ಬಿಜೆಪಿ ನಾಯಕ ವಿಜುಗೌಡ ಪಾಟೀಲ್ ನಿವಾಸದಲ್ಲಿ ಶೋಧ: ಹುಲಿ ಉಗುರಿನ ಪೆಂಡೆಂಟ್ ವಶ

ವಿಜಯಪುರ: ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಪುತ್ರ ಹುಲಿ ಉಗುರು ಧರಿಸಿದ ಆರೋಪ ಕೇಳಿ ಬಂದಿತ್ತು. ಇದಕ್ಕೆ ಸಾಕ್ಷಿವೆಂಬಂತೆ ಕೆಲ ಫೋಟೋಗಳು ವೈರಲ್ ಆಗಿದ್ದವು. ಬಳಿಕ ಅವರು ಅದು ನಕಲಿ ಹುಲಿ ಉಗುರು, ಬೇಕಾದರೆ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಮಾಡಲಿ ಎಂದಿದ್ದರು. ಇದರ ಬೆನ್ನಲ್ಲೇ ಇಂದು ನಗರದಲ್ಲಿರುವ ವಿಜುಗೌಡ ಪಾಟೀಲ್ ಮನೆಯಲ್ಲಿ ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ ಮಾಡಿದ್ದು, ಹುಲಿ ಉಗುರಿನ ಪೆಂಡೆಂಟ್ ವಶಕ್ಕೆ ಪಡೆದುಕೊಂಡಿದ್ದಾರೆ.
ಜಿಲ್ಲಾ ಅರಣ್ಯಾಧಿಕಾರಿ ಶಿವಶರಣಯ್ಯ, ಸಹಾಯಕ ಅರಣ್ಯಾಧಿಕಾರಿ ಭಾಗ್ಯವಂತ ಮಸೂದೆ, ವಲಯ ಅರಣ್ಯಾಧಿಕಾರಿ ಸಂತೋಷ ಆಜೂರ ಹಾಗೂ ಸಿಬ್ಬಂದಿಗಳಿಂದ ವಿಜುಗೌಡ ಪುತ್ರ ಶಾಶ್ವತಗೌಡ ಪಾಟೀಲ ಹಾಕಿರುವ ಹುಲಿ ಉಗುರು ಕುರಿತು ಪರಿಶೀಲನೆಗೆ ಬಂದಿದ್ದಾರೆ. ಶಾಶ್ವತಗೌಡ ಪಾಟೀಲ ಹಾಕಿಕೊಂಡಿರುವ ಅಸಲಿ ಹುಲಿ ಉಗುರೋ ಅಥವಾ ನಕಲಿಯೋ ಎಂಬುದನ್ನು ಪರೀಕ್ಷೆ ಮಾಡಲಿದ್ದಾರೆ. ಪರಿಶೀಲನೆ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆ.
ತಮ್ಮ ಪುತ್ರ ಧರಿಸಿದ್ದು ನಕಲಿ ಹುಲಿ ಉಗುರು. ಏಳು ವರ್ಷಗಳ ಹಿಂದೆ ಪೆಂಡೆಂಟ್ನಲ್ಲಿ ನಕಲಿ ಹುಲಿ ಉಗುರು ಹಾಕಿಕೊಂಡಿದ್ದ ಎಂದು ನಿನ್ನೆಯೇ ಸ್ಪಷ್ಟನೆ ನೀಡಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಬೇಕಾದರೆ ತನಿಖೆ ಮಾಡಲಿ. ನಾವು ತನಿಖೆಗೆ ಸಿದ್ಧ. ಅಧಿಕಾರಿಗಳು ಕೇಳಿದರೆ ಚೈನ್ ತೋರಿಸುತ್ತೇವೆ. ನಮಗೆ ಕಾನೂನಿನ ಅರಿವು ಇದೆ. ನಮ್ಮ ಕುಟುಂಬ ಕಾನೂನು ಪಾಲಿಸುತ್ತದೆ ಎಂದು ಹೇಳಿದ್ದರು.
ನಾನು ಚಿಲ್ಲರೇ ರಾಜಕಾರಣ ಮಾಡಲ್ಲ. ನಮ್ಮ ಮಗನ ಫೋಟೋ ಇಟ್ಟುಕೊಂಡು ಕೆಲವರು ಚಿಲ್ಲರೇ ರಾಜಕಾರಣ ಮಾಡುತ್ತಿದ್ದಾರೆ. ಅವರದ್ದು ನನ್ನ ಬಳಿ ಬಹಳ ಇದೆ ಎಂದು ಹೆಸರು ಹೇಳದೆ ಪರೋಕ್ಷವಾಗಿ ಸಚಿವ ಎಂ.ಬಿ. ಪಾಟೀಲ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ನಿವಾಸದಲ್ಲಿ ಪರೀಕ್ಷೆ ಮಾಡಿದ ಬಳಿಕ ಅರಣ್ಯಾಧಿಕಾರಿ ಶಿವಶರಣಯ್ಯ ಪ್ರತಿಕ್ರಿಯಿಸಿದ್ದು, ವಿಜುಗೌಡ ಪಾಟೀಲ ಪುತ್ರ ಶಾಶ್ವತಗೌಡ ಪಾಟೀಲ್ ಹುಲಿ ಉಗುರು ಇರುವ ಪೆಂಡೆಂಟ್ ಹಾಕಿರುವ ಕುರಿತು ವಿಚಾರಣೆ ಮಾಡಿದ್ದೇವೆ. ವಿಜುಗೌಡ ಪಾಟೀಲ ಮನೆಯಲ್ಲಿ ಹುಲಿ ಉಗುರು ಇರುವ ಪೆಂಡೆಂಟ್ ವಶಕ್ಕೆ ಪಡೆದು ಮಹಜರು ಮಾಡಿದ್ದೇವೆ. ಈ ಪ್ರಕರಣದಲ್ಲಿ ನಾವು ಸ್ವಮೋಟೋ ಪ್ರಕರಣ ದಾಖಲು ಮಾಡಿಕೊಂಡು ವಿಚಾರಣೆ ಮಾಡುತ್ತಿದ್ದೇವೆ ಎಂದಿದ್ದಾರೆ.
ಹುಲಿ ಉಗುರು ಅಸಲಿಯೋ, ನಕಲಿಯೋ ಎಂಬುದರ ಕುರಿತು ಪರೀಕ್ಷೆಯಾಗಬೇಕಿದೆ. ಡೆಹ್ರಾಡೂನ್ ನಲ್ಲಿರೋ ವೈಲ್ಡ್ ಲೈಫ್ ಇನ್ಸಸ್ಟಿಟ್ಯೂಟ್ ಆಫ್ ಇಂಡಿಯಾಗೆ ಕಳುಹಿಸುತ್ತೇವೆ. ಅಲ್ಲಿನ ಫಾರೆನ್ಸಿಕ್ ಲ್ಯಾಬ್ನಲ್ಲಿ ಉಗುರಿನ ಅಸಲಿಯತ್ತಿನ ಕುರಿತು ಡಿಎನ್ಎ ಪರೀಕ್ಷೆ ನಡೆಯುತ್ತದೆ. ವೈಲ್ಡ್ ಲೈಫ್ ಇನ್ಸಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಈ ಉಗುರು ಹುಲಿಯುಗರೋ ಅಥವಾ ನಕಲಿಯೋ ಎಂಬ ವರದಿ ಬಂದ ಮೇಲೆಯೇ ಸತ್ಯಾಸತ್ಯತೆ ಗೊತ್ತಾಗಲಿದೆ. ಇದಕ್ಕಾಗಿ ಒಂದು ತಿಂಗಳ ಸಮಯ ಹಿಡಿಯುತ್ತದೆ. ಒಂದು ವೇಳೆ ಪರೀಕ್ಷೆಯಲ್ಲಿ ಹುಲಿ ಉಗುರು ಅಸಲಿ ಎಂದು ಬಂದರೆ ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ./////