Belagavi News In Kannada | News Belgaum

ಹುಕ್ಕೇರಿ ಪುರಸಭೆಯಲ್ಲಿ ನಕಲಿ ಬಿಲ್ ಸೃಷ್ಟಿಸಿ ಲಕ್ಷಾಂತರ ಲೂಟಿ

ಹುಕ್ಕೇರಿ: ಇಲ್ಲಿನ ಪುರಸಭೆಯಲ್ಲಿ ವಿವಿಧ ಯೋಜನೆಗಳಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಲಕ್ಷಾಂತರ ರೂ,ಗಳನ್ನು ಲೂಟಿ ಮಾಡಲಾಗಿದೆ ಎಂದು ಪುರಸಭೆ ಮಾಜಿ ಉಪಾಧ್ಯಕ್ಷ ಆನಂದ ಗಂಧ, ಸದಸ್ಯ ಸದಾಶಿವ ಕರೆಪ್ಪಗೋಳ ಆರೋಪಿಸಿದರು.
ಪುರಸಭೆ ಕಚೇರಿಯಲ್ಲಿ ಶುಕ್ರವಾರ ಸಂಜೆ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಆಡಳಿತ ಮಂಡಳಿ ರಚನೆಯಾಗದೇ ಇರುವುದರಿಂದ ಅಧಿಕಾರಿ ಮತ್ತು ಸಿಬ್ಬಂದಿಗಳು ಮೀತಿ ಮೀರಿದ ಭ್ರಷ್ಟಾಚಾರದಲ್ಲಿ ತೊಡಗಿದ್ದು ಅನೇಕ ಯೋಜನೆಗಳಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂ,ಗಳನ್ನು ಕೊಳ್ಳೆ ಹೊಡೆದಿದ್ದಾರೆ ಎಂದು ದೂರಿದರು.
ಬಹುತೇಕ ಸಿಬ್ಬಂದಿಗಳು ಜನರ ಕೈಗೆ ಸಿಗುವುದು ಅಪರೂಪವಾಗಿದ್ದು ಸಮಯ ಪರಿಪಾಲನೆ ಮಾಡುತ್ತಿಲ್ಲ. ಇದರಿಂದ ಅನೇಕ ಕಡತಗಳು ವಿಲೇವಾರಿಯಾಗದೇ ಹಾಗೆಯೇ ಉಳಿದುಕೊಂಡಿವೆ. ಕಳೆದ ಒಂದೂವರೆ ವರ್ಷದಿಂದ ೧೫ನೇ ಹಣಕಾಸು ಯೋಜನೆ ಮತ್ತು ಎಸ್‌ಎಫ್‌ಸಿ ಅನುದಾನದ ಕಾಮಗಾರಿಗಳನ್ನು ಟೆಂಡರ್ ಕರೆದಿಲ್ಲ ಎಂದು ಅವರು ಆರೋಪಿಸಿದರು.
ಕಾರ್ಯಾಲಯದ ಮಳೆ ನೀರು ಕೊಯ್ಲು ಕಾಮಗಾರಿಯನ್ನು ಅರೆಬರೆ (ಅಪೂರ್ಣ) ಮಾಡಿ ಬಿಲ್ ಎತ್ತುವಳಿ ಮಾಡಲಾಗಿದೆ. ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಗೆ ಕುರ್ಚಿಗಳು ಸೇರಿದಂತೆ ಪಿಠೋಪಕರಣಗಳನ್ನು ಖರೀದಿಸಿ ಅವ್ಯವಹಾರ ಎಸಗಲಾಗಿದೆ. ಕೆಲ ಸಿಬ್ಬಂದಿಗಳು ಪುರಸಭೆಯ ಮಹತ್ವದ ದಾಖಲೆಗಳನ್ನು ಅನ್ಯರಿಗೆ ರವಾನಿಸುತ್ತಿದ್ದಾರೆ (ಸೋರಿಕೆ) ಮಾಡುತ್ತಿದ್ದಾರೆ. ಪ್ರತಿ ಕೆಲಸದಲ್ಲೂ ಭ್ರಷ್ಟಾಚಾರ ನಡೆದಿದ್ದು ಏಜೆಂಟರ ಹಾವಳಿ ಮೀತಿಮೀರಿದೆ ಎಂದು ಅವರು ದೂರಿದರು.
ಅಧಿಕಾರಿ ಮತ್ತು ಸಿಬ್ಬಂದಿಗಳು ದುರಾಡಳಿತ ನಡೆಸುವ ಮೂಲಕ ಜನರನ್ನು ಹಿಂಸಿಸುತ್ತಿದ್ದಾರೆ. ಮೂಲಭೂತ ಸೌಲಭ್ಯಗಳಿಗೆ ಜನರು ಪರಿತಪಿಸುತ್ತಿದ್ದಾರೆ. ಪುರಸಭೆಯ ಅಕ್ರಮ, ಅವ್ಯವಹಾರ, ಅವ್ಯವಸ್ಥೆ ಕುರಿತು ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಹಾಗಾಗಿ ಬರುವ ತಿಂಗಳು ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಸದಸ್ಯರ ನಿಯೋಗದೊಂದಿಗೆ ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಲಾಗುವುದು. ಅಗತ್ಯವಿದ್ದಲ್ಲಿ ಸುವರ್ಣಸೌಧ ಎದುರು ಧರಣಿ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.///////