Belagavi News In Kannada | News Belgaum

ವಿದ್ಯಾರ್ಥಿಗಳು ತರಬೇತಿಯ ಸದುಪಯೋಗ ಪಡೆದುಕೊಳ್ಳಿ: ಶಾಸಕ ಆಸೀಫ್ (ರಾಜು) ಸೇಠ್

ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ತರಬೇತಿ ಕಾರ್ಯಕ್ರಮ


ಬೆಳಗಾವಿ, ನ.10 : ಮಕ್ಕಳಲ್ಲಿ ತೋಟಗಾರಿಕೆ ಕುರಿತು ಆಸಕ್ತಿ ತರುವ ಹೊಸ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದ್ದು, ಮಕ್ಕಳು ತೋಟಗಾರಿಕೆ ಬೆಳೆಗಳ ಮಾಹಿತಿ ಹೊಂದಬೇಕು. ವಿದ್ಯಾರ್ಥಿಗಳು ತರಬೇತಿಯ ಸದುಪಯೋಗ ಪಡೆದುಕೊಂಡು ತಮ್ಮ ತಮ್ಮ ಮನೆ, ಹಿತ್ತಲಲ್ಲಿ ತರಕಾರಿ, ಹೂವು, ಹಣ್ಣು ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆಯಬೇಕು ಎಂದು ಬೆಳಗಾವಿ ಉತ್ತರ ವಿಧಾನ ಸಭಾ ಮತ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್ ಅವರು ತಿಳಿಸಿದರು.
ತೋಟಗಾರಿಕೆ ಇಲಾಖೆಯ ಹ್ಯೂಮ್ ಪಾರ್ಕ್ ನಲ್ಲಿ ಶುಕ್ರವಾರ (ನ.10) ನಡೆದ ಪ್ರಸಕ್ತ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಸರ್ಕಾರಿ/ಅನುದಾನಿತ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ, ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯಾದ್ಯಂತ ವಿದ್ಯಾರ್ಥಿಗಳಿಗಾಗಿ ತೋಟಗಾರಿಕೆ ತರಬೇತಿ ನೀಡಲು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ವಿವಿಧ ತೋಟಗಾರಿಕೆ ಬೆಳೆಗಳ ಕುರಿತು ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಳ್ಳಬೇಕು.
ಟೊಮೆಟೊ, ಈರುಳ್ಳಿ, ಕೊತ್ತಂಬರಿ ಸೊಪ್ಪಿನ ಬೆಲೆಗಳು ಗಗನಕ್ಕೇರಿವೆ ಇಂತಹ ಸಂದರ್ಭದಲ್ಲಿ ತಮ್ಮ ಮನೆ ಬಳಕೆಗೆ ತಾವು ಬೆಳೆದ ತರಕಾರಿಗಳು ಉಪಯೋಗಕ್ಕೆ ಬರಲಿವೆ. ಇನ್ನೂ ನೀವು ಬೆಳದ ತರಕಾರಿಗಳು ರಾಸಾಯನಿಕ ಸಿಂಪಡಣೆ ಇಲ್ಲದೆ ನೈಸರ್ಗಿಕವಾಗಿ ಬೆಳೆದ ತರಕಾರಿಗಳು ನಿಮ್ಮ ದಿನನಿತ್ಯದ ಆಹಾರ ವಾಗಲಿವೆ ಎಂದು ಬೆಳಗಾವಿ ಉತ್ತರ ವಿಧಾನ ಸಭಾ ಮತ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್ ಅವರು ಸಲಹೆ ವಿದ್ಯಾರ್ಥಿಗಳಿಗೆ ನೀಡಿದರು.
ಸರ್ಕಾರದ ನಿರ್ದೇಶನದಂತೆ ಏರ್ಪಡಿಸಲಾದ ತೋಟಗಾರಿಕೆ ತರಬೇತಿಯ ಸದುಪಯೋಗ ಪಡೆದುಕೊಂಡು ಆಸಕ್ತ ವಿದ್ಯಾರ್ಥಿಗಳು ತೋಟಗಾರಿಕೆ ಕೃಷಿಯತ್ತ ಗಮನ ಹರಿಸಬೇಕು. ಮುಂದಿನ ದಿನಗಳಲ್ಲಿ ಡಾಕ್ಟರ್, ಇಂಜಿನಿಯರ್ ಕೋರ್ಸ್ ಗಳನ್ನು ಸೇರುವದು ಮಾತ್ರವಲ್ಲದೆ ಕೃಷಿಯಲ್ಲಿ ಸಹ ಆಸಕ್ತಿ ಹೊಂದಿ ಕೃಷಿಗೆ ಸಂಬಂಧಿಸಿದ ಕೋರ್ಸ್ ಗಳನ್ನು ಮಾಡಬೇಕು ಎಂದು ತೋಟಗಾರಿಕೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ ಅವರು ತಿಳಿಸಿದರು.
ವಿದ್ಯಾರ್ಥಿಗಳು ತೋಟಗಾರಿಕೆ ಕ್ಷೇತ್ರದಲ್ಲೇ ಸ್ವಯಂ ಪ್ರರಣೆಯಿಂದ ಮುಂದುವರೆಯುವುದು ಯೋಜನೆಯ ಆಶಯವಾಗಿದೆ. ಶಾಲಾ ಮಕ್ಕಳಿಗೆ ಈ ನಿಟ್ಟಿನಲ್ಲಿ ವಿಷಯಾಧಾರಿತ ತರಬೇತಿಗಳನ್ನು ನೀಡಲಾಗುವುದು, ಮುಂಬರುವ ದಿನಗಳಲ್ಲಿ ಅವರು ತೋಟಗಾರಿಕೆ ಕ್ಷೇತ್ರದಲ್ಲೇ ಮುಂದುವರಿಯಲು ಪ್ರೇರೇಪಣೆ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ಮನೆಯಲ್ಲಿ ಬೆಳೆದ ಹಣ್ಣು ಮತ್ತು ತರಕಾರಿಗಳಲ್ಲಿ ಖನಿಜಾಂಶ, ಜೀವಸತ್ವ, ಸೂಕ್ಷ್ಮ ಪೆÇೀಷಕಾಂಶಗಳನ್ನು ಹೊಂದಿರುವುದರಿಂದ ಸಮತೋಲನ ಆಹಾರ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿ ಮಕ್ಕಳು ಇಂತಹ ಆಹಾರ ಬೆಳಸಿ ಸೇವಿಸಬೇಕು ಮತ್ತು ಇಂತಹ ಬೇಳಗಳ ಕುರಿತು ಇತರರಿಗೂ ತಿಳಿಸಿಕೊಡಬೇಕು ಎಂದು ತೋಟಗಾರಿಕೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ ಅವರು ಹೇಳಿದರು.
ಮಿನಿ ಕಿಟ್ ವಿತರಣೆ:
ಶಾಸಕ ಆಸೀಫ್ (ರಾಜು) ಸೇಠ್ ಅವರು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ “ವಿದ್ಯಾರ್ಥಿಗಳಿಗಾಗಿ ತೋಟಗಾರಿಕೆ” ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಿನಿ ಕಿಟ್ ವಿತರಣೆ ಮಾಡಿದರು. ಅದೇ ರೀತಿಯಲ್ಲಿ ಯೋಜನಾ ಅನುಷ್ಠಾನದ ಕುರಿತು ಮಾಹಿತಿ ಇರುವ ಕೈಪಿಡಿ ಬಿಡುಗಡೆ ಗೊಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಲೀಲಾವತಿ ಹಿರೇಮಠ, ಸರ್ಕಾರಿ ಸರ್ದಾರ ಹೈ ಸ್ಕೊಲ ಶಿಕ್ಷಕರಾದ ರವಿ ಕಲಕರಣಿ, ಬಿನಾ.ಆರ್, ಎಂ. ಎ ಡಾಂಗಿ, ತೋಟಗಾರಿಕಾ ಸಂಘದ ಗೌರವ ಕಾರ್ಯದರ್ಶಿ ಲಿಂಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸರ್ದಾರ್ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು .