Belagavi News In Kannada | News Belgaum

ಡಿಕೆಶಿ ವಿರುದ್ಧ ಮುನಿಸಿಕೊಂಡ ಸಾಹುಕಾರ್..!

ಬೆಳಗಾವಿ: ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ಮುನಿಸಿಕೊಂಡಿದ್ದಾರಾ ಎಂಬ ಚರ್ಚೆ ರಾಜ್ಯ ರಾಜಕೀಯವಲಯದಲ್ಲಿ ಜೋರಾಗಿ ಚರ್ಚೆಯಾಗುತ್ತಿದೆ.
ಹೌದು….ಪದೇ ಪದೇ ಬೆಳಗಾವಿ ವಿಚಾರವಾಗಿ ಮೂಗು ತೋರಿಸುವ ಡಿ.ಕೆ. ಶಿವಕುಮಾರ್ ಅವರ ನಡೆ, ಸಚಿವ ಸತೀಶ್ ಜಾರಕಿಹೊಳಿ ಅವರ ಸಿಟ್ಟಿಗೆ ಕಾರಣವಾಗಿದೆ ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಬಳಿಯೂ ಸತೀಶ್ ಜಾರಕಿಹೊಳಿ ಚರ್ಚಿಸಿದ್ದಾರಂತೆ. ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮೂಗು ತೂರಿಸುತ್ತಿರೋದು, ವರ್ಗಾವಣೆ ಸೇರಿದಂತೆ ಹಲ‌ವು ವಿಚಾರಗಳಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿರೋದಕ್ಕೆ ಜಾರಕಿಹೊಳಿ ಬೇಸರಗೊಂಡಿದ್ದಾರೆ ಎನ್ನಲಾಗುತ್ತಿದೆ.

ಸಾಹುಕಾರ್ ಮುನಿಸೇಕೆ?: ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮೂಗು ತೂರಿಸುತ್ತಿರುವ ಆರೋಪ, ವರ್ಗಾವಣೆ ಸೇರಿದಂತೆ ಹಲವು ವಿಚಾರಗಳಲ್ಲಿ ಅನಗತ್ಯವಾಗಿ ಹಸ್ತಕ್ಷೇಪ,   ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪರ ಜಿಲ್ಲೆಯಲ್ಲಿ ಮಧ್ಯ ಪ್ರವೇಶಿಸುತ್ತಾರೆಂಬ ಸಿಟ್ಟು ಸಾಹುಕಾರ ಮುನಿಸಿಗೆ ಕಾರಣವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಸಾಹುಕಾರ್ ಕೌಂಟರ್​ ಏನು?: ತಮ್ಮ ಆಪ್ತ ಬಳಗದ ಸಚಿವರು, ಶಾಸಕರನ್ನ ಒಂದೆಡೆ ಸೇರಿಸುವುದು,ಎಲ್ಲರನ್ನೂ ಪ್ರವಾಸಕ್ಕೆ ಕರೆದುಕೊಂಡು ಹೋಗುವುದು, ಈ ಮೂಲಕ ತಮ್ಮ ಬಲ ಪ್ರದರ್ಶನ ಜೊತೆಗೆ ಪಕ್ಷಕ್ಕೆ ಸಂದೇಶ ರವಾನೆ ಮಾಡುವುದು ಸಚಿವ ಸತೀಶ್ ಜಾರಕಿಹೊಳಿ ಅವರ ಕೌಂಟರ್‌ ಆಗಿದೆ.

ಶಕ್ತಿ ಪ್ರದರ್ಶನಕ್ಕೆ ಮುಂದಾದ ಸತೀಶ ಜಾರಕಿಹೊಳಿ: ಬಿಜೆಪಿಯಿಂದ ಕಾಂಗ್ರೆಸ್​​ಗೆ ಬಂದಿರುವ ಲಕ್ಷ್ಮಣ ಸವದಿ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಮಾಡುವ ಬಗ್ಗೆ ಕಾಂಗ್ರೆಸ್​​​ನಲ್ಲಿ ಚರ್ಚೆ ನಡೆದಿತ್ತು. ಇದರಿಂದ ಅಸಮಾಧಾನಗೊಂಡ ಸತೀಶ ಜಾರಕಿಹೊಳಿ ಅವರು ಶಾಸಕರನ್ನು ಒಟ್ಟುಗೂಡಿಸಿ ಪ್ರವಾಸ ಹೋಗುವ ಮೂಲಕ ಬೆಳಗಾವಿ ಜಿಲ್ಲಾ ರಾಜಕೀಯದಲ್ಲಿ ತಮಗಿರುವ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎಂಬ ಚರ್ಚೆಯೂ ಕೂಡಾ ನಡೆದಿದೆ.

ಶೀಘ್ರದಲ್ಲೇ ಸಿಎಂ ಜತೆ ಚರ್ಚೆ: ಕೆಪಿಸಿಸಿಗೆ ಐವರು ಕಾರ್ಯಾಧ್ಯಕ್ಷರು ಇದ್ದಾರೆ. ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ, ಈಶ್ವರ್ ಖಂಡ್ರೆ ಸಚಿವರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಸಲೀಂ ಅಹ್ಮದ್ ಹಾಗೂ ಬಿಎನ್ ಚಂದ್ರಪ್ಪ ಅವರು ಸದ್ಯ ಕಾರ್ಯಾಧ್ಯಕ್ಷರಾಗಿದ್ದು, ಈ ಐದು ಸ್ಥಾನಗಳನ್ನು ಬದಲಾವಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಈ ವಿಚಾರವಾಗಿ ಶೀಘ್ರದಲ್ಲೇ ಸಿಎಂ ಜತೆ ಚರ್ಚಿಸಿ ಎಐಸಿಸಿ ವರಿಷ್ಠರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
ಬಣ ರಾಜಕೀಯವಲ್ಲ ಎಂದ ಸಾಹುಕಾರ್: ಮೈಸೂರು ದಸರಾ ನೋಡಲು ಬನ್ನಿ ಎಂದು ಆ ಭಾಗದ ಶಾಸಕರು ಆಹ್ವಾನ ನೀಡಿದ್ದರು. ಅದರಂತೆ ನಮ್ಮ ಆಪ್ತರು, ನಮ್ಮ ಭಾಗದ ಶಾಸಕರು, ಸಮಾನ ಮನಸ್ಕರು ಹೋಗಲು ನಿರ್ಧರಿಸಿದ್ದೆವು. ಆದರೆ ಅದಕ್ಕೆ ಸಮಯ ಸಿಗಲಿಲ್ಲ. ನಮ್ಮ ಭಾಗದಲ್ಲೇ ಕೆಲವು ಹಬ್ಬಗಳಿರುವುದರಿಂದ ಎಲ್ಲರಿಗೂ ಸಮಯ ಆಗಲಿಲ್ಲ. ಆದರೆ ಮುಂದೊಂದು ದಿನ ಸಮಯ ನಿಗದಿ ಮಾಡಿಕೊಂಡು ಪ್ರವಾಸ ಮಾಡುತ್ತೇವೆ. ಮುಖ್ಯವಾಗಿ ಸರ್ಕಾರ ಹಾಗೂ ಕಾಂಗ್ರೆಸ್​​​ನಲ್ಲಿ ಯಾವುದೇ ಬಣ ಇಲ್ಲ. ಎಲ್ಲರೂ ಒಂದಾಗಿದ್ದೇವೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ಡಿಕೆಶಿ ಬೆಳಗಾವಿಗೆ ಬಂದರೂ ಸ್ವಾಗತಕ್ಕೆ ಬಾರದ ಶಾಸಕರು: ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ . ಶಿವಕುಮಾರ್ ಅವರು ಬೆಳಗಾವಿಗೆ ಬಂದಾಗ ಬೆಳಗಾವಿಯ ಯಾವೊಬ್ಬ ಶಾಸಕರು, ಸಚಿವರು ಸ್ವಾಗತಕ್ಕೆ ಬಂದಿರಲಿಲ್ಲ. ಸಚಿವ ಸತೀಶ್ ಜಾರಕಿಹೊಳಿ ಬೆಂಗಳೂರು ಪ್ರವಾಸದಲ್ಲಿದ್ದರೆ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಖಾಸಗಿ ಕಾರ್ಯಕ್ರಮ ನಿಮಿತ್ತ ಭದ್ರಾವತಿಯಲ್ಲಿದ್ದಾರೆ. ಬೆಳಗಾವಿಯ 11 ಕಾಂಗ್ರೆಸ್ ಶಾಸಕರು ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ಬೆಳಗಾವಿಯಲ್ಲಿ ಇಲ್ಲ ಎಂದು ತಿಳಿದುಬಂದಿದೆ. ಅಥಣಿ ಶಾಸಕ ಲಕ್ಷ್ಮಣ ಸವದಿ, ಕಾಗವಾಡ ಶಾಸಕ ರಾಜುಕಾಗೆ, ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ, ಚಿಕ್ಕೋಡಿ ಶಾಸಕ ಗಣೇಶ್ ಹುಕ್ಕೇರಿ, ರಾಮದುರ್ಗ ಶಾಸಕ ಅಶೋಕ್ ಪಟ್ಟಣ, ಸವದತ್ತಿ ಶಾಸಕ ವಿಶ್ವನಾಥ ವೈದ್ಯ, ಬೆಳಗಾವಿ ಶಾಸಕ ರಾಜು ಶೇಠ್ ಹಾಗೂ ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ್ ತಮ್ಮ ಕೆಲಸದ ನಿಮಿತ್ತ ಬೆಂಗಳೂರಿನಲ್ಲಿಯೇ ಇದ್ದಾರೆ. ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ ಅನಾರೋಗ್ಯದ ಕಾರಣ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಸಚಿವ, ಶಾಸಕರು ಬೆಳಗಾವಿಯಲ್ಲಿ ಡಿಕೆಶಿ ಸ್ವಾಗತಕ್ಕೆ ಗೈರು ಹಾಜರಾಗಿದ್ದಾರೆ. ಕಾಂಗ್ರೆಸ್ ನಾಯಕರು ಉದ್ದೇಶಪೂರ್ವಕವಾಗಿಯೇ ಗೈರಾಗಿದ್ದಾರೆ ಎಂಬ ಮಾತುಗಳು ಈಗ ಬೆಳಗಾವಿ ರಾಜಕೀಯದಲ್ಲಿ ಹರಿದಾಡುತ್ತಿದೆ. ಒಟ್ಟಾರೆ ಡಿಕೆಶಿ ವಿರುದ್ಧ ಸಮರ ಸಾರಿರುವ ಸಾಹುಕಾರ್ ಮುಂದೆ ಯಾವ ನಡೆ ಅನುಸರಿಸಲಿದ್ದಾರೆ ಎಂಬುವುದು ಕಾದು ನೋಡಬೇಕಿದೆ.///////