ಹುಲಿ ಉಗುರನ್ನ ಧರಿಸಿದ್ದಾರೆ ಅಂದ್ರೆ ಹುಲಿ ಸತ್ತಿರಲೇಬೇಕು; ವಾಟಾಳ್ ವಾಗ್ದಾಳಿ

ಬೆಂಗಳೂರು: ಹುಲಿ ಉಗುರನ್ನ ಹಾಕಿಕೊಳ್ಳುವ ಪ್ರವೃತ್ತಿ ಒಳ್ಳೇದಲ್ಲ. ಹುಲಿ ಉಗುರನ್ನ ಧರಿಸಿದ್ದಾರೆ ಅಂದರೆ ಹುಲಿ ಸತ್ತಿರಲೇಬೇಕು. ಈ ವಿಚಾರದಲ್ಲಿ ಉನ್ನತಮಟ್ಟದ ತನಿಖೆ ಯಾಗಬೇಕು. ಹುಲಿ ಉಗುರಿನ ಮೂಲವನ್ನ ಪತ್ತೆ ಹಚ್ಚಬೇಕು ಎಂದು ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದ್ದಾರೆ.
ಅರಣ್ಯ ಭವನದ ಮುಂದೆ ಹುಲಿ ಚರ್ಮ ಮಾದರಿಯ ಶಾಲು ಧರಿಸಿ ವಿನೂತನ ಪ್ರತಿಭಟನೆ ಮಾಡಿದ ವಾಟಾಳ್ ನಾಗರಾಜ್, ಹುಲಿ ಉಗುರಿಗೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ವೇಳೆ ವನ್ಯ ಜೀವಿ ರಕ್ಷಣೆಯಲ್ಲಿ ಇಲಾಖೆ ವಿಫಲ ವಾಗುತ್ತಿದೆ ಎಂದು ಖಂಡಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ ಮಾಡಿದ್ದಾರೆ.
ಹುಲಿ ಉಗುರಿನ ಪ್ರಕರಣ ಸಂಪೂರ್ಣ ತನಿಖೆಯಾಗಿ ಅಪರಾಧಿಗಳಿಗೆ ಶಿಕ್ಷೆಯಾಗಬೇಕು. ಹುಲಿ ಉಗುರು ಧರಿಸಿರುವವರ ಸಂಖ್ಯೆ ಬಹಳಷ್ಟಿದೆ. ಯಾರೋ ಒಬ್ವರನ್ನ ಬಂಧಿಸೋದಲ್ಲ. ಉನ್ನತ ಮಟ್ಟದ ತನಿಖೆಯಾಗಿ ಶಿಕ್ಷೆ ವಿಧಿಸಬೇಕು ಎಂದು ಹೇಳಿದ್ದಾರೆ.
ಪ್ರಕರಣ ಬೆಳಕಿಗೆ ಬಂದಮೇಲೆ ಅಸಹಾಯಕರನ್ನಷ್ಟೇ ಬಂಧನ ಮಾಡಲಾಗ್ತಿದೆ. ತನಿಖೆ ವಿಳಂಬವಾಗ್ತಿದ್ರೆ ಹುಲಿ ಉಗುರುಗಳ ಪೆಂಡೆಂಟ್ ಬದಲಾಗ್ತವೆ. ಕಬ್ಬಿಣ, ಚಿನ್ನ ಹಾಗೂ ತಾಮ್ರದ ಉಗುರುಗಳಾಗಿ ಬದಲಾಗುತ್ತವೆ. ಆರೋಪಿಗಳು ಹುಲಿ ಉಗುರನ್ನ ಬದಲಾಯಿಸಿ ಡುಪ್ಲಿಕೇಟ್ ಎನ್ನುತ್ತಿದ್ದಾರೆ. ಅರಣ್ಯ ಇಲಾಖೆ ಆರೋಪಿಗಳು ತಪ್ಪಿಸಿ ಕೊಳ್ಳಲು ಅವಕಾಶ ಕೊಡಬಾರದು. ಅರಣ್ಯ ಇಲಾಖೆಗೆ ಒಂದು ವಾರ ಗಡುವು ಕೊಡ್ತೇನೆ. ಯಾರೇ ತಪ್ಪು ಮಾಡಿದ್ರು ಶಿಕ್ಷೆ ಯಾಗಬೇಕೆಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಬಳಿಕ ವಾಟಾಳ್ ನಾಗರಾಜ್ ಹಾಗೂ ಪ್ರತಿಭಟನಾಕಾರರನ್ನ ಪೊಲೀಸರು ವಶಕ್ಕೆ ಪಡೆದು ಬಸ್ಸಿನಲ್ಲಿ ಕರೆದೊಯ್ದಿದ್ದಾರೆ./////