ಬೆಳಗಾವಿಯಲ್ಲಿ ಡಿಕೆಶಿ ಸ್ವಾಗತಕ್ಕೆ ಬಾರದ ಶಾಸಕರು

ಬೆಳಗಾವಿ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದು ವಿರೋಧ ಪಕ್ಷದ ನಾಯಕರು ಆಗಾಗ ಆರೋಪ ಮಾಡುತ್ತಿರುತ್ತಾರೆ. ಈ ಆರೋಪಕ್ಕೆ ಪುಷ್ಠಿ ನೀಡುವಂತೆ ಬೆಳಗಾವಿಯ ವಿಮಾನ ನಿಲ್ದಾಣದ ಈ ದೃಶ್ಯಗಳು ಸಾಕ್ಷಿಯಾಗಿವೆ.
ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಅವರು ಬೆಳಗಾವಿಗೆ ಬಂದಾಗ ಬೆಳಗಾವಿಯ ಯಾವೊಬ್ಬ ಶಾಸಕರು, ಸಚಿವರು ಸ್ವಾಗತಕ್ಕೆ ಬಂದಿರಲಿಲ್ಲ.
ಸಚಿವ ಸತೀಶ್ ಜಾರಕಿಹೊಳಿ ಬೆಂಗಳೂರು ಪ್ರವಾಸದಲ್ಲಿದ್ದರೆ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಖಾಸಗಿ ಕಾರ್ಯಕ್ರಮ ನಿಮಿತ್ತ ಭದ್ರಾವತಿಯಲ್ಲಿದ್ದಾರೆ. ಬೆಳಗಾವಿಯ 11 ಕಾಂಗ್ರೆಸ್ ಶಾಸಕರು ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ಬೆಳಗಾವಿಯಲ್ಲಿ ಇಲ್ಲ ಎಂದು ತಿಳಿದುಬಂದಿದೆ.
ಅಥಣಿ ಶಾಸಕ ಲಕ್ಷ್ಮಣ ಸವದಿ, ಕಾಗವಾಡ ಶಾಸಕ ರಾಜುಕಾಗೆ, ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ, ಚಿಕ್ಕೋಡಿ ಶಾಸಕ ಗಣೇಶ್ ಹುಕ್ಕೇರಿ, ರಾಮದುರ್ಗ ಶಾಸಕ ಅಶೋಕ್ ಪಟ್ಟಣ, ಸವದತ್ತಿ ಶಾಸಕ ವಿಶ್ವನಾಥ ವೈದ್ಯ, ಬೆಳಗಾವಿ ಶಾಸಕ ರಾಜು ಶೇಠ್ ಹಾಗೂ ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ್ ತಮ್ಮ ಕೆಲಸದ ನಿಮಿತ್ತ ಬೆಂಗಳೂರಿನಲ್ಲಿಯೇ ಇದ್ದಾರೆ. ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ ಅನಾರೋಗ್ಯದ ಕಾರಣ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.
ಈ ಎಲ್ಲಾ ಕಾರಣಗಳಿಂದ ಸಚಿವ, ಶಾಸಕರು ಬೆಳಗಾವಿಯಲ್ಲಿ ಡಿಕೆಶಿ ಸ್ವಾಗತಕ್ಕೆ ಗೈರು ಹಾಜರಾಗಿದ್ದಾರೆ. ಕಾಂಗ್ರೆಸ್ ನಾಯಕರು ಉದ್ದೇಶಪೂರ್ವಕವಾಗಿಯೇ ಗೈರಾಗಿದ್ದಾರೆ ಎಂಬ ಮಾತುಗಳು ಈಗ ಬೆಳಗಾವಿ ರಾಜಕೀಯದಲ್ಲಿ ಹರಿದಾಡುತ್ತಿದೆ.//////