Belagavi News In Kannada | News Belgaum

ಸಾರ್ವಜನಿಕರ, ಶಾಲಾ ಮಕ್ಕಳ ಸುರಕ್ಷತೆಗಾಗಿ ಕಾಲು ಸಂಕಗಳ ನಿರ್ಮಾಣ: ಸಚಿವ ಸತೀಶ್‌ ಜಾರಕಿಹೊಳಿ

ವಿದ್ಯಾರ್ಥಿನಿಯರಿಂದ ಕಾಲು ಸಂಕ ಉದ್ಘಾಟಿಸಿದ ಸರಳತೆ ಮೆರೆದ ಸಚಿವ ಸತೀಶ್‌ ಜಾರಕಿಹೊಳಿ

 

ಶಿರಸಿ: ಸಾರ್ವಜನಿಕರು, ಶಾಲಾ ಮಕ್ಕಳ ಸುರಕ್ಷತೆಗಾಗಿ ಲೋಕೋಪಯೋಗಿ ಇಲಾಖೆ ವತಿಯಿಂದ ಮಹತ್ವದ ಕ್ರಮ ಕೈಗೊಂಡಿದ್ದು, ಅವಶ್ಯಕತೆ ಇರುವ ಸ್ಥಳಗಳಲ್ಲಿ 100 ಕಾಲು ಸಂಕಗಳನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

ಶಿರಸಿ ತಾಲೂಕಿನ ಹೆಗ್ಗಾರುವಿನಲ್ಲಿ ಇಂದು ಪ್ರಥಮ ಕಾಲುಸಂಕದ ಉದ್ಘಾಟನೆ ನೆರವೇರಿಸಿದೆ ಮಾತನಾಡಿದ ಅವರು,
ಯಥಾಪ್ರಕಾರ ಅಧಿಕಾರಿ, ರಾಜಕಾರಣಿಗಳೇ ಉದ್ಘಾಟನೆ ಮಾಡುವುದು ವಾಡಿಕೆ. ಆದರೆ ಆ ಸಂಪ್ರದಾಯ ಮುರಿದು, ಕಾರ್ಯಕ್ರಮದಲ್ಲಿ ಹಾಜರಿದ್ದ ವಿದ್ಯಾರ್ಥಿನಿಯರ ಕೈಯಿಂದ ಕಾಲು ಸಂಕವನ್ನು ಉದ್ಘಾಟನೆ ಮಾಡಿಸಿದ್ದು ಸಂತಸ ತಂದಿದೆ ಎಂದು ತಿಳಿಸಿದರು.

ರಾಜ್ಯದ ಸಂಪರ್ಕ ರಹಿತ ಜನವಸತಿ ಪ್ರದೇಶಗಳಲ್ಲಿ ಹೆಚ್ಚಾಗಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ವಾಸಿಸುವ ಜನರಿಗೆ ಮಳೆಗಾಲದ ಅವಧಿಯಲ್ಲಿ ರಭಸದಿಂದ ಹರಿಯುವ ಹಳ್ಳ ಮತ್ತು ತೊರೆಗಳನ್ನು ಸುರಕ್ಷಿತವಾಗಿ ದಾಟಲು ಕಾಲು ಸಂಕಗಳ ನಿರ್ಮಿಸುವುದು ಅವಶ್ಯವಾಗಿದೆ ಎಂದರು.

ಸಂಪರ್ಕ ರಹಿತ ಪ್ರದೇಶಗಳಲ್ಲಿ ವಾಸಿಸುವ ನಾಗರಿಕರು ಮತ್ತು ಶಾಲಾ ಮಕ್ಕಳು ಮಳೆಗಾಲದಲ್ಲಿ ಹಳ್ಳ ಮತ್ತು ತೊರೆಗಳನ್ನು ದಾಟಲು ಸ್ಥಳೀಯವಾಗಿ ಲಭ್ಯವಿರುವ ಮರದ ತುಂಡುಗಳು, ಹಗ್ಗ ಮುಂತಾದ ಅಸುರಕ್ಷಿತ ಸಾಮಗ್ರಿಗಳನ್ನು ಬಳಸಿ ನಿರ್ಮಿಸಿದ ಕಾಲುಸಂಕಗಳನ್ನು ಅವಲಂಬಿಸಿರುತ್ತಾರೆ. ಇದರಿಂದ ಹಲವು ಸ್ಥಳಗಳಲ್ಲಿ ಅವಘಡ ಸಂಭವಿಸಿ ಮಕ್ಕಳ ಜೀವಕ್ಕೂ ಹಾನಿಯಾದ ವರದಿಗಳಿದ್ದವು. ಇವುಗಳನ್ನು ನಿವಾರಿಸಲು ಕಾಲುಸಂಕಗಳ ನಿರ್ಮಾಣ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಹಳ್ಳ ಮತ್ತು ತೊರೆಗಳನ್ನು ಸುರಕ್ಷಿತವಾಗಿ ದಾಟಲು ಅನುಕೂಲವಾಗುವಂತೆ ಗರಿಷ್ಠ 3 ಮೀಟರ್ ಅಗಲದ ಕಾಲುಸಂಕಗಳನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಿಸಲು ಉದ್ದೇಶಿಸಿ, ಅವುಗಳ ವಿನ್ಯಾಸ ಹಾಗೂ ನಕ್ಷೆಯನ್ನು ಸರ್ಕಾರ ಸಿದ್ಧಪಡಿಸಿದೆ. ಈ ನಿಟ್ಟಿನಲ್ಲಿ ಮೊದಲನೆಯದಾಗಿ ಸುಮಾರು ಸಂಖ್ಯೆಯ ಕಾಲುಸಂಕಗಳ ನಿರ್ಮಾಣ ಕೈಗೊಳ್ಳಲು ಇಂದು ಚಾಲನೆ‌ ನೀಡಲಾಯಾಗಿದೆ. ಇದೇ ಮಾದರಿಯ ಇನ್ನೂ 385 ಅಸುರಕ್ಷಿತ ಕಾಲುಸಂಕಗಳನ್ನು ಗುರುತಿಸಿ ಸುರಕ್ಷಿತ ಮತ್ತು ಸರ್ವಋತು ಕಾಲುಸಂಕಗಳ ನಿರ್ಮಾಣವನ್ನು ಹಂತಹಂತವಾಗಿ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಚಿವ ಮಂಕಾಳ ವೈದ್ಯ, ಶಾಸಕ ಭೀಮಾ ನಾಯಕ್‌ ಸೇರಿದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.