Belagavi News In Kannada | News Belgaum

ಉತ್ತಮ ಆರೋಗ್ಯಕ್ಕೆ ಆಯುರ್ವೇದ ಚಿಕಿತ್ಸಾ ಪದ್ಧತಿ ಅಳವಡಿಸಿಕೊಳ್ಳಿ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

ಸಮಗ್ರ 8 ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ:2023


ಬೆಳಗಾವಿ, ನ.10 : ದೇಶದಲ್ಲಿ ಪಾಶ್ಚಿಮಾತ್ಯ ವೈದ್ಯಕೀಯ ಚಿಕಿತ್ಸಾ ಪದ್ಧತಿಗಳು ಹೆಚ್ಚಾಗಿದ್ದು, ಸನಾತನ ಕಾಲದಿಂದ ಬಂದಿರುವ ಆಯುರ್ವೇದ ಜನರಿಗೆ ತಲುಪಬೇಕಿದೆ. ನಮ್ಮ ಭಾರತೀಯ ಪುರಾತನ ವೈದ್ಯ ಚಿಕಿತ್ಸಾ ಪದ್ಧತಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಸೇರಿದಂತೆ ನಾವೆಲ್ಲರೂ ಶ್ರಮವಹಿಸಬೇಕು ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಶುಕ್ರವಾರ (ನ. 10) ಏರ್ಪಡಿಸಲಾಗಿದ್ದ ಧನ್ವಂತರಿ ಜಯಂತಿ ಅಂಗವಾಗಿ 8 ನೇ ರಾಷ್ಟೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಋಷಿ ಮುನಿಗಳು, ನಮ್ಮ ಪೂರ್ವಜರು ಸಾವಿರಾರು ವರ್ಷಗಳ ಹಿಂದೆ ಯಾವುದೇ ವೈದ್ಯಕೀಯ ಸಲಕರಣೆಗಳು ಇಲ್ಲದಿರುವ ಕಾಲದಲ್ಲಿ ಗಿಡಮೂಲಿಕೆಗಳಿಂದ ಆಯುರ್ವೇದ ಔಷಧ ತಯಾರಿಸಿ, ಅನೇಕ ರೋಗಗಳಿಗೆ ಚಿಕಿತ್ಸೆಗಳನ್ನು ನೀಡಿದ್ದಾರೆ. ಅದರಂತೆ ಹಲವಾರು ಆರೋಗ್ಯದ ಸೂಕ್ತ ಮಾಹಿತಿಯ ಧನ್ವಂತರಿ ಗ್ರಂಥಗಳ ಮೂಲಕ ಚಿಕಿತ್ಸಾ ಪದ್ಧತಿಗಳನ್ನು ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಇವತ್ತಿನ ವೈದ್ಯಕೀಯ ವಿಜ್ಞಾನದ ಜೊತೆಗೆ ದೇಶದಲ್ಲಿ ಆಯುರ್ವೇದ ಔಷಧಿಯನ್ನು ಮುಂದುವರಿಸಿಕೊಂಡು ನಾಡಿನ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಆಯುರ್ವೇದ ಪದ್ಧತಿಯನ್ನು ಹೆಚ್ಚು ಪ್ರಚಾರಗೊಳಿಸಿ, ಜನರಲ್ಲಿ ವಿಶ್ವಾಸ ಮೂಡಿಸಿವ ಕಾರ್ಯಕ್ಕೆ ಮುಂದಾಗಬೇಕು.
ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉತ್ತರ ವಿಧಾನಸಭಾ ಮತ ಕ್ಷೇತ್ರದ ಶಾಸಕರಾದ ಆಸೀಪ್ (ರಾಜು) ಸೇಠ್ ಅವರು ಹಿಂದಿನ ಕಾಲದಲ್ಲಿ ಸಾಧು ಸಂತರು ಆಯುರ್ವೇದ ಪದ್ಧತಿ ಅನುಕರಿಸುತ್ತಿದ್ದರು. ಹಾಗೇ ಇವತ್ತಿನ ಯುವ ಪೀಳಿಗೆಯು ಇದನ್ನು ಅಳವಡಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ತಿಳಿಸಿದರು.
ಆಯುಷ್ಮಾನ್ ಇಲಾಖೆಯು ಆರೋಗ್ಯದ ಕುರಿತು ಇನ್ನೂ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿ ಆಯುರ್ವೇದ ಔಷಧೀಯ ಮಹತ್ವ ತಿಳಿಸಬೇಕು ಇದಕ್ಕೆ ಬೇಕಾಗಿರುವ ಮೂಲ ಸೌಲಭ್ಯಗಳನ್ನು ಸರ್ಕಾರದಿಂದ ನೀಡುವುದಾಗಿ ಭರವಸೆ ನೀಡಿದರು.


ಇದೇ ಸಂದರ್ಭದಲ್ಲಿ ಉಪನ್ಯಾಸ ನೀಡಿದ ಡಾ. ಸಂಜೀವ ಟೋನ್ನಿ ಅವರು ಇವತ್ತಿನ ಯುವ ಪೀಳಿಗೆ ಸಂಪೂರ್ಣವಾಗಿ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಅವರ ಆರೋಗ್ಯದ ಕುರಿತು ಅವಲೋಕನ ಮಾಡಿಕೊಂಡಾಗ ನಕಾರಾತ್ಮಕ, ಅಭಿಪ್ರಾಯಗಳೇ ಹೆಚ್ಚಾಗಿ ಮೂಡುತ್ತವೆ ಆದ್ದರಿಂದ ಮಕ್ಕಳು ಆರೋಗ್ಯ, ಪ್ರಜ್ಞಾವಂತ, ದೈಹಿಕವಾಗಿ, ಶಾರೀರಿಕವಾಗಿ ಸದೃಢರಾಗಲು ಆರೋಗ್ಯದ ಗುಣಾತ್ಮಕ ಬದಲಾವಣೆ ಕಂಡುಕೊಳ್ಳಲು ನಿತ್ಯ ದಿನಚರಿ ಕ್ರಮಗಳ ಪಾಲನೆ ಮಾಡುವುದು ಅವಶ್ಯವಾಗಿದೆ ಎಂದು ಹೇಳಿದರು.
ಮನುಷ್ಯ ಪ್ರತಿನಿತ್ಯ ಸಮರ್ಪಕ ಆಹಾರ, ದೈಹಿಕ ವ್ಯಾಯಾಮ ಯೋಗ, ನಿದ್ದೆ ಸೇರಿದಂತೆ ಆಯುರ್ವೇದ ಔಷಧಿಯ ಸುತ್ರಗಳನ್ನು ಜೀವನಶೈಲಿಯಲ್ಲಿ ಅಳವಡಿಸಿಕೊಂಡರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಚಿಕಿತ್ಸಾ ಶಿಬಿರ-ಸಸ್ಯಗಳ ಪ್ರದರ್ಶನ:
8ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ 2023ರ ನಿಮಿತ್ಯ ಉಚಿತ ಆಯುರ್ವೇದ ಉಪನ್ಯಾಸ, ಚಿಕಿತ್ಸಾ ಶಿಬಿರ ಹಾಗೂ ಔಷಧಿ ಸಸ್ಯಗಳ ಪ್ರದರ್ಶನ ನಡೆಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿ ಡಾ. ಶ್ರೀಕಾಂತ್ ಸುಣಧೋಳಿ, ಎ. ಎಂ ಶೇಕ್ ಹೋಮಿಯೋಪತಿ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸೈಯದ್, ಪೆÇ್ರ. ಡಾ. ವಿವೇಕ್ ಕುಲಕರ್ಣಿ, ಮಾರ್ಕೆಟ್ ಪೆÇಲೀಸ್ ಠಾಣೆಯ ಸಿ.ಪಿ.ಐ ಎಂ. ಕೆ. ದಾಮನ್ನವರ, ಡಾ ಪೂಜಾರಿ, ಡಾ.ಸಂಜೀವ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಮಹಿಳೆಯರು ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಜಾಗೃತಿ ಜಾಥಾ:
ನಗರ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಿಂದ ಆರಂಭಗೊಂಡ ಆಯುರ್ವೇದ ಜಾಗೃತಿ ಜಾಥಾ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ರವೀಂದ್ರ ಬಂಗಾರಪ್ಪನವರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಆಯುರ್ವೇದ ಜಾಗೃತಿ ಜಾಥಾ ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ನಗರದ ಕುಮಾರ್ ಗಂಧರ್ವ ಕಲಾಮಂದಿರವನ್ನು ತಲುಪಿತು.
ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜು, ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ, ಆಯುರ್ವೇದದ ಮಹತ್ವ, ಉಪಯೋಗದ ಬಗ್ಗೆ ಅರಿವು ಮೂಡಿಸುವ ಸಂದೇಶ ಫಲಕಗಳನ್ನು ಪ್ರದರ್ಶಿಸಲಾಯಿತು.
ಆಯುಷ್ ಇಲಾಖೆ ಅಧಿಕಾರಿಗಳಾದ ಡಾ. ಶ್ರೀಕಾಂತ್ ಸುಣಧೋಳಿ, ಮಹಿಳೆಯರು, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.