Belagavi News In Kannada | News Belgaum

ಬಿಜೆಪಿ ಮುಖಂಡನಿಗೆ ಚಾಕು ಇರಿತ ಕೇಸ್​​: ಎಂಎಲ್‌ಸಿ ಚೆನ್ನರಾಜ್ ಹಟ್ಟಿಹೊಳಿ ವಿರುದ್ಧ ಎಫ್​​ಐಆರ್ ದಾಖಲು

ಬೆಳಗಾವಿ: ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್​ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚೆನ್ನರಾಜ್ ಹಟ್ಟಿಹೊಳಿ ವಿರುದ್ಧ ಬೆಳಗಾವಿ ಎಪಿಎಂಸಿ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಿಜೆಪಿ ಮುಖಂಡ ಪೃಥ್ವಿರಾಜ್ ಪುತ್ರ ಕೊಟ್ಟ ದೂರಿನ ಮೇರೆಗೆ ಚೆನ್ನರಾಜ್ ಹಟ್ಟಿಹೊಳಿ ಅವರ ಮೇಲೆ ಎಫ್​ಐಆರ್ ದಾಖಲಾಗಿದೆ. ತಂದೆ ಪೃಥ್ವಿ ಸಿಂಗ್ ಪರವಾಗಿ ಮಗ ಜಸ್ವಿರ್​​ ಸಿಂಗ್​​, ಬೆಳಗಾವಿಯ ಎಪಿಎಂಸಿ ಠಾಣೆಗೆ ದೂರು ನೀಡಿದ್ದಾರೆ. ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಚೆನ್ನರಾಜ್ ಹಟ್ಟಿಹೊಳಿ, ಸುಜೀತ್ ಜಾಧವ್, ಇಬ್ಬರು ಗನ್ ಮ್ಯಾನ್, ಸದ್ದಾಂ ಎನ್ನುವವರ ವಿರುದ್ಧ ಕೊಲೆ ಯತ್ನ, ಜಾತಿ ನಿಂದನೆ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಐಪಿಸಿ ಸೆಕ್ಷನ್ 1860(U/s 143, 147, 148, 323, 324, 379, 504, 506), ಅಟ್ರಾಸಿಟಿ ಕೇಸ್, ಐಪಿಸಿ ಸೆಕ್ಷನ್ 1989(u/s-3(1), (r)(s), 3(2)(v-a), IPC 1860(u/s-149ರಡಿ ಕೇಸ್ ದಾಖಲಾಗಿದೆ.
ಏನಿದು ಪ್ರಕರಣ?  ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅತ್ಯಾಪ್ತ ಪೃಥ್ವಿ ಸಿಂಗ್ (55) ಅವರಿಗೆ ಜಯ ನಗರದಲ್ಲಿ ಚಾಕುವಿನಿಂದ ಇರಿಯಲಾಗಿತ್ತು. ಕಾಂಗ್ರೆಸ್ ಎಂಎಲ್​ಸಿ ಚೆನ್ನರಾಜ ಹಟ್ಟಿಹೊಳಿ ಆಪ್ತರೇ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೇ ಇದರ ಹಿಂದೆ ಚೆನ್ನರಾಜ ಹಟ್ಟಿಹೊಳಿ ಕೈವಾಡ ಇದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಸದ್ಯ ಪೃಥ್ವಿ ಸಿಂಗ್ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೂರಿನಲ್ಲಿ ಏನಿದೆ..? 2018ರ ಚುನಾವಣೆಯಲ್ಲಿ ಜಯನಗರದ ನಮ್ಮ ಮನೆಯನ್ನ ಚುನಾವಣೆ ಕೆಲಸಕ್ಕೆ ತೆಗೆದುಕೊಂಡಿದ್ದರು. 10 ಲಕ್ಷ ರೂಪಾಯಿಗೆ ಮನೆಯನ್ನು ಲೀಸ್ ಗೆ ಕರಾರು ಮಾಡಲಾಗಿತ್ತು. ಲೀಸ್ ಆಗಿದ್ದ ಕರಾರಿನ ಪ್ರಕಾರ ಅವರು ನಡೆದುಕೊಂಡಿಲ್ಲ. ಬಿಜೆಪಿ ಸೇರಿದ ಮೇಲೆ ರಾಜ್ಯ ಎಸ್​​ಸಿ ಮೋರ್ಚಾಗೆ ಅವಿರೋಧ ಆಯ್ಕೆಯಾದೆ. ಆಗ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ನಮ್ಮ ನಡುವಿನ ಸಂಬಂಧ ಸರಿಯಾಗಿ ಉಳಿಯಲಿಲ್ಲ. ಬಿಜೆಪಿ ಸೇರಿದ ಮೇಲೆ ಕೆಲವು ಮೊಬೈಲ್ ಸಂಖ್ಯೆಯಿಂದ ನನಗೆ ಬೆದರಿಕೆ ಬರಲು ಶರುವಾದವು. 16/02/21 ರಂದು ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ದೂರು ಕೂಡ ಕೊಟ್ಟಿದ್ದೆ. ಡಿಸೆಂಬರ್ 04 ರಂದು ಚೆನ್ನರಾಜ ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ನನ್ನ ಬಳಿಯಿರುವ ಮೊಬೈಲ್‌ ಕಸಿದುಕೊಂಡು ಚೆನ್ನರಾಜ ಅವಾಚ್ಯ ಶಬ್ಧಗಳಿಂದ ಬೈದರು. ಆಷ್ಟೊತ್ತಿಗೆ ನೂಕಾಟ ತಳ್ಳಾಟ ಪ್ರಾರಂಭವಾಯ್ತು, ಅಗ ಸುಜೀತ್ ನನ್ನ ಹಿಡಿದುಕೊಂಡ ನನ್ನ ಮೇಲೆ ಹಲ್ಲೆ ಮಾಡಿದ. ಚನ್ನರಾಜ ಹಟ್ಟಿಹೊಳಿ ಇದಕ್ಕೆ ಪ್ರೋತ್ಸಾಹ ನೀಡಿದರು ಅಂತಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ./////