ಯಾದಗಿರಿ ಜಿಲ್ಲೆಯ ವಿವಿಧೆಡೆ ಬಿಜೆಪಿ ನಾಯಕರಿಂದ ಬರ ಅಧ್ಯಯನ ಎಕರೆಗೆ 50 ಸಾವಿರ ಪರಿಹಾರ ನೀಡಲು ಬೆಲ್ಲದ ಆಗ್ರಹ

ಯಾದಗಿರಿ: ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ದಿನಗಳಲ್ಲಿ ಬರಗಾಲ ಆವರಿಸಿದೆ ಇಂತಹ ಬರಗಾಲ ಹಿಂದೆಂದೂ ಬ೦ದಿರಲಿಲ್ಲ. ಬರಗಾಲದಿಂದಾಗಿ ರೈತರು ಸಂಪೂರ್ಣ ಬೆಳೆನಷ್ಟ ಅನುಭವಿಸಿ ತೀವ್ರ ಸಂಕಷ್ಟಕ್ಕೀಡಾಗಿರುವ ರೈತರ ಪ್ರತಿ ಎಕರೆಗೆ ರು.50 ಸಾವಿರ ಪರಿಹಾರ ನೀಡಬೇಕು ಎಂದು ಹುಬ್ಬಳ್ಳಿ ಧಾರವಾಡ ಶಾಸಕ ಅರವಿಂದ ಬೆಲ್ಲದ ಒತ್ತಾಯಿಸಿದರು.
ರಾಜ್ಯ ಬಿಜೆಪಿಯಿಂದ ಹಮ್ಮಿಕೊಂಡಿರುವ ಬರ ಪರಿಶೀಲನೆ ಅಂಗವಾಗಿ ಶುಕ್ರವಾರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ರಾಜ್ಯ ಸರಕಾರ ವರ್ಗಾವಣೆ ದಂಧೆಯನ್ನು ಕೈ ಬಿಟ್ಟು ರಾಜ್ಯದಲ್ಲಿ ಆವರಿಸಿದ ಬರ ಕುರಿತು ಗಮನಕೊಟ್ಟು ರೈತರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕೆಂದು ವಾಗ್ದಾಳಿ ನಡೆಸಿದರು. ಬಿಜೆಪಿ ಪಕ್ಷದ ಮುಖಂಡರು ರಾಜ್ಯದಲ್ಲಿ ಬರ ಅಧ್ಯಯನ ಮಾಡಲು ಹೊರಟಾಗ ರಾಜ್ಯ ಸರಕಾರ ಎಚ್ಚೆತ್ತುಕೊಂಡು ರು.೩೨೦ ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಲೇವಡಿ ಮಾಡಿದರು. ಈ ಪರಿಹಾರ ಸಾಕಾಗಲ್ಲ ಬಿಡುಗಡೆ ಮಾಡಿರುವ ಅನುದಾನ ರೈತರನ್ನು ಶೋಷಣೆ ಮಾಡುವಂತಿದೆ ಎಂದು ಟೀಕಿಸಿದ ಅವರು, ಕೇಂದ್ರ ಸರಕಾರದಿಂದ ೬ ಸಾವಿರ ಮತ್ತು ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ರೈತರಿಗೆ ಪ್ರತಿವರ್ಷ ನೀಡುತ್ತಿದ್ದ ರು.೪ ಸಾವಿರ ನೆರವನ್ನು ಕಾಂಗ್ರೆಸ್ ಸರಕಾರ ಸ್ಥಗಿತ ಮಾಡಿ ರೈತ ವಿರೋಧಿ ನಿಲುವು ತಾಳಿದೆ ಎ೦ದು ಗುಡುಗಿದರು.
ಈಗಾಗಲೇ ಮುಂಗಾರು ಹಿಂಗಾರು ವೈಫಲ್ಯದಿಂದಾಗಿ ರೈತರು ಜನ ಜಾನುವಾರುಗಳು ಸಂಕಷ್ಟದಲ್ಲಿ ಇದ್ದರು ಸಹ ಸರಕಾರ ಎಚ್ಚತ್ತುಗೊಳ್ಳದೆ ನಿರ್ಲಕ್ಷ್ಯ ಮಾಡುತ್ತಿದೆ. ಕಾಲುವೆಯಲ್ಲಿ ನೀರು ಇದ್ದಾಗ್ಯೂ ಸರಿಯಾಗಿ ನಿರ್ವಹಣೆ ಇಲ್ಲದೆ ಭತ್ತ, ಜೋಳ, ತೊಗರಿ ಸೇರಿದಂತೆ ಇನ್ನಿತರ ಬೆಳೆಗಳು ಒಣಗಿಹೋಗಿವೆ. ಜಿಲ್ಲಾ ಉಸ್ತುವಾರಿ ಸಚಿವರು ಕೂಡಾ ಈ ಭಾಗದ ರೈತರ ಸಂಕಷ್ಟಕ್ಕೆ ಸ್ಪ೦ದಿಸುವಲ್ಲಿ ವಿಫಲರಾಗಿದ್ದಾರೆ. ಬೆಳೆನಷ್ಠ ಅನುಭವಿಸಿರುವ ರೈತರ ನೆರವಿಗೆ ಧಾವಿಸುವಲ್ಲಿ ಹಾಗೂ ಬರ ಅಧ್ಯಯನ ಮಾಡುವಲ್ಲಿ ಎಡವಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಕೇಂದ್ರ ಸರಕಾರ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎನ್ನುವ ಕಾಂಗ್ರೆಸ ಮುಖಂಡರ ಆರೋಪ ಸಲ್ಲದು ಕೇಂದ್ರ ಸರಕಾರ ಅನುದಾನ ಬಿಡುಗಡೆ ಮಾಡುತ್ತದೆ ಇದರ ಬಗ್ಗೆ ಯಾವುದೇ ಅನುಮಾನ ಬೇಡ ಎಂದ ಅವರು, ನಮ್ಮ ರಾಜ್ಯದಿಂದ ಇತರೆ ರಾಜ್ಯಗಳಿಗೆ ವಿದ್ಯುತ್ ನೀಡುವ ನಾವುಗಳು ಇಲ್ಲಿನ ರೈತರಿಗೆ, ಕೈಗಾರಿಕೆಗೆ, ಗೃಹಪಯೋಗಕ್ಕೆ ವಿದ್ಯುತ್ ಇಲ್ಲದಿರುವುದು ದುರಂತಕ್ಕೆ ಸರಿ ಎಂದು ಕಳವಳ ವ್ಯಕ್ತಪಡಿಸಿದರು.
ಬರ ಅಧ್ಯಯನ ತಂಡದಲ್ಲಿದವರು ಯಾರ್ಯಾರು?ಈ ಸಂದರ್ಭದಲ್ಲಿ ಲೋಕಸಭೆ ಸದಸ್ಯ ರಾಜಾಅಮರೇಶ್ವ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಜಿ ಪಾಟೀಲ್,ಮಾಜಿ ಶಾಸಕರಾದ ರಾಜೂಗೌಡ, ಡಾ.ವೀರಬಸವಂತರಡ್ಡಿ ಮುದ್ನಾಳ, ಕೆ.ಕರಿಯಪ್ಪ, ಅಮೀನರೆಡ್ಡಿ ಪಾಟೀಲ ಯಾಳಗಿ,ಲಲಿತಾ ಅನಪೂರ, ಶ್ರೀದೇವಿ ಶೆಟ್ಟಳ್ಳಿ , ಜಿಲ್ಲಾ ವಕ್ತಾರ ಹೆಚ್.ಸಿ. ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೆವಿಂದ್ರನಾಥ ನಾದ, ವೆಂಕಟರಡ್ಡಿ ಅಬ್ಬೆತುಮಕೂರು, ಗುರು ಕಾಮ, ಸುರೇಶ ಸಜ್ಜನ್, ಉಮಾರಡ್ಡಿಗೌಡ ನಾಯ್ಕಲ್, ದೇವರಾಜ ನಾಯಕ ಉಳ್ಳೆಸೂಗೂರ,ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಎಲ್ಲೆಲ್ಲಿ ಬರ ಅಧ್ಯಯನ ನಡೆಯಿತು?ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಸೈದಾಪುರ ಪ್ರದೇಶದ ಬರಪೀಡಿತ ಗ್ರಾಮಗಳಿಂದ ಆರಂಭವಾದ ಅಧ್ಯಯನ ನಂತರ ಯಾದಗಿರಿ ಕ್ಷೇತ್ರದ ರಾಮಸಮುದ್ರ, ಶಹಾಪುರ ಕ್ಷೇತ್ರದಲ್ಲಿ ಗುತ್ತಿಬಸವಣ್ಣ ಪ್ರದೇಶದ ಐನಾಪುರ ಹಾಗೂ ಸುರಪುರ ಕ್ಷೇತ್ರ ವ್ಯಾಪ್ತಿಯ ಹುಣಸಗಿ ತಾಲೂಕಿನ ಬರಪೀಡಿತ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ ಅಲ್ಲಿನ ರೈತರೊಂದಿಗೆ ಸಂವಾದ ನಡೆಸಲಾಯಿತು.