Belagavi News In Kannada | News Belgaum

ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟ, ಮನೆ ಬೆಂಕಿಗೆ ಆಹುತಿ

ಧಾರವಾಡ: ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ಮನೆಯೊಂದು ಬೆಂಕಿಗೆ ಆಹುತಿಯಾದ ಘಟನೆ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಬಿ. ಗುಡಿಹಾಳ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.

ಅದೃಷ್ಟವಶಾತ್, ಸಾವು ನೋವು ಸಂಭವಿಸಿಲ್ಲ. ಎಲೆಕ್ಟ್ರಿಕ್ ಬೈಕ್ ಚಾರ್ಜಿಂಗ್ ವೇಳೆ ಬ್ಯಾಟರಿ ಸ್ಫೋಟಗೊಂಡು ಬೈಕ್ ಸುಟ್ಟು ಕರಕಲಾಗಿದೆ. ಬೈಕ್‌ಗೆ ಹೊತ್ತಿದ ಬೆಂಕಿಯಿಂದ ಹಳೆಯ ಮಡಗಿ ಮನೆ ಹೊತ್ತಿ ಉರಿದಿದೆ. ಮನೆಯಲ್ಲಿ ಬೈಕ್ ಬ್ಯಾಟರಿ ಚಾರ್ಜಿಂಗ್​ಗೆ ಹಾಕಿದ್ದ ವೇಳೆ ಘಟನೆ ಸಂಭವಿಸಿದೆ.

ಬಸಯ್ಯ ಹಿರೇಮಠ್ ಎಂಬುವವರ ಮನೆಯಲ್ಲಿ ಅವಘಡ ಸಂಭವಿಸಿದೆ. ಬೆಂಕಿ ಕಾಣಿಸಿಕೊಳ್ಳುತ್ತಲೇ ಕುಟುಂಬಸ್ಥರು ಹೊರಗೆ ಓಡಿ ಬಂದಿದ್ದಾರೆ. ಹೀಗಾಗಿ ಸಾವು ನೋವು ತಪ್ಪಿದೆ. ಸ್ಥಳಕ್ಕೆ ತಹಶೀಲ್ದಾರರು ಹಾಗೂ ಕಲಘಟಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ./////