತನ ಪರ್ವ ಕಾರ್ಯಕ್ರಮಕ್ಕೆ ನಡೆಯಿತು

 

ವಿಜಯಪುರ: ಕರ್ನಾಟಕ ರಾಜ್ಯ ಭೀಕರ ಪರಿಸ್ಥಿತಿ ಎದುರಿಸುತ್ತಿದ್ದರೂ ತಮ್ಮದು ರೈತಪರ ಸರ್ಕಾರ ಎಂದು ಹೇಳಿಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೌಜನ್ಯಕ್ಕೂ ಅನ್ನದಾತರ ಭೇಟಿ ಮಾಡಿ, ಸಂಕಷ್ಟ ಆಲಿಸಿಲ್ಲ. ಗ್ಯಾರಂಟಿ ಗುಂಗಿನಲ್ಲಿರುವ ಕಾಂಗ್ರೆಸ್ ಸರ್ಕಾರ ರೈತರ ಕಣ್ಣೀರೊರೆಸುವ ಕೆಲಸ ಮಾಡುತ್ತಿಲ್ಲ ಎಂದು ಜೆಡಿಎಸ್ ಕೋರ್ ಕಮಿಟಿ ಮುಖ್ಯಸ್ಥ ಜಿ.ಟಿ.ದೇವೇಗೌಡ ಟೀಕಾ ಪ್ರಹಾರ ನಡೆಸಿದರು.

ಬುಧವಾರ ನಗರದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ ಅವರು, ಬಿಜೆಪಿ ಸರ್ಕಾರ ಶೇ.40 ಕಮೀಷನ್ ಪಡೆಯುತ್ತಿದೆ ಎಂದು ಆರೋಪಿಸಿ ಚುನಾವಣೆ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ ಬಿಜೆಪಿ ಸರ್ಕಾರದಲ್ಲಿ ಜಾರಿಗೆ ತಂದಿದ್ದ ಯೋಜನೆಗಳ ಕಾಮಗಾರಿಗಳನ್ನೆಲ್ಲ ಸ್ಥಗಿತಗೊಳಿಸುವ ಮೂಲಕ ಅಭಿವೃದ್ಧಿ ವಿರೋಧಿ ನಡೆ ಅನುಸರಿಸುತ್ತಿರುವುದು ಸಲ್ಲದ ಕ್ರಮ ಎಂದರು ವಾಗ್ದಾಳಿ ನಡೆಸಿದರು.

ಐದು ಗ್ಯಾರಂಟಿ ಜಾರಿಗೆ ತಂದಿರುವುದಾಗಿ ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರ, ಇವುಗಳ ಅನುಷ್ಠಾನಕ್ಕೆ ಹತ್ತು ಹಲವು ನಿರ್ಬಂಧ ಹೇರುವ ಮೂಲಕ ಜನರಿಗೆ ಗ್ಯಾರಂಟಿ ತಲುಪದಂತೆ ಮಾಡುತ್ತಿದೆ. ಆದರೆ ಸಂಕಷ್ಟದಲ್ಲಿರುವ ರೈತರಿಗಾಗಿ ಒಂದೇ ಒಂದು ಗ್ಯಾರಂಟಿ ನೀಡಲಿಲ್ಲ. ಬದಲಾಗಿ ವಿವಿಧ ಯೋಜನೆಗಳಲ್ಲಿ ರೈತರಿಗೆ ನೀಡುವ ಅನುದಾನಕ್ಕೆ ಕತ್ತರಿ ಹಾಕಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.

ಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದೊಂದಿಗೆ ಜೆಡಿಎಸ್ ಪಕ್ಷ ರಾಜಕೀಯ ಮೈತ್ರಿಗೆ ಮುಂದಾಗಿರುವುದು ಪ್ರಸಕ್ತ ಸಂದರ್ಭದಲ್ಲಿ ದೇಶದ ಪರಿಸ್ಥಿತಿ ಕಾರಣವಾಗಿದೆ. ಪ್ರಸ್ತುತ ರಾಜಕೀಯ ಸಂದಿಗ್ಧ ಸ್ಥಿತಿಯನ್ನು ಅವಲೋಕೋಸಿ ನಮ್ಮ ಸಿದ್ಧಾಂತ ಉಳಿಸಿಕೊಂಡೇ ರಾಜ್ಯ ಹಾಗೂ ದೇಶದ ಹಿತ ರಕ್ಷಣೆಗೆ ಆದ್ಯತೆ ನೀಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ ಎಂದು ಬಿಜೆಪಿ ಪಕ್ಷದೊಂದಿಗಿನ ತಮ್ಮ ಪಕ್ಷದ ಮೈತ್ರಿಯನ್ನು ಸಮರ್ಥಿಸಿದರು.

ಭೀಕರ ಬರ ಆವರಿಸಿರುವುದರಿಂದ ರಾಜ್ಯದಲ್ಲಿ ಸುಮಾರು 40 ಲಕ್ಷ ಹೆಕ್ಟೇರ್‍ಗೂ ಅಧಿಕ ಪ್ರದೇಶದಲ್ಲಿ ಬೆಳೆ ನಾಶವಾಗಿ, ರೈತರಿಗೆ ಸುಮಾರು 4800 ಕೋಟಿ ರೂ. ಅಧಿಕ ಆರ್ಥಿಕ ನಷ್ಟವಾಗಿದೆ. ಕುಡಿಯುವ ನೀರಿನ ಪರಿಸ್ಥಿತಿ ಗಂಭೀರವಾಗುವ ಅಪಾಯ ಎದುರಾಗಿದೆ. ಇಷ್ಟಾದರೂ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನ್ನದಾತರ ನೆರವಿಗೆ ಧಾವಿಸದೇ ವಂಚನೆ ಮಾಡುತ್ತಿದೆ ಎಂದೂ ಹರಿಹಾಯ್ದರು.

ಮಹಾದೇವಪ್ಪ ನನಗೂ, ನಿನಗೂ ಇಬ್ಬರಿಗೂ 200 ಯುನಿಟ್ ಕರೆಂಟ್ ಫ್ರೀ ಎಂದು ಚುನಾವಣೆಯಲ್ಲಿ ಭರವಸೆ ನೀಡಿ ಮುಖ್ಯಮಂತ್ರಿಯಾಗಿರುವ ಸಿದ್ಧರಾಮಯ್ಯ, ರಾಜ್ಯದಲ್ಲಿ ಅಘೋಷಿತ-ಅನಿಯಮಿತ ಕರೆಂಟ್ ಲೋಡ್ ಶೆಡ್ಡಿಂಗ ಮೂಲಕ ವಿದ್ಯುತ್ ಪಡೆಯದಂತೆ ವಂಚನೆ ಮಾಡುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.

ಚುನಾವಣೆ ಪೂರ್ವದಲ್ಲಿ 200 ಯುನಿಟ್ ವಿದ್ಯುತ್ ಉಚಿತ ಗ್ಯಾರಂಟಿ ಎಂದಿದ್ದವರು, ಅಧಿಕಾರಕ್ಕೆ ಬಂದ ಮೇಲೆ 53 ಯುನಿಟ್ ಮಿತಿಗೊಳಿಸಿ, ಮತ್ತೊಂದೆಡೆ ವಿದ್ಯುತ್ ದರ ಹೆಚ್ಚಿಸಿ ರಾಜ್ಯದ ಜನರನ್ನು ವಂಚಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಬಿಜೆಪಿ ಸರ್ಕಾರದಲ್ಲಿ ರೈತರಿಗೆ 7 ತಾಸು ವಿದ್ಯುತ್ ಕೊಡುವುದಕ್ಕಾಗಿ ಮಾಡಿದ್ದ ಆದೇಶ ಜಾರಿಯಲ್ಲಿದ್ದರೂ ಈ ಸರ್ಕಾರದಲ್ಲಿ 2 ಗಂಟೆಯೂ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ರಾಜ್ಯದಲ್ಲಿ ಭೀರಕ ಬರ ಪರಿಸ್ಥಿತಿ ಎದುರಾಗಿದ್ದು, ಕೆರೆ-ಭಾವಿಗಳು ಸೇರಿದಂತೆ ಜಲಮೂಲಗಳು ಬತ್ತಿ ಬರಿದಾಗಿವೆ. ಬೋರ್‍ವೆಲ್ ನೀರು ಪಡೆಯಲು ವಿದ್ಯುತ್ ಇಲ್ಲದೆ ರೈತರು ಹಾಗೂ ಜನ ಸಾಮಾನ್ಯರು ನೀರಿಗೆ ಪರದಾಡುವ ದುಸ್ಥಿತಿ ತಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲ ಕೇವಲ ಸುಳ್ಳಿನ ಸರಮಾಲೆಯಷ್ಟೇ. ಕರೆಂಟ್ ವಿಷಯದಲ್ಲಿ ವಂಚನೆ ಮಾಡಿದಂತೆ ಗೃಹಲಕ್ಷ್ಮೀ ಯೋಜನೆ ಹೆಸರಿನಲ್ಲಿ ಮನೆ ಯಜಮಾನಿ ಸತ್ತರೆ ಯೋಜನೆಯ ಹಣವನ್ನು ಕುಟುಂಬದ ಇತರೆ ಸದಸ್ಯರಿಗೆ ಕೊಡುವುದಿಲ್ಲವಂತೆ. ಇದು ಗೃಹಲಕ್ಷ್ಮಿಯರಿಗೆ ಸರ್ಕಾರ ಕೊಡುವ ಗೌರವ ಎಂದರು ಟೀಕಿಸಿದರು.

ಗ್ಯಾರಂಟಿ ಹೆಸರಿನಲ್ಲಿ ಜನರನ್ನು ಮರಳು ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದಲ್ಲಿ ಇತರೆ ಯಾವ ಯೋಜನೆಗೂ ಆರ್ಥಿಕ ಸಂಪನ್ಮೂಲ ಇಲ್ಲದಂತಾಗಿದೆ. ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲೇ ಇಲ್ಲ ಎಂಬ ದುಸ್ಥಿತಿ ಎದುರಾಗಿದೆ. ಶಾಸಕರ ಅನುದಾನ ಕಡಿತ ಮಾಡಿದ ಕುರಿತು ಆಡಳಿತ ಪಕ್ಷದ ಹಿರಿಯ ಶಾಸಕರಾದ ಬಿ.ಆರ್.ಪಾಟೀಲ, ರಾಜು ಕಾಗೆ ಸೇರಿದಂತೆ ಹಲವು ಶಾಸಕರು ಬಹಿರಂಗವಾಗಿಯೇ ಅಸಮಧಾನ ಹೊರ ಹಾಕಿರುವುದೇ ಈ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ ಎಂದು ಕುಟುಕಿದರು.

ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿಯಿಂದಾಗಿ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪಕ್ಷ ತೊರೆಯಲಿದ್ದಾರೆ ಎಂಬುದು ಸುಳ್ಳು. ಮೈತ್ರಿಗೆ ವಿರೋಧ ವ್ಯಕ್ತಪಡಿಸದ ಇಬ್ರಾಹಿಂ, ಯಾವ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದು ಜಿ.ಟಿ.ದೇವೇಗೌಡ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಮಾಜಿ ಶಾಸಕ ವೈ.ಎಸ್.‍ವಿ. ದತ್ತಾ ಮಾತನಾಡಿ, ಬರುವ ಲೋಕಸಭೆ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದಲ್ಲೂ ಜೆಡಿಎಸ್ ಖಾತೆ ತೆರೆಯುವಂತಾಗಬೇಕು. ಇತರೆ ಪಕ್ಷಗಳಂತೆ ನಮ್ಮ ಪಕ್ಷದಲ್ಲಿ ಹೈಕಮಾಂಡ್ ಸಂಸ್ಕøತಿ ಇಲ್ಲ, ರಾಜ್ಯದ ಜನರೇ ಜೆಡಿಎಸ್ ಹೈಕಮಾಂಡ್. ಪಕ್ಷದ ಅಸ್ಮಿತೆ ಉಳಿಸಿಕೊಂಡು, ರಾಜ್ಯದ ಜನರ ಹಿತ ಕಾಯುವುದಕ್ಕಾಗಿ ಜೆಡಿಎಸ್ ಒಂದೇ ಪಕ್ಷ ಇರುವುದು ಎಂದರು.

ಜಿಲ್ಲೆಯ ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ಬಿಜೆಪಿ ಪಕ್ಷದೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರೂ ಅಲ್ಪಸಂಖ್ಯಾತರ ಹಿತ ಕಾಯುವಲ್ಲಿ ಲೋಪ ಮಾಡುವುದಿಲ್ಲ. ಅಲ್ಪಸಂಖ್ಯಾತರಿಗೆ ಮೀಸಲು ಸೌಲಭ್ಯ ಕಲ್ಪಿಸಿರುವ ಮಾಜಿ ಪ್ರಧಾನಿ ದೇವೇಗೌಡರು, ಜೆಡಿಎಸ್, ತತ್ವ-ಸಿದ್ಧಾಂತ ಉಳಿಸಿಕೊಂಡು ಬಿಜೆಪಿಯೊಂದಿಗೆ ಮೈತ್ರಿಗೆ ಮುಂದಾಗಿದ್ದಾರೆ. ಹೀಗಾಗಿ ಅಲ್ಪಸಂಖ್ಯಾತರು ಆತಂಕಪಡುವ ಅಗತ್ಯವಿಲ್ಲ ಎಂದರು.

ನೀರು ನೀರಾವರಿ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾದಂತೆ ಸದಾ ಕಾರ್ಯ ಮಾಡುವ ರೈತಪರ ಏಕೈಕ ನಾಯಕ ದೇವೆಗೌಡರು. ರಾಜಕೀಯ ಇಚ್ಛಾಶಕ್ತಿ ಹೊಂದಿರುವ ಜೆಡಿಎಸ್ ಪಕ್ಷಕ್ಕೆ ಇಂಥ ನಾಯಕನ ನಾಯಕತ್ವ ಇದೆ ಎಂದರು.

ಬುಧವಾರ ವಿಜಯಪುರದಲ್ಲಿ ಪಕ್ಷದ ಕೋರ ಕಮಿಟಿ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಜೊತೆಗಿನ ಮೈತ್ರಿ ರಾಜ್ಯ ರಾಜಕೀಯದಲ್ಲಿ ಹೊಸ ಭಾಷ್ಯ ಬರೆಯಲಿದೆ.

ಜೆಡಿಎಸ್ ಪಕ್ಷದ ಕಾರ್ಯಕರ್ತರ ಹುಮ್ಮಸ್ಸು ಅವಲೋಕಿಸಿದರೆ ಲೋಕಸಭೆ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದಿಂದ ಜೆಡಿಎಸ್ ಸ್ಪರ್ಧೆ ಹಾಗೂ ಗೆಲುವು ಖಚಿತ ಎನ್ನುವುದು ಗೋಚರಿಸುತ್ತಿದೆ. ವಿಜಯಪುರ ಲೋಕಸಭೆ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬೇಡಿಕೆ ಇಡಲಿದ್ದು, ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಿರ್ಧಾರಕ್ಕೆ ಎಲ್ಲರೂ ಬದ್ಧ ಎಂದರು.

ರಾಜ್ಯದಲ್ಲಿ ಜೆಡಿಎಸ್ ಆಡಳಿತದ ಕಾಲಘಟ್ಟದಲ್ಲಿ ರೈತರಿಗೆ ಹತ್ತು ಹಲವು ಉತ್ತಮ ಕಾರ್ಯಕ್ರಮ ರೂಪಿಸಿತ್ತು. ಸದಾ ರಾಜ್ಯದ ರೈತರ ಹಿತವನ್ನೇ ಬಯಸುವ ಜೆಡಿಎಸ್, ಶ್ರಮಿಕರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ವರ್ಗವನ್ನು ಸಮಾನವಾಗಿ ಕಾಣುತ್ತದೆ ಎಂದರು.

ಮಾಜಿ ಸಚಿವ ಬಂಡೆಪ್ಪ ಕಾಸೆಂಪೂರ, ನಾಗಠಾಣ ಮಾಜಿ ಶಾಸಕ ಡಾ.ದೇವಾನಂದ ಚವ್ಹಾಣ, ಕಳೆದ ಲೋಕಸಭೆ ಚುನಾವಣೆಯ ಜೆಡಿಎಸ್ ಅಭ್ಯರ್ತಿ ಡಾ.ಸುನೀತಾ ಚವ್ಹಾಣ, ಅಪ್ಪುಗೌಡ ಪಾಟೀಲ ಮನಗೂಳಿ, ಬಿ.ಡಿ.ಪಾಟೀಲ, ಬಸವರಾಜ ಹೊನವಾಡ, ಜೆಡಿಎಸ್ ಜಿಲ್ಲಾಧ್ಯಕ್ಷ ಬಸವರಾಜ ಮಾಡಗಿ, ಪೀರಪಾಷಾ ಗಚ್ಚಿನಮಹಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.