Belagavi News In Kannada | News Belgaum

ವಿಕಲಚೇತನರ ಕ್ರೀಡಾ-ಸಾಂಸ್ಕೃತಿಕ ಸ್ಪರ್ಧೆಗಳು ನ.29 ರಂದು; ಪೂರ್ವ ಸಿದ್ಧತೆಗೆ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಸೂಚನೆ

ವಿಶ್ವ ವಿಕಲಚೇತನರ ದಿನಾಚರಣೆ:ಪೂರ್ವಭಾವಿ ಸಭೆ

 

ಬೆಳಗಾವಿ, ನ.24 : “ವಿಶ್ವ ವಿಕಲಚೇತನರ ದಿನಾಚರಣೆ”-2023ರ ಪ್ರಯುಕ್ತ ವಿಕಲಚೇತನರಿಗೆ ಪೂರ್ವಭಾವಿಯಾಗಿ ನವಂಬರ್ 29 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾ ಸ್ಪರ್ಧೆ ಹಾಗೂ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು ಆದ್ದರಿಂದ ಆಸಕ್ತ ವಿಕಲಚೇತನರು, ಅಂಧ-ಕಿವುಡ ಮಕ್ಕಳು ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಸಂಭಂದಿಸಿದ ಶಾಲಾ ಮುಖ್ಯೋಪಾಧ್ಯಾಯರು ತಿಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ನ.24) ನಡೆದ ವಿಶ್ವ ವಿಕಲಚೇತನರ ದಿನಾಚರಣೆ-2023ರ ಅಂಗವಾಗಿ ವಿಕಲಚೇತನರಿಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸುವ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬುದ್ಧಿಮಾಂದ್ಯ ಮಕ್ಕಳು, ಅಂಧ, ಕಿವುಡ ಮಕ್ಕಳು, ದೈಹಿಕ ವಿಕಲಚೇತನರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಕ್ರೀಡಾ ಇಲಾಖೆಯ ವತಿಯಿಂದ ಕ್ರೀಡೆಯಲ್ಲಿ ಭಾಗವಹಿಸುವ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ, ಟಿ-ಶರ್ಟ್, ಕ್ಯಾಪ್ ಹಾಗೂ ವಿಜೇತರಿಗೆ ಪ್ರಮಾಣ ಪತ್ರ ಮತ್ತು ಮೆಡಲ್ ಗಳು, ಕ್ರೀಡೆಗೆ ಅವಶ್ಯವಿರುವ ಕ್ರೀಡಾ ಸಾಮಗ್ರಿಗಳನ್ನು ಸಹ ಒದಗಿಸಲು ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ವಿವಿಧ ಎನ್.ಜಿ.ಓ ಗಳಿಂದ ಸುಮಾರು ಒಂದು ಸಾವಿರಕ್ಕಿಂತ ಅಧಿಕ ಅಂಧ, ಕಿವುಡ ಮಕ್ಕಳು, ವಿಕಲಚೇತನರು ಭಾಗವಹಿಸುವ ನಿರೀಕ್ಷೆಯಿರುವ ಕಾರಣ ಆರೋಗ್ಯ ಇಲಾಖೆಯಿಂದ ಪ್ರಥಮ ಚಿಕಿತ್ಸೆಗಾಗಿ ವಾಹನದೊಂದಿಗೆ ತಜ್ಞರು, ವೈದ್ಯಕೀಯ ಸಿಬ್ಬಂದಿಗಳನ್ನು ನೇಮಿಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಹೇಳಿದರು.
ತೋಟಗಾರಿಕೆ ಇಲಾಖೆ ವತಿಯಿಂದ ಕಾರ್ಯಕ್ರಮದ ಸ್ಥಳದಲ್ಲಿ ಹೂ ಕುಂಡಗಳಿಂದ ಅಲಂಕೃತಗೊಳಿಸುವುದು ಹಾಗೂ ಹೆಸ್ಕಾಂನಿಂದ ವಿದ್ಯುತ್ ವ್ಯತ್ಯಯ ಆಗದಂತೆ ನೋಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಪ್ರತಿ ವರ್ಷ ಡಿಸೆಂಬರ್ 3 ರಂದು ವಿಕಲಚೇತನರ ದಿನಾಚರಣೆ ಆಚರಿಸಗುವುದು. ಈ ವರ್ಷ ಇಲಾಖೆಯ ನಿರ್ದೇಶನಂತೆ ಪೂರ್ವಭಾವಿಯಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಾಮದೇವ ಬಿಲ್ಕರ ಅವರು ಹೇಳಿದರು.
ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಉಪ ನಿರ್ದೇಶಕ ಬಿ.ಶ್ರೀನಿವಾಸ್, ವಿಕಲಚೇತನರ ವಿಶೇಷ ಶಾಲೆಯ ಸ್ವಯಂ ಸಂಸ್ಥೆಗಳ ಮುಖ್ಯಸ್ಥರು, ವಿಕಲಚೇತನ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿಗಳು ಹಾಗೂ ಜಿಲ್ಲೆಯ ಎಲ್ಲ ಎಂ.ಆರ್.ಡಬ್ಲ್ಯೂ ಸಭೆಯಲ್ಲಿ ಉಪಸ್ಥಿತರಿದ್ದರು.////