Belagavi News In Kannada | News Belgaum

ಹುಲಿ ಉಗುರು: ವರ್ತೂರು ಸಂತೋಷ್​ ಬಳಿಕ ದರ್ಶನ್​, ವಿನಯ್​ ಗುರೂಜಿಗೆ ಶಾಕ್‌

ಬೆಂಗಳೂರು: ಹುಲಿ ಉಗುರು ಧರಿಸಿದ ಆರೋಪದ ಮೇಲೆ ಬಿಗ್‌ ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಬಂಧಿಸಿ ಇದೀಗ ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿದೆ. ಇದರ ಬೆನ್ನಲ್ಲೇ, ಚಾಲೆಂಜಿಂಗ್ ಸ್ಟಾರ್‌ ದರ್ಶನ್ ಹಾಗೂ ವಿನಯ್ ಗುರೂಜಿ ಅವರ ಮೇಲೆ ಹುಲಿ ಉಗುರು ಮತ್ತು ಹುಲಿ ಚರ್ಮ ಬಳಸಿದ ಆರೋಪ ಕೇಳಿಬಂದಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಲಿ ಉಗುರು ಲಾಕೆಟ್ ಧರಿಸಿದ್ದಾರೆ ಹಾಗೂ ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕುಳಿತಿದ್ದಾರೆ ಎಂದು ಆರೋಪಿಸಿ ಇಬ್ಬರ ಮೇಲೆ ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಎನ್ನುವವರು ಅರಣ್ಯಾಧಿಕಾರಿಗೆ ದೂರು ನೀಡಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ನಟ ದರ್ಶನ್ ವಿರುದ್ಧ ದೂರು ದಾಖಲಾಗಿದೆ.

ವರ್ತೂರು ಸಂತೋಷ್ ಅವರು ಹುಲಿ ಉಗುರು ಧರಿಸಿದ ಕಾರಣಕ್ಕೆ ಬಂಧನವಾದ ಬೆನ್ನಲ್ಲೇ, ಇದೀಗ ನಟ ದರ್ಶನ್ ಮತ್ತು ವಿನಯ್ ಗುರೂಜಿ ಅವರ ಮೇಲೆ ಆರೋಪ ಕೇಳಿಬಂದಿದೆ. ಈ ಹಿಂದೆ ದರ್ಶನ್ ಅವರು ಧರಿಸಿದ್ದ ಹುಲಿ ಉಗುರಿನ ಫೋಟೋ ವೈರಲ್ ಆಗಿತ್ತು. ಹಾಗೆಯೇ, ವಿನಯ್ ಗುರೂಜಿ ಅವರು ಹುಲಿಯ ಚರ್ಮದ ಮೇಲೆ ಕುಳಿತಿರುವ ಫೋಟೋ ಕೂಡ ವೈರಲ್ ಆಗಿತ್ತು.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಟೀಕೆಗಳು ವ್ಯಕ್ತವಾಗುತ್ತಿದ್ದು, ನ್ಯಾಯ ಎಂದರೆ ಎಲ್ಲರಿಗೂ ಒಂದೇ ರೀತಿ ಇರಬೇಕು. ಈಗ ಇವರಿಬ್ಬರ ಮೇಲೆ ಯಾವಾಗ ಕ್ರಮ ಕೈಗೊಳ್ಳಲಾಗುವುದು ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.

“ದರ್ಶನ್ ಬಂಗಾರದ ಚೈನ್ ಹಾಕಿದ್ದಾರೆ. ಅದರಲ್ಲಿ ಹುಲಿಯ ಉಗುರು ಇದೆ. ಅವರಿಂದ ಕಾನೂನಿನ ಉಲ್ಲಂಘನೆ ಆಗಿದೆ. ವಿನಯ್ ಗುರೂಜಿ ಹುಲಿಯ ಚರ್ಮದ ಮೇಲೆ ಕೂತಿದ್ದಾರೆ. ಹುಲಿಯ ಉಗುರು ಇದ್ದ ಕಾರಣಕ್ಕೆ ವರ್ತೂರು ಸಂತೋಷ ಅವರನ್ನು ಬಂಧಿಸಿದ್ದೀರಿ. ಅದೇ ರೀತಿ ನಟ ದರ್ಶನ್, ವಿನಯ್ ಗುರೂಜಿಯನ್ನೂ ಕರೆಸಿ ವಿಚಾರಿಸಿ” ಎಂದು ದೂರು ನೀಡಿದ ಶಿವಕುಮಾರ್ ಹೇಳಿದ್ದಾರೆ./////