ಸುದ್ದಿ ಬಿತ್ತರಿಸುವ ಭರದಲ್ಲಿ ಸಾರ ಮರೆಯದಿರಿ ಎಂದ ಸಚಿವ ಸತೀಶ್
ಎಲೆಮರೆ ಕಾಯಿಯಂತಿರುವ ಸಾಧಕರನ್ನು ಗುರುತಿಸಿ: ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ: ಸಮಾಜದಲ್ಲಿನ ಸಮಸ್ಯೆಗಳತ್ತ ಬೆಳಕು ಚೆಲ್ಲುವ ಕೆಲಸವಾಗಬೇಕು. ಮುಖ್ಯವಾಗಿ ಪತ್ರಿಕಾ ರಂಗದಲ್ಲಿ ಎಲೆಮರೆ ಕಾಯಿಯಂತಿರುವ ಸಾಧಕರನ್ನು ಗುರುತಿಸುವ ಕಾರ್ಯವಾಗಬೇಕೆಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದಲ್ಲಿ ಬೆಳಗಾವಿ ವಿವಿಧ ಸಂಘಟನೆಯಿಂದ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ್, ಗಿರೀಶ ಕೋಟೆ ಅವರಿಗೆ ಹಮ್ಮಿಕೊಂಡಿದ್ದ ಅಭಿಮಾನದ ಅಭಿವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆರಳ ತುದಿಯಲ್ಲಿ ಮಾಹಿತಿ ಲಭ್ಯವಾಗಿಸುವ ತಂತ್ರಜ್ಞಾನದ ಯುಗದಲ್ಲಿ ಸುದ್ದಿ ಬಿತ್ತರಿಸುವ ಭರದಲ್ಲಿ ಸುದ್ದಿಯ ಸಾರ ಪತ್ರಕರ್ತರು ಮರೆಯುವಂತಾಗಬಾರದು ಎಂದು ಹೇಳಿದರು.
ತೆರೆ ಹಿಂದಿರುವ ಸುದ್ದಿಗಳಿಗೆ ಮಹತ್ವ ನೀಡಿ: ಜಗತ್ತಿನಲ್ಲಿ ಪತ್ರಿಕಾ ರಂಗ ತನ್ನದೇ ಛಾಪು ಮೂಡಿಸಿದ್ದು, ಸಂವಿಧಾನದ 4ನೇ ಅಂಗವಾಗಿ ಗುರುತಿಸಿಕೊಂಡಿದೆ. ಇಂತಹ ಮಾಧ್ಯಮಗಳು ಇಂದು ತೆರೆ ಮುಂದಿರುವ ಜನಗಳ ಬಗ್ಗೆ ಬಿತ್ತರಿಸದೇ ತೆರೆ ಹಿಂದೆ ನಿತ್ಯ ಶ್ರಮಿಸುವ ಕಾಯಕ ಜೀವಗಳತ್ತ ಸುದ್ದಿ ಮಾಡಬೇಕಿದೆ. ಉದಾಹರಣೆಗೆ ರೈತರು, ಬಡತನದಲ್ಲಿ ಹುಟ್ಟಿ ನಿತ್ಯ ಶ್ರಮಿಸುವ ಜೀವಗಳ ಬಗ್ಗೆ ಹಾಗೂ ಕಡಿಮೆ ಹಣದಲ್ಲಿ ಉತ್ತಮ ತಿಂಡಿ ನೀಡುವ ಹೊಟೇಲಗಳತ್ತ ಸುದ್ದಿ ಬಿತ್ತರಿಸಿ ಅಂಥಹ ಜನರ ಗುರುತಿಸುವ ಕೆಲಸ ಮಾಧ್ಯಮಗಳ ಮಾಡಬೇಕಿದೆ. ಮಾಧ್ಯಮಗಳು ಸತ್ಯಕ್ಕೆ ಹತ್ತಿರವಾಗುವ ಸುದ್ದಿ ಹಾಗೂ ಉಹಾಫೋಹಗಳತ್ತ ಗಮನ ಹರಿಸದೇ ಸತ್ಯದ ಕಡೆ ಗಮನ ಹರಿಸಿ ಸುದ್ದಿಗಳನ್ನು ಬಿತ್ತರಿಸಿದರೆ ರಾಜ್ಯ ಹಾಗೂ ದೇಶದಲ್ಲಿ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದರು.
ಪತ್ರಕರ್ತರ ಭವನ ನಿರ್ಮಾಣಕ್ಕೆ ಸ್ಥಳ ಗುರುತಿಸಿ: ಬೆಳಗಾವಿಯಲ್ಲಿ ಪತ್ರಕರ್ತರ ಭವನ ನಿರ್ಮಾಣಕ್ಕೆ ಪತ್ರಕರ್ತರ ವಿವಿಧ ಸಂಘ ಸಂಸ್ಥೆಗಳಿಂದ ಅನೇಕ ಭಾರಿ ಮನವಿ ಮಾಡಲಾಗಿದೆ. ಪತ್ರಕರ್ತರ ಸಂಘಟನೆಗಳು ಸ್ಥಳ ಗುರುತಿಸಿದರೆ ಭವನ ನಿರ್ಮಾಣಕ್ಕೆ ಬೇಕಾಗಿರುವ ಅನುದಾನವನ್ನು ನಮ್ಮ ಲೋಕೋಪಯೋಗಿ ಇಲಾಖೆ ವತಿಯಿಂದ ನೀಡಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.
ಪತ್ರಿಕಾ ಭವನ ನಿರ್ಮಾಣಕ್ಕೆ ಈಗಾಗಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಮಾಡಲಾಗಿದ್ದು, ಎರಡು, ಮೂರು ಸ್ಥಳದಲ್ಲಿ ಜಾಗ ಇದೆ. ಒಂದು ಕಡೆ ಸ್ಥಳ ಗುರುತಿಸಿದರೆ ಸರ್ಕಾರದಿಂದ ಪತ್ರಿಕಾ ಭವನ ನಿರ್ಮಾಣಕ್ಕೆ ಶೀಘ್ರವೇ ಕ್ರಮ ಕೈಗೊಳ್ಳಗುವುದು ಎಂದು ತಿಳಿಸಿದರು.
ಸತ್ಯ ಸುದ್ದಿ ಜನರಿಗೆ ಮುಟ್ಟುವ ಕೆಲಸವಾಗಲಿ: ಇಂದು ಮಾಧ್ಯಮ ಹೇಗಾಗಿದೆ ಎಂದರೆ ರಾತ್ರಿ 12 ಗಂಟೆಗೆ ಟಿವಿ ನೋಡಿ ನಮ್ಮ ಹೆಸರು ಏನು ಬಂದಿಲ್ಲವೆಂದು ರಾಜಕಾರಣಿಗಳು ನಿಟ್ಟಿಸಿರು ಬಿಟ್ಟು ಮಲಗುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಪತ್ರಿಕಾ ಮಿತ್ರರು ನಿತ್ಯ ನಡೆಯುವ ಸತ್ಯ ಸಂಗತಿ ಹಾಗೂ ಸಮಾಜದ ಅಂಕುಡೊಂಕುಗಳ ತಿದ್ದುವ ಕೆಲಸ ಮಾಡಬೇಕೆದೆ ಎಂದರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ಇಂದು ಪತ್ರಿಕಾ ವಿತರಕರಿಗೆ ಸೈಕಲ್ ವಿತರಣೆ ಮಾಡಿರುವುದು ಬಹಳ ಖುಷಿ ತಂದಿದೆ. ನಾನು ಕುಡಾ ರೈತಾಪಿ ಕುಟುಂಬದಲ್ಲಿ ಜನಸಿದ ಮಗಳು. ಸರ್ಕಾರಿ ಕೆಂಪು ಬಸ್ನಲ್ಲಿ ಹತ್ತಿ ಸಂಚಾರ ಮಾಡಿದವಳು. ರಾಜಕಾರಣ ಇಷ್ಟವಿದೇ ಎಂದು ರಾಜಕಾರಣ ಕ್ಷೇತ್ರದಲ್ಲಿ ಬಂದಿರುವೆ ಆದರೆ ನಾನು ಎಂದಿಗೂ ಲಕ್ಷ್ಮಣ ಗೇರೆಯನ್ನು ದಾಟುವುದಿಲ್ಲ ಎಂದು ಸವಾಲು ಎಸೆದರು.
ನಿಜವಾದ ಸುದ್ದಿ ಬಿತ್ತರಿಸಿ: ಇಂದು ಮಾಧ್ಯಮಗಳು ಹೇಗಾಗಿವೆ ಎಂದರೆ ನಮ್ಮ ಹಾಗೂ ಸತೀಶ್ ಅಣ್ಣಾ ಜಾರಕಿಹೊಳಿ ನಡುವೆ ಎಲ್ಲವು ಸರಿಯಿಲ್ಲ ಎಂಬತೆ ಬಿತ್ತರಿಸುತ್ತಿವೆ. ಇಂದು ಒಂದೇ ವೇದಿಕೆಯಲ್ಲಿ ನಾನು ಮತ್ತು ಸತೀಶ್ ಅಣ್ಣಾ ಅವರು ಬಂದಿದ್ದೇವೆ. ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಬಿತ್ತರಿಸುವ ಬದಲು ಸತ್ಯದ ಸುದ್ದಿಗಳನ್ನು ಬಿತ್ತರಿಸಿದರೆ ಉತ್ತಮ ಎಂದು ತಿಳಿ ಹೇಳಿದರು.
ಉಡುಪಿ ಪತ್ರಕರ್ತರು ಬಹಳ ಜಾನರೆಂದ ಸಚಿವೆ: ರಾಜ್ಯದ ವಿವಿಧೆಡೆ ಹಾಗೂ ಬೆಳಗಾವಿ ಪತ್ರಿಕಾ ಮಿತ್ರರನ್ನು ನೋಡಿದ್ದೇನೆ. ಆದರೆ ಸರ್ಕಾರದ ಯೋಜನೆಗಳನ್ನು ಯಾವ ರೀತಿ ಬಳಕೆ ಮಾಡಬೇಕು. ಯಾವಾಗಲೂ ಸತ್ಯ ಸುದ್ದಿಗಳನ್ನು ಬಿತ್ತರಿಸಿ ಜನರ ಮನಸ್ಸಿಗೆ ಹತ್ತಿರವಾಗಿ ಜಾನರಾಗುತ್ತಿದ್ದಾರೆ. ಅದೇ ರೀತಿ ಬೆಳಗಾವಿಯಲ್ಲಿ ನೋಡಿದರೆ “ಬರಿ ಬೆಳಗಾವಿ ಬೆಂಕಿ” “ಕೈ ಪಾಳೆಯದಲ್ಲಿ ಸುನಾಮಿ” ಎಂಬಂತೆ ಸುದ್ದಿಗಳನ್ನು ಬಿತ್ತರಿಸಿ ಜನರ ಮನಸ್ಸಿಗೆ ಘಾಸಿ ಮಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಆದ್ದರಿಂದ ಇಲ್ಲಿರುವ ಮಾಧ್ಯಮ ಮಿತ್ರರು ಸತ್ಯ ನಡೆದಿರುವ ಕುರಿತು ಬಿತ್ತರಿಸಿ ಉತ್ತಮ ಸಮಾಜ ನಿರ್ಮಿಸಲು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಗದಗದ ಡಂಬಳ ತೋಂಟದಾರ್ಯ ಮಠದ ಶ್ರೀ ಡಾ. ಸಿದ್ದರಾಮ ಸ್ವಾಮೀಜಿ ಮಾತನಾಡಿ, ಪತ್ರಿಕೆಗಳು ಬೆಳೆಯಲು ಪರಿಶ್ರಮ ಮುಖ್ಯ. ಉದಾಹರಣೆಗೆ ಪತ್ರಿಕಾ ವಿತರಕರಾಗಿ ಇಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ. ವಿ ಪ್ರಭಾಕರ್ ನೇಕರಾಗಿದ್ದಾರೆ. ಹೀಗೆ ಸದಾ ಪರಿಶ್ರಮವಿದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.
ಇದೇ ವೇಳೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ. ವಿ ಪ್ರಭಾಕರ್ ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿರೀಶ್ ಕೋಟೆ, ಕೆ.ಪಿ. ಪುಟ್ಟಸ್ವಾಮಯ್ಯ, ಕೆ ಎಸ್ ನಾಗರಾಜ್, ದೀಪಕ ಕರಾಡೆ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾಧ್ಯಮ ಸಲಹೆಗಾರ ಎಂ.ಕೆ. ಹೆಗಡೆ, ಸಚಿವ ಸತೀಶ್ ಜಾರಕಿಹೊಳಿಯವರ ಮಾಧ್ಯಮ ಸಲಹೆಗಾರ ಮುನ್ನಾ ಬಾಗವಾನ, ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ಈಗ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಹಾಗೂ ಇತ್ತೀಚೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಹಿರಿಯ ಪತ್ರಕರ್ತರನ್ನೂ ಗಣ್ಯರು ಸನ್ಮಾನಿಸಿದರು. ಅಲ್ಲದೇ ಪತ್ರಿಕೆ ಏಳ್ಗೆಗೆಗೆ ಹಗಲಿರುಳು ಶ್ರಮಿಸುತ್ತಾ ಎಲೆಮರೆ ಕಾಯಿಯಂತಿರುವ ಐದು ಹಿರಿಯ ಪತ್ರಿಕಾ ವಿತರಕರಿಗೆ ಹೊಸ ಸೈಕಲ್ ವಿತರಿಸಲಾಯಿತು.
ಈ ಸಮಾರಂಭದಲ್ಲಿ ಎಸ್ಪಿ ಡಾ. ಭೀಮಾಶಂಕರ ಗುಳೇದ, ಶಾಸಕ ರಾಜು ಸೇಠ್, ವಾರ್ತಾ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ, ಮಹಾನಗರ ಪಾಲಿಕೆ ಕಮಿಷ್ನರ್ ಅಶೋಕ ದುಡಗುಂಟಿ, ಸರ್ವೋತ್ತಮ ಜಾರಕಿಹೊಳಿ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಅಧ್ಯಕ್ಷರುಗಳು ಜಿಲ್ಲೆಯ ಪತ್ರಕರ್ತ ಹಾಗೂ ಟಿವಿ ಮಾಧ್ಯಮದ ವರದಿಗಾರರು ಉಪಸ್ಥಿತರಿದ್ದರು.