Belagavi News In Kannada | News Belgaum

ಲೋಕಾಯುಕ್ತ ಬಲೆಗೆ ಬಿದ್ದ ಶಿರಸ್ತೇದಾರ್

ದಾವಣಗೆರೆ: ಜಮೀನಿಗೆ ಸಂಬಂಧಪಟ್ಟ ದಾಖಲಾತಿಗಳನ್ನು ಮಾಡಿಸಿಕೊಡಲು ಲಂಚದ ಬೇಡಿಕೆ ಇಟ್ಟಿದ್ದ ಚನ್ನಗಿರಿ ತಾಲೂಕು ಕಚೇರಿಯ ಶಿರಸ್ತೇದಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಸುಧೀರ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಅಧಿಕಾರಿ. ಲೋಹಿತ್‌ ಕುಮಾರ್ ಎಂಬುವರು ನೀಡಿದ ದೂರು ಹಿನ್ನೆಲೆ ದಾಳಿ ನಡೆಸಿದ ಅಧಿಕಾರಿಗಳು, ಈ ಅಧಿಕಾರಿಯನ್ನು ಬಲೆಗೆ ಕೆಡವಿದ್ದಾರೆ. ಲೋಹಿತ್‌ ಕುಮಾರ್ ಅವರ ಅಕ್ಕನ ಮಗಳಾದ ಮೇಘನಾಳ ಪತಿಯ ಊರಾದ ಮರಡಿ ಗ್ರಾಮದಲ್ಲಿ ಸರ್ವೇ ನಂಬರ್ 42/1 ರಲ್ಲಿ 0-07 ಎಕರೆ ಜಮೀನಿದೆ. ಈ ಜಮೀನಿನಲ್ಲಿ ಮೇಘನಾ ಅವರಿಗೆ ಬರಬೇಕಾದ ಗದ್ದೆಗೆ ಸಂಬಂಧಪಟ್ಟ ದಾಖಲಾತಿಗಳನ್ನು ಮಾಡಿಸುವ ಸಲುವಾಗಿ ಲೋಹಿತ್ ಕುಮಾರ್ ಸರ್ಕಾರಿ ಕಚೇರಿಗೆ ಓಡಾಡುತ್ತಿದ್ದರು. ಆದರೆ, ಚನ್ನಗಿರಿ ತಾಲೂಕು ಕಚೇರಿಯ ಆರ್.ಆರ್.ಟಿ. ಶಾಖೆಯಲ್ಲಿ ಕೆಲಸ ಮಾಡುವ ಶಿರಸ್ತೇದಾರ್ ಸುಧೀರ್‌ ಸದರಿ ಜಮೀನಿನ ಪಹಣಿ ಮತ್ತು ಆಕಾರ್‌ ಬಂದ್ ವಿಸ್ತೀರ್ಣ ತಾಳೆ ಸರಿಪಡಿಸಿಕೊಡಲು ರೂ. 5,000 ಲಂಚದ ಹಣದ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಲೋಹಿತ್ ಕುಮಾರ್ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.‌ ದೂರು ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು, ಲೋಹಿತ್ ಅವರಿಂದ 5,000 ಲಂಚದ ಹಣವನ್ನು ಸ್ವೀಕರಿಸುವಾಗ ಟ್ರ್ಯಾಪ್ ಮಾಡಿ ಬಲೆಗೆ ಬೀಳಿಸಿದ್ದಾರೆ./////