Belagavi News In Kannada | News Belgaum

ಮಕ್ಕಳ ಘನತೆಯ ಬದುಕು ಕುರಿತು ಪುಸ್ತಕ ಬಿಡುಗಡೆ

ಮಕ್ಕಳ ರಕ್ಷಣೆಯಲ್ಲಿ ಮಾಧ್ಯಮದ ಶಿಷ್ಟಾಚಾರದ ಬಗ್ಗೆ ವಿಶೇಷ ಕಾರ್ಯಾಗಾರ


ಬೆಳಗಾವಿ, ನ.09 : ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಪತ್ರಿಕಾ ಮಾಧ್ಯಮದವರು ಮಕ್ಕಳಿಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣಗಳು ಗಮನಕ್ಕೆ ಬಂದಲ್ಲಿ ತಕ್ಷಣವೆ ಮಾಹಿತಿಯನ್ನು ನಿರ್ಲಕ್ಷ ಮಾಡದೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಬೇಕು. ಅದರಂತೆ ತಾವು ವರದಿ ಮಾಡುವ ಸಂದರ್ಭದಲ್ಲಿ ಪತ್ರಿಕೆಯಲ್ಲಿ ಯಾವ ಪದ ಬಳಕೆ ಮಾಡಬೇಕು ಎಂಬುವುದು ಮಕ್ಕಳ ಘನತೆ ಪುಸ್ತಕದಲ್ಲಿ ಮಾಹಿತಿ ಲಭ್ಯವಿರುತ್ತದೆ ಆದ್ದರಿಂದ ಪುಸ್ತಕವನ್ನು ಓದಿ ತಿಳಿದುಕೊಳ್ಳಬೇಕು ಎಂದು ಜಿಲ್ಲಾ ಕಾನೂನೂ ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ. ಮುರಳಿ ಮೋಹನ ರೆಡ್ಡಿ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕಾನೂನೂ ಸೇವೆಗಳ ಪ್ರಾಧಿಕಾರ ಹಾಗೂ ಬೆಳಗಾವಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ನಗರದ ವಾರ್ತಾ ಭವನದಲ್ಲಿ ಗುರುವಾರ (ನ.09) ನಡೆದ ಮಕ್ಕಳ ಘನತೆಯ ಬದುಕು ಕುರಿತು ಪುಸ್ತಕ ಬಿಡುಗಡೆ ಹಾಗೂ ಮಕ್ಕಳ ರಕ್ಷಣೆಯಲ್ಲಿ ಮಾಧ್ಯಮದ ಶಿಷ್ಟಾಚಾರ ಬಗ್ಗೆ ವಿಶೇಷ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
“ಮಕ್ಕಳ ಘನತೆಯ ಬದುಕು” ಪುಸ್ತಕದಲ್ಲಿರುವ ಕೆಲವು ಅಂಶಗಳನ್ನು ತಿಳಿಸುತ್ತಾ ಬಾಲ ನ್ಯಾಯ ಕಾಯ್ದೆ 2015ರ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಅನ್ವಯ ಸೆಕ್ಷನ್ 74ರ ಪ್ರಕಾರ ಮಕ್ಕಳ ವೈಯಕ್ತಿಕ ಮಾಹಿತಿ ಹಾಗೂ ಮಗುವಿನ ಭಾವಚಿತ್ರ, ಮಗುವಿನ ವಿಳಾಸ, ಗುರುತನ್ನು ಬಹಿರಂಗಪಡಿಸುವಂತಿಲ್ಲ. ಒಂದು ವೇಳೆ ಬಹಿರಂಗಪಡಿಸಿದ್ದಲ್ಲಿ ಶಿಕ್ಷೆ ಮತ್ತು ವರೆಗೆ ದಂಡ ವಿಧಿಸಬಹುದು ಎಂದು ಹೇಳಿದರು.
ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಯಾವುದೆ ಮಾಹಿತಿ ತಮಗೆ ಬಂದಲ್ಲಿ ತಾವು ಹೆಚ್ಚು ಹೆಚ್ಚಾಗಿ ಪ್ರಚಾರ ಮಾಡವುದು ಅತ್ಯುನ್ನತ ಕಾರ್ಯವಾಗಿದೆ ಎಂದರು.
ಅದೇ ರೀತಿಯಲ್ಲಿ ಜಿಲ್ಲಾ ಕಾನುನು ಸೇವೆಗಳ ಪ್ರಾಧಿಕಾರದ ಸೌಲಭ್ಯಗಳ ಕುರಿತು ಜಿಲ್ಲಾ ಕಾನೂನೂ ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ. ಮುರಳಿ ಮೋಹನ ರೆಡ್ಡಿ ಅವರು ತಿಳಿಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತೇಶ ಭಜಂತ್ರಿ ಅವರು ಯಾವುದೇ 18 ವರ್ಷದ ಒಳಗಿನ ಮಕ್ಕಳು ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದಾಗ ಆ ಮಗುವಿಗೆ ಬಾಲಾಪರಾಧಿ ಎಂಬ ಶಬ್ದವನ್ನು ಬಳಸುವಂತಿಲ್ಲ. ಬದಲಾಗಿ ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಮಗು ಎಂದು ಬಳಸಬೇಕು. ಹಾಗೂ ಮಕ್ಕಳ ನ್ಯಾಯ ಮಂಡಳಿಯಲ್ಲಿ ಮಗುವಿನ ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ಮಗುವನ್ನು ದಾಖಲಿಸುವ ಕೇಂದ್ರವನ್ನು ರಿಮ್ಯಾಂಡ ಹೋಮ್ ಎಂಬ ಶಬ್ದವನ್ನು ಬಳಸದೆ ವೀಕ್ಷಣಾಲಯ (observation home) ಎಂಬ ಪದ ಬಳಸಬೇಕು ಎಂದು ತಿಳಿಸಿದರು.
ಅದರಂತೆ 18 ವರ್ಷ ಒಳಗಿನ ಮಕ್ಕಳ ಲೈಂಗಿಕ ಹಲ್ಲೆ ಪ್ರಕರಣದ ಸಂದರ್ಭದಲ್ಲಿ ಅತ್ಯಾಚಾರ ಎಂಬ ಪದ ಬಳಕೆ ಮಾಡದೆ ಲೈಂಗಿಕ ಹಲ್ಲೆ, ದೈಹಿಕ ಹಿಂಸೆ, ಕಿರುಕುಳ ಅಥವಾ ಶೋಷಣೆ ಎಂಬ ಪದ ಬಳಕೆ ಮಾಡಬೇಕು ಎಂದರು.
ದೇಶದಲ್ಲಿ ಒಟ್ಟು ಸುಮಾರು 40% ಮಕ್ಕಳಿದ್ದು ಅಂತಹ ಮಕ್ಕಳ ಮೂಲಭೂತ ಹಕ್ಕುಗಳು ಹಾಗೂ ಸೌಲಭ್ಯಗಳು ಸರಿಯಾಗಿ ಸಿಗುವಂತಾಗಬೇಕು. ದೇಶದ ಮುಂದಿನ ಭವಿಷ್ಯವಾದ ಮಕ್ಕಳ ಕುರಿತಾದ ಲೇಖನಗಳು, ಪತ್ರಿಕಾ ವರದಿಗಳು, ಕಥೆ ಕಾದಂಬರಿಗಳು, ಮಕ್ಕಳ ಸ್ನೇಹಿಯಾಗಿದ್ದು ಹೆಚ್ಚೆಚ್ಚು ಪ್ರಸಾರಗೊಳಿಸಲು ಎಲ್ಲ ಪತ್ರಿಕಾ ಮಾಧ್ಯಮದವರ ಮುಂದೆ ವಿನಂತಿಸಿದರು.
ಮಕ್ಕಳ ರಕ್ಷಣೆಯಲ್ಲಿ ಮಾಧ್ಯಮಗಳ ಪಾತ್ರ ಹಾಗೂ ಮಕ್ಕಳ ಹಕ್ಕುಗಳನ್ನು ಕಾಪಾಡಲು ಮತ್ತು ಮಕ್ಕಳ ಘನತೆಯನ್ನು ಎತ್ತಿ ಹಿಡಿಯಲು ಮಕ್ಕಳ ಪ್ರಕರಣದ ಕುರಿತು ವರದಿ ಮಾಡುವಾಗ ಅನುಸರಿಸಬೇಕಾದ ನಿಯಮಗಳ ಕುರಿತು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾರ್ಯ ವ್ಯಾಪ್ತಿ ಹಾಗೂ ಘಟಕದ ವಿವಿಧ ಕಾರ್ಯಕ್ರಮಗಳ ಕುರಿತು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತೇಶ ಭಜಂತ್ರಿ ಅವರು ವಿವರಿಸಿದರು.
ಪುಸ್ತಕ ಬಿಡುಗಡೆ:
ಇದಕ್ಕೂ ಮುಂಚೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ. ಮುರಳಿ ಮೋಹನ್ ರೆಡ್ಡಿ ಅವರು “ಮಕ್ಕಳ ಘನತೆಯ ಬದುಕು” ಕುರಿತು ಪುಸ್ತಕ ಬಿಡುಗಡೆ ಮಾಡಿದರು.
ಕಾರ್ಯಾಗಾರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ, ಬೆಳಗಾವಿ ವರದಿ ಕನ್ನಡ ದಿನಪತ್ರಿಕೆ ಸಂಪಾದಕ ಸತೀಶ್ ಗುಡಗೇನಟ್ಟಿ ಪ್ರಜಾವಾಣ ಜಿಲ್ಲಾ ವರದಿಗಾರ ಸಂತೋಷ ಚಿನಗುಡಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆ ವರದಿಗಾರ ರಾಜು ಗವಳಿ, ಟೈಮ್ಸ್ ಆಫ್ ಇಂಡಿಯಾ ವರದಿಗಾರ ರವಿ ಉಪ್ಪಾರ ಸೇರಿದಂತೆ ವಿವಿಧ ಪತ್ರಿಕಾ ಮಾಧ್ಯಮದ ಪ್ರತಿನಿಧಿಗಳು ಪಾಲ್ಗೊಂಡಿದ್ದರು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ/ಮಕ್ಕಳ ಸಹಾಯವಾಣ ಸಿಬ್ಬಂದಿಗಳು ಉಪಸ್ತಿತರಿದ್ದರು.