Belagavi News In Kannada | News Belgaum

ವಾಲ್ಮೀಕಿ ಸಮಾಜ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದೆ: ಶಾಸಕ ಆಸೀಫ್ (ರಾಜು) ಸೇಠ್

ಆದಿ ಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ-2023

ಬೆಳಗಾವಿ, ಅ.28 : ಶ್ರೀ ಮಹರ್ಷಿ ವಾಲ್ಮೀಕಿಯವರು ರಾಮಾಯಣದಂತಹ ಶ್ರೇಷ್ಠ ಕಾವ್ಯವನ್ನು ಕೊಡುಗೆಯಾಗಿ ನೀಡುವುದರ ಮೂಲಕ ಭಾರತದ ಪುರಾತನ ಸಂಸ್ಕೃತಿ ಇಂದಿನ ಯುವ ಪೀಳಿಗೆವರೆಗೂ ತಲುಪಿಸಿದ್ದಾರೆ. ವಾಲ್ಮೀಕಿ ಸಮುದಾಯ ಈಗ ವಿಜ್ಞಾನ, ಶಿಕ್ಷಣ, ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರೆದ ಸಮಾಜವಾಗಿದೆ ಎಂದು ಬೆಳಗಾವಿ ಉತ್ತರ ವಿಧಾನ ಸಭಾ ಮತ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಶನಿವಾರ (ಅ.28) ನಡೆದ ಆದಿ ಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ಅವರು ಮಾತನಾಡಿದರು.

ನಾವು ಮಾಡುವ ಕಾರ್ಯಗಳು, ನಮ್ಮ ಪಾತ್ರ ನಮ್ಮ ಜೀವನವನ್ನು ರೂಪಿಸುತ್ತವೆ. ಇದರಿಂದ ನಾವು ಬದುಕನ್ನು ಉತ್ತಮವಾಗಿ ಕಟ್ಟಿಕೊಳ್ಳಲು ಸಹಾಯವಾಗುತ್ತದೆ. ನಮ್ಮ ಶ್ರೇಷ್ಠತೆಯನ್ನು ನಾವು ಮಾಡುವ ಕಾರ್ಯಗಳು ನಿರ್ಧರಿಸುತ್ತವೆ ಎಂಬುದನ್ನು ಮಹರ್ಷಿ ವಾಲ್ಮೀಕಿಯವರ ಜೀವನದಿಂದ ನಾವು ತಿಳಿಯಬಹುದಾಗಿದೆ ಎಂದು ಆಸೀಫ್ (ರಾಜು) ಸೇಠ್ ಅವರು ತಿಳಿಸಿದರು.

ಧರ್ಮ, ನೀತಿ ಸಾರಿದ ರಾಮಾಯಣ ಕಾವ್ಯ:

ಶ್ರೀ ವಾಲ್ಮೀಕಿ ಮಹರ್ಷಿಗಳ ರಾಮಾಯಣದಲ್ಲಿ ಶ್ರೀ ರಾಮನ ಧರ್ಮ ಪಾಲನೆ, ನ್ಯಾಯ ನೀತಿ ಧರ್ಮದ ಕುರಿತು ತಿಳಿಸುವುದರ ಮೂಲಕ ಭಾರತಕ್ಕೆ ಸಂಸ್ಕೃತಿಯ ಕೊಡುಗೆ ನೀಡಿದ್ದಾರೆ. ಧರ್ಮ ನೀತಿ, ಸಹಬಾಳ್ವೆ, ಪ್ರೇಮ, ಆಚಾರ ವಿಚಾರಗಳನ್ನು ರಾಮಾಯಣ ಎಂಬ ಮಹಾ ಕಾವ್ಯದ ಮೂಲಕ ಸಮಾಜಕ್ಕೆ ಸರಳವಾಗಿ ಅರ್ಥೈಸಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ರಚನೆಯ ಪೀಠಿಕೆಯನ್ನು ನಮ್ಮ ಜೀವನದ ದಿನಚರಿಯಲ್ಲಿ ಅಳವಡಿಸಿಕೊಂಡು, ಸಂವಿಧಾನ ಬದ್ಧವಾಗಿ ನಾವೆಲ್ಲರೂ ನಡೆದುಕೊಳ್ಳಬೇಕು. ಮುಂದಿನ ಯುವ ಪೀಳಿಗೆ ಉನ್ನತ ಶಿಕ್ಷಣ ಪಡೆದು ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಸಾಧಕರಾಗಿ ಗುರುತಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

ವಿಶ್ವದ ಮೊದಲ ಶ್ಲೋಕ ರಚಿಸಿದ್ದು, ವಾಲ್ಮೀಕಿ:

ವಾಲ್ಮೀಕಿ, ರಾಮ ಸೀತೆಯನ್ನು ಕಾಡಿಗೆ ಕಳುಹಿಸಿದಾಗ ಆಶ್ರಯ ನೀಡಿದ್ದಾರೆ ಎಂದು ಹೇಳಲಾಗುತ್ತದೆ. ವಾಲ್ಮೀಕಿ ಅವರ ಆಶ್ರಮದಲ್ಲಿಯೇ ಸೀತೆ ವಾಸವಾಗಿದ್ದು, ಲವ, ಕುಶ ಕೂಡ ಇಲ್ಲಿಯೇ ಜನಿಸುತ್ತಾರೆ. ಅಲ್ಲದೇ ವಾಲ್ಮೀಕಿ ವಿಶ್ವದ ಮೊದಲ ಶ್ಲೋಕ ರಚಿಸಿದ್ದಾರೆ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ. ಈ ಎಲ್ಲಾ ಕಾರಣದಿಂದಾಗಿ ಮಹರ್ಷಿ ವಾಲ್ಮೀಕಿ ಜಯಂತಿ ವಿಶೇಷ ಮಹತ್ವ ಪಡೆದಿದೆ ಎಂದು ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಪ್ರೊ. ಕವಿತಾ ಕುಸುಗಲ್ ಅವರು ಹೇಳಿದರು.

ವಾಲ್ಮೀಕಿಯವರು ರಾಮಾಯಣದಲ್ಲಿ ಹೇಳಿದ ಮಾನವೀಯ ಮೌಲ್ಯಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು. ಸಮುದಾಯದ ಮಹಿಳೆಯರು ಉನ್ನತ ಶಿಕ್ಷಣ ಪಡೆಯಬೇಕು, ಪ್ರತಿ ವರ್ಷ ಆಚರಿಸುತ್ತಿವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರೊ. ಕವಿತಾ ಕುಸುಗಲ್ ಕರೆ ನೀಡಿದರು.

ಜಗತ್ತಿನ ಶ್ರೇಷ್ಠ ಕಾವ್ಯ ರಾಮಾಯಣ:

ಈ ವೇಳೆ ವಿಶೇಷ ಉಪನ್ಯಾಸ ನೀಡಿದ ಬೆಂಗಳೂರು ವಿಶ್ವ ವಿದ್ಯಾಲಯದ ಪ್ರೊ. ರಾಜಪ್ಪ ದಳವಾಯಿ ಅವರು ಮಹರ್ಷಿ ವಾಲ್ಮೀಕಿ ಕವಿಯಾಗಿ ಋಷಿಮುನಿಯಾಗಿ ನೊಂದ ಸೀತಾ ದೇವಿಯ ನೋವು, ಕಣ್ಣೀರು, ಅರ್ಥೈಸಿಕೊಂಡು ಹೆಣ್ಣಿನ ಜೀವನದ ಕತೆ, ರಾಮನ ಆದರ್ಶಗಳನ್ನು ರಾಮಾಯಣ ಮಹಾ ಕಾವ್ಯ ರಚಿಸುವುದರ ಮೂಲಕ ಜಗತ್ತಿಗೆ ಪರಿಚಯಿಸಿದರು ಎಂದು ಹೇಳಿದರು.

ಪರಿಶಿಷ್ಟ ವರ್ಗಗಳ ಜೀವನ ವಿಧಾನ, ಶೈಲಿ ಅವರ ಆಚರಣೆಗಳು, ಸಂಸ್ಕೃತಿ, ಮಹತ್ವವುಳ್ಳ ಆಚಾರ ವಿಚಾರಗಳ ಕುರಿತು ಹಾಗೂ ಪ್ರಸ್ತುತ ವಾಲ್ಮೀಕಿ ಸಮುದಾಯಗಳ ಜೀವನ ಶೈಲಿ ಶಿಕ್ಷಣ, ರಾಜಕೀಯ, ಕಲೆ, ಉದ್ಯಮ ಸೇರಿದಂತೆ ಅವರ ಪ್ರಗತಿಪರ ಚಿಂತನೆಗಳ ಕುರಿತು ಪ್ರೊ. ರಾಜಪ್ಪ ದಳವಾಯಿ ಅವರು ಉಪನ್ಯಾಸ ನೀಡಿದರು.

ಬಳಿಕ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸಂವಿಧಾನ ಪೀಠಿಕೆ ಭೋದಿಸಿದರು.

ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ:

ಎಸ್.ಎಸ್.ಎಲ್.ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಗೆ ಲಕ್ಷ್ಮೀ ಕುದರಿ ಅವರಿಗೆ 1 ಲಕ್ಷ ರೂಪಾಯಿ ಚೆಕ್ ವಿತರಣೆ ಮಾಡಲಾಯಿತು. ಅದೇ ರೀತಿಯಲ್ಲಿ ಎಸ್.ಎಸ್.ಎಲ್.ಸಿ- ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಹಾಗೂ ಪಿಎಚ್.ಡಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಶುಭಂ ಶುಕ್ಲಾ, ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವಣ ನಾಯಕ್, ಬೆಳಗಾವಿ ಜಿಲ್ಲಾ ವಾಲ್ಮೀಕಿ ಸಮಾಜದ ಅಧ್ಯಕ್ಷ ರಾಜಶೇಖರ ತಳವಾರ, ಮುಖಂಡರಾದ ಭಾವಕಣ್ಣ ಬಂಕ್ಯಾಗೊಳ, ಯಲ್ಲಪ್ಪ ಕೊಳೇಕರ, ಮಲ್ಲೇಶ ಚೌಗಲಾ, ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ವಿಜಯ ತಳವಾರ, ಮುಖಂಡರಾದ ಮಹಾದೇವ ತಳವಾರ, ಸುರೇಶ್ ಗವನ್ನವರ, ಬಾಳೇಶ್ ದಾಸನಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧಡೆಯಿಂದ ಆಗಮಿಸಿದ ಜನರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ ಕುರಿಹುಲಿ ಅವರು ಸ್ವಾಗತ ಕೋರಿದರು, ಸೋಮು ಮಾಳಗಿ ನಿರೂಪಿಸಿದರು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕಾಧಿಕಾರಿ ಪ್ರವೀಣ ಪಾಟೀಲ ವಂದಿಸಿದರು.

ಭಾವ್ಯ ಮೆರವಣಿಗೆ ಕಾರ್ಯಕ್ರಮ:

ಇದಕ್ಕೂ ಮುಂಚೆ ನಗರದ ಕೋಟೆ ಕೆರೆ ಆವರಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಡೊಳ್ಳು ಬಾರಿಸುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಕೋಟೆ ಕೆರೆಯಿಂದ ಪ್ರಾರಂಭವಾಗಿ ಮೆರವಣಿಗೆ ಕುಮಾರ ಗಂಧರ್ವ ಕಲಾ ಮಂದಿರದ ವರೆಗೆ ತಲುಪಿತು.

ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ವಿಧಾನ ಸಭಾ ಮತ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ನಗರ ಪೊಲೀಸ್ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಹರ್ಷಲ್ ಭೋಯರ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಶುಭಂ ಶುಕ್ಲಾ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ ಕುರಿಹುಲಿ, ಬೆಳಗಾವಿ ಜಿಲ್ಲಾ ವಾಲ್ಮೀಕಿ ಸಮಾಜದ ಅಧ್ಯಕ್ಷ ರಾಜಶೇಖರ ತಳವಾರ, ಮುಖಂಡರಾದ ಭಾವಕಣ್ಣ ಬಂಕ್ಯಾಗೊಳ ಸೇರಿದಂತೆ ಮತ್ತಿತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
***