Belagavi News In Kannada | News Belgaum

ಭಾರತದ ಸಂವಿಧಾನ ಸಮಾನತೆಯ ಅಡಿಪಾಯ: ಸಚಿವ ಸತೀಶ್ ಜಾರಕಿಹೊಳಿ

 

ಬೆಳಗಾವಿ, ನ.26: ಭಾರತ ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯ ನೀಡಿದೆ. ಭಾರತದ ಸಂವಿಧಾನವನ್ನು ವಿಶ್ವದ ಶ್ರೇಷ್ಠ ಸಂವಿಧಾನಗಳಲ್ಲಿ ಒಂದು ಎಂದು ಪರಿಗಣಿಸಲಾಗಿದ್ದು, ಸಂವಿಧಾನ ದೇಶದ ಪ್ರಜೆಗಳ ಸಮಾನತೆಯ ಅಡಿಪಾಯವಾಗಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ತಿಳಿಸಿದರು.

ನಗರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಉದ್ಯಾನವನದಲ್ಲಿ ರವಿವಾರ (ನ.26) ನಡೆದ “ಸಂವಿಧಾನ ದಿನ” ಆಚರಣೆಯ ನಿಮಿತ್ಯ “ಸಂವಿಧಾನ ಪ್ರಸ್ತಾವನೆ” ಓದಿದ ಬಳಿಕ ಅವರು ಮಾತನಾಡಿದರು.

ಸರ್ಕಾರದ ನಿರ್ದೇಶನದಂತೆ ಪ್ರತಿ ವರ್ಷ ನವೆಂಬರ್ 26 ರಂದು ಭಾರತದ ಸಂವಿಧಾನ ದಿನವನ್ನಾಗಿ ಸರ್ಕಾರಿ ಕಚೇರಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಸಂವಿಧಾನ ದಿನವನ್ನು ಸಂವಿಧಾನ ಪೀಠಿಕೆ ಓದುವ ಮೂಲಕ ಅರ್ಥ ಪೂರ್ಣವಾಗಿ ಆಚರಿಸಲಾಗುವುದು ಎಂದು ಹೇಳಿದರು.

ಸಂವಿಧಾನ ಮೂಲಕ ಸಮಾನತೆ ಬದುಕು:

ಸರ್ಕಾರದ ಪ್ರತಿ ಕಾರ್ಯಕ್ರಮದಲ್ಲಿ ಸಂವಿಧಾನ ಓದುವುದನ್ನು ಕಡ್ಡಾಯಗೊಳಿಸಿದೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಗ್ರಂಥದ ಮೂಲಕ ಸಾಮಾಜಿಕ ಬದುಕಿನಲ್ಲಿ ಸಮಾನತೆಯ ಅಡಿಪಾಯ ಹಾಕಿಕೊಟ್ಟು ದೇಶದ ಜನರ ಬದುಕಿಗೆ ಸರಳ ದಾರಿ ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಸುಮಾರು 300 ಕ್ಕಿಂತ ಹೆಚ್ಚು ಪುಟ ಇರುವ ಸಂವಿಧಾನ, ಸಾಮಾಜಿಕ, ಆರ್ಥಿಕ, ಧರ್ಮ ಶ್ರದ್ಧೆ, ಉಪವಾಸ ಸ್ವಾತಂತ್ರ್ಯ, ಸ್ಥಾನ ಮಾನ ಹಾಗೂ ಅವಕಾಶ ಸಮಾನತೆಯ ಕೊಡುಗೆಯನ್ನು ಸಂವಿಧಾನ ನಮಗೆ ನೀಡಿದೆ.

ಸಂವಿಧಾನ ರಚನೆಗೂ ಮುನ್ನ ದೇಶದ ಪರಿಸ್ಥಿತಿ ಗಂಭೀರವಾಗಿತ್ತು. ಸಾಕಷ್ಟು ದೇಶಗಳನ್ನು ಸುತ್ತಿ, ಅನೇಕ ಪುಸ್ತಕಗಳನ್ನು ಓದಿ, ಎಲ್ಲಾ ರೀತಿಯ ದೇಶದ ಸ್ಥಿತಿಗತಿ, ಆಡಳಿತಗಳ ವಿಧಗಳ ಅಭ್ಯಾಸ ನಡೆಸಿ ಸಮಾಜಕ್ಕೆ ಸಮಾನತೆಯ ಗ್ರಂಥವನ್ನು ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಕೊಡುಗೆಯಾಗಿ ನೀಡಿದ್ದಾರೆ.

ಭಾರತವನ್ನು ಸಾರ್ವಭೌಮ, ಜಾತ್ಯತೀತ, ಸಮಾಜವಾದಿ ಮತ್ತು ಪ್ರಜಾಸತ್ತಾತ್ಮಕ ಗಣತಂತ್ರ ದೇಶ ಎಂದು ಸಂವಿಧಾನದಲ್ಲಿ ಘೋಷಿಸಲಾಗಿದೆ. ಮಹಿಳೆಯರಿಗೆ ಉದ್ಯೋಗ, ಪೂರ್ವಜರ ಆಸ್ತಿಯಲ್ಲಿ ಪಾಲುದಾರಿಕೆ, ಭಾರತದ ಪ್ರತಿಯೊಬ್ಬ ಪ್ರಜೆಗೂ ಕಡ್ಡಾಯ ಶಿಕ್ಷಣ, ನಾಗರಿಕ ಸಮಾನತೆಯ ಹಕ್ಕು, ಮತ ಚಲಾವಣೆಯ ಮೂಲಕ ನಾಯಕರ ಆಯ್ಕೆಯ ಮಹತ್ವದ ಹಕ್ಕು ನಮಗೆ ನೀಡಿದ್ದಾರೆ.

ಸ್ವಯಂ ಪ್ರೇರಣೆಯಿಂದ ಸಂವಿಧಾನ ಓದಿ:

ಎಲ್ಲರೂ ಸ್ವಯಂ ಪ್ರೇರಣೆಯಿಂದ ಸಂವಿಧಾನವನ್ನು ಅಂಗೀಕರಿಸಿ, ಅಧಿನಿಯಮಿಸಿ,ಅರ್ಪಿಸಿಕೊಳ್ಳಬೇಕು
ಮುಂಜಾನೆ ಪ್ರತಿ ದಿನ ವಿದ್ಯಾರ್ಥಿಗಳು ಸಂವಿಧಾನ ಪೀಠಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಒಂದೇ ಜಾತಿಗೆ ಸೀಮಿತಗೊಳಿಸಿಬಾರದು. ದೇಶದ ಎಲ್ಲಾ ಜನರಿಗೂ ಸಂವಿಧಾನದ ಮೂಲಕ ಸಮಾನತೆಯನ್ನು ಕಲ್ಪಿಸಿ ಸಮಾನತೆಯ ಹರಿಕಾರನಾಗಿ ಛಾಪು ಮೂಡಿಸಿದ್ದಾರೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಸಲಹೆ ನೀಡಿದರು ತಿಳಿಸಿದರು.

ಸಂವಿಧಾನ ಪೀಠಿಕೆ ಬೋಧನೆ:

ಇದಕ್ಕೂ ಮುಂಚೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸಂವಿಧಾನ ದಿನ ಆಚರಣೆಯ ನಿಮಿತ್ಯ ಸಂವಿಧಾನ ಪೀಠಿಕೆಯನ್ನು ಭೋದಿಸಿದರು.

ಬೆಳಗಾವಿ ಉತ್ತರ ವಿಧಾನ ಸಭಾ ಮತ ಕ್ಷೇತ್ರದ ಶಾಸಕ
ಶಾಸಕ ಆಸೀಫ್ (ರಾಜು) ಸೇಠ್, ಮಹಾನಗರ ಪಾಲಿಕೆ ಮೇಯರ್ ಶೋಭಾ ಸೋಮನಾಚೆ, ಉಪ ಮೇಯರ್ ರೇಷ್ಮಾ ಪಾಟೀಲ, ನಗರ ಪೊಲೀಸ್ ಆಯುಕ್ತ ಎಸ್.ಎನ್ ಸಿದ್ದರಾಮಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ್, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಕ್, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ್ ಕಲಾದಗಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮಣ ಬಬಲಿ, ಅಂಗವಿಕಲರ ಕಲ್ಯಾಣಾಧಿಕಾರಿ ನಾಮದೇವ ಬಿಲ್ಕರ, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ರಾಜೀವ್ ಕೂಲೇರ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ ಕುರಿಹುಲಿ, ಡಿಎಚ್ಓ ಮಹೇಶ ಕೋಣಿ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಉಪ ನಿರ್ದೇಶಕ ಬಿ. ಶ್ರೀನಿವಾಸ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ, ಸಮಾಜದ ಮುಖಂಡರಾದ ಮಲ್ಲೇಶ ಚೌಗಲಾ, ಮಹಾದೇವ ತಳವಾರ, ಭಾವಾಕಣ್ಣ ಭಂಗ್ಯಾಗೊಳ (ನಾಯಕ್), ಉಪಸ್ಥಿತರಿದ್ದರು ಹಾಗೂ ವಿವಿಧ ಇಲಾಖೆಯ ವಸತಿ ನಿಲಯಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಜರಿದ್ದರು.