Belagavi News In Kannada | News Belgaum

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎಐಯುಟಿಯುಸಿ ಬೃಹತ್ ಪ್ರತಿಭಟನೆ

ಬೆಳಗಾವಿ: ವಿವಿಧ  ಸರ್ಕಾರಿ ಹಾಗೂ ಅನುದಾನಿತ  ಶಾಲೆಗಳಲ್ಲಿ ಅಡುಗೆ ಮಾಡುತ್ತಿರುವ ಸಿಬ್ಬಂದಿಗಳನ್ನು ರಾಜ್ಯ ಸರ್ಕಾರದ  ಕನಿಷ್ಠ ವೇತನ ಕಾಯ್ದೆಯ ಶೆಡ್ಯೂಲ್ ಗೆ ಒಳಪಡಿಸಿ ಕನಿಷ್ಠ ವೇತನ ಹಾಗೂ ಇಎಸ್‌ ಐಪಿಎಫ್‌ ಒದಗಿಸುಕೊಡುವಂತೆ ಒತ್ತಾಯಿಸಿ ಸಮೀಪದ ಸುವರ್ಣ ಗಾರ್ಡನ್ ಬಳಿ ಕರ್ನಾಟಕ ರಾಜ್ಯ ಸಂಯುಕ್ತ  ಅಕ್ಷರದಾಸೋಹ ಕಾರ್ಮಿಕ ಸಂಘದ ಸದಸ್ಯರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ  ಸಂಘದ ರಾಜ್ಯ ಅಧ್ಯಕ್ಷೆ ಶಾಂತಾ.ಎ  ಮಾತನಾಡಿ, ನಮ್ಮ ರಾಜ್ಯದಲ್ಲಿ ಬಿಸಿಯೂಟ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಮುಖ್ಯ ಅಡುಗೆಯವರು ಹುದ್ದೆಯಲ್ಲಿ 47. 250 ಮತ್ತು ಅಡುಗೆ ಸಹಾಯಕರಾಗಿ 71. 336 ಪ್ರಸ್ತುತ ಒಟ್ಟಾರೆ 1. 18. 586 ಅಡುಗೆ ತಯಾರಕರು ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಕಾರ್ಮಿಕ ಇಲಾಖೆ ಎಲ್ಲಾ ದುಡಿಯುವ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿ ಕಾಯ್ದೆಯನ್ನು ಜಾರಿಗೊಳಿಸಿದ್ದು, ಅದರಂತೆ ಸರ್ಕಾರಿ ಹಾಸ್ಟೆಲ್‌ಗಳಲ್ಲಿ, ಮದುವೆ ಛತ್ರಗಳಲ್ಲಿ, ಹೋಟೆಲ್ ಗಳಲ್ಲಿ ಕೆಲಸ ಮಾಡುವ ಅಡುಗೆಯವರಿಗೆ ಮತ್ತು ಸಹಾಯಕರಿಗೂ ವೇತನ ನಿಗದಿಗೊಳಿಸಿದೆ ಎಂದರು.

 

c

ಬಿಸಿಯೂಟ ಕಾರ್ಮಿಕರೂ ಅದೇ ಹುದ್ದೆಗಳಲ್ಲಿ ಕೆಲಸ ಮಾಡುವುದರಿಂದ ಅವರನ್ನೂ ಶೆಡ್ಯೂಲ್‌ಗೆ ಸೇರಿಸಿ ಶಾಸನಬದ್ಧ ಸೌಲಭ್ಯಗಳನ್ನು ಕೊಡಬೇಕು. ಅಪೌಷ್ಟಿಕತೆಯಿಂದ ಬಳಲುತ್ತಿರುವ ಎಲ್ಲಾ ಮಕ್ಕಳಿಗೆ ಅಡಿಗೆ ಮಾಡಿ ಬಡಿಸುವುದು, ಹಾಲು ಕಾಯಿಸಿ ನೀಡುವುದು, ಮೊಟ್ಟೆ, ಬಾಳೆಹಣ್ಣು ಕೊಟ್ಟು ಅತ್ಯಂತ ಜತನದಿಂದ ಕೆಲಸ ನಿರ್ವಹಿಸುತ್ತಿರುವ ಈ ಮಹಿಳೆಯರು ಮಹಾತಾಯಂದಿರಾಗಿದ್ದಾರೆ. ಆದರೆ ಇವರಿಗೆ ಗೌರವಧನದ ಹೆಸರಿನಲ್ಲಿ ಕೇವಲ 3700-3600 ಮಾಸಿಕ ಮಾತ್ರ.ಅದೂ ಕೂಡ 2-3 ತಿಂಗಳಿಗೊಮ್ಮೆ ವೇತನ ಪಾವತಿಯಾಗುತ್ತದೆ. ವರ್ಷದ ಕೇವಲ 10 ತಿಂಗಳು ಮಾತ್ರ ಕೆಲಸ ನೀಡಲಾಗುವ ಇವರಿಗೆ ಸೇವಾ ಹಿರಿತನದ ಭತ್ಯೆ ಇಲ್ಲ. ಇದೀಗ ವಯೋನಿವೃತ್ತಿಯಾಗುತ್ತಿರುವವರಿಗೆ ಯಾವುದೇ ಇಡಿಗಂಟಿನ ಸಹಕಾರವಾಗಲಿ, ನಿವೃತ್ತಿ ವೇತನವಾಗಲಿ ಇಲ್ಲ. ಶಾಸನಬದ್ಧವಾಗಿ ದೊರಕಬೇಕಾದ ವೇತನ ಸಹಿತ ಹೆರಿಗೆ ರಜೆ, ವೈದ್ಯಕೀಯ ಸೌಲಭ್ಯಗಳೂ ದೊರಕುತ್ತಿಲ್ಲ. ಅಷ್ಟೇ ಅಲ್ಲ ಅಪೌಷ್ಟಿಕತೆಯನ್ನು ನೀಗಿಸಿ ಭವಿಷ್ಯದ ನಾಗರಿಕರನ್ನು ರೂಪಿಸುವ ಮಹತ್ತರ ಜವಾಬ್ದಾರಿ ಹೊತ್ತಿರುವ ಇವರ ಮಕ್ಕಳಿಗೆ ಮಾತ್ರ ಶಿಕ್ಷಣ, ಆರೋಗ್ಯ, ಭವಿಷ್ಯಗಳು ಮಂಕಾಗಿವೆ. ಆದ್ದರಿಂದ ಈ ಕಾರ್ಮಿಕರನ್ನು ಕಾರ್ಮಿಕ ಇಲಾಖೆಯ ಶೆಡ್ಯೂಲ್‌ಗೆ ಸೇರಿಸಬೇಕು ಎಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿರಾಜ್ಯ ಕಾರ್ಯದರ್ಶಿಸಂಧ್ಯಾ.ಪಿ.ಎಸ್  ಮಾತನಾಡಿ,  ಹಿಂದಿನ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದ ಒಂದು ಸಾವಿರ ರೂ.ನಷ್ಟು ಹೆಚ್ಚಿಸಿ ಘೋಷಿಸಿದ್ದು, ಕೇವಲ ಚುನವಣೆ ಕಾಲದಲ್ಲಿ ಮೂಗಿಗೆ ತುಪ್ಪ ಸವರಿದ್ದಷ್ಟೇ ಆಗಿದೆ. ಈಗ ದೊರೆಯುತ್ತಿರುವ ಬಹಳೇ ಕನಿಷ್ಠ ಮಾಸಿಕ ಗೌರವಧನದಲ್ಲಿ  ಪಟ್ಟಣಗಳಲ್ಲಿ ಒಂದು ತಿಂಗಳ ಬಾಡಿಗೆಯನ್ನೂ ಕಟ್ಟಲು ಆಗುವುದಿಲ್ಲ.ಅಲ್ಲದೇ ಈಗಿರುವ ಗ್ಯಾರಂಟಿಗಳಿಂದ ಜೀವನ ಬದಲಾಗಿಲ್ಲ.ಇಂದಿನ ಬೆಲೆಯೇರಿಕೆಗೆ ತಕ್ಕಂತೆ ಇವರ ವೇತನ ಹೆಚ್ಚಿಸಬೇಕು.ಅವರಿಗೆ ವರ್ಷಪೂರ್ತಿ ಕೆಲಸ ನೀಡಿ,ಸಮವಸ್ತç,ಗುರುತಿನ ಚೀಟಿ,ಹೆರಿಗೆ ರಜೆ,ಅನಾರೋಗ್ಯದ ರಜೆ ಇತ್ಯಾದಿಗಳನ್ನು ಖಾತ್ರಪಡಿಸಬೇಕು.ಇದಕ್ಕಾಗಿ ಎಲ್ಲ ಬಿಸಿಯೂಟ ಕಾರ್ಮಿಕರು ಒಗ್ಗಟ್ಟನ್ನು ಬಲಪಡಿಸಿಕೊಂಡು ರಾಜೀರಹಿತ ಹೋರಾಟಕ್ಕೆ ಮುಂದಾಗಬೇಕು ಎಂದರು.

ಬೇಡಿಕೆಗಳು:  ಮದುವೆ ಛತ್ರಗಳಲ್ಲಿ, ಹಾಸ್ಟೆಲ್‌ಗಳಲ್ಲಿ, ಹೋಟೆಲ್‌ಗಳಲ್ಲಿ ಕೆಲಸ ಮಾಡುವ ಅಡುಗೆ ಸಿಬ್ಬಂದಿಗಳನ್ನು ಕಾರ್ಮಿಕ ಇಲಾಖೆಯ ಶೆಡ್ಯೂಲ್‌ನಲ್ಲಿ ತರಲಾಗಿದೆ.ಆದ್ದರಿಂದ ಅದೇ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವ ಬಿಸಿ ಊಟದ ಅಡುಗೆ ತಯಾರು ಮಾಡುವ ಮುಖ್ಯ ಅಡುಗೆಯವರು, ಅಡುಗೆ ಸಹಾಯಕರನ್ನು ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಕಾಯ್ದೆಯ ಅನ್ವಯ ಶೆಡ್ಯೂಲ್‌ನಲ್ಲಿ ತಂದು ಆ ಹುದ್ದೆಗೆ ನಿಗದಿಪಡಿಸಿರುವಷ್ಟು ಮಾಸಿಕ ವೇತನ ,ಇಪಿಎಫ್, ಇಎಸ್‌ಐ ಸೌಲಭ್ಯಗಳನ್ನು ನೀಡಬೇಕು, ಶಾಸನಬದ್ಧ ಸೌಕರ್ಯಗಳಾದ ವಾರದ ರಜೆ, ರಾಷ್ಟ್ರೀಯ ಹಬ್ಬದ ರಜೆ, ಹೆರಿಗೆ ರಜೆಗಳನ್ನು ನೀಡಬೇಕು, ರಜಾ ದಿನಗಳಲ್ಲಿ ಕೆಲಸ ಮಾಡಿದರೆ ದುಪ್ಪಟ್ಟು ವೇತನ ನೀಡಬೇಕು, ಮಾಸಿಕ ವೇತನವನ್ನು ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಪಾವತಿಸಬೇಕು, ಪ್ರತಿ ತಿಂಗಳು ವೇತನ ಚೀಟಿ ನೀಡಬೇಕು, ಸುರಕ್ಷಿತ ನಿವೃತ್ತಿ ಬದುಕು ಖಾತ್ರಿಪಡಿಸುವುದಕ್ಕಾಗಿ, ನಿವೃತ್ತಿ ವೇತನಕ್ಕೆ ಒಳಪಡಿಸಿ, ಅಲ್ಲಿಯವರೆಗೆ 5 ಲಕ್ಷ ಇಡಿಗಂಟು ನೀಡಬೇಕು ಮತ್ತು ಜೀವ ವಿಮೆಗೆ ಒಳಪಡಿಸಿ ಇಲಾಖೆಯಿಂದಲೇ ಪ್ರೀಮಿಯಂ ಪಾವತಿಸಬೇಕು, ಹತ್ತಿ ಬಟ್ಟೆಯ ಸಮವಸ್ತ್ರ ಹಾಗೂ ಕೈಗವಸು, ತಲೆಯ ಸ್ಕಾರ್ಫ್, ಏಪ್ರಾನ್ ಗಳನ್ನು ಖಾತ್ರಿಪಡಿಸಿ. ಎಲ್ಲರಿಗೂ ಗುರುತಿನ ಚೀಟಿ ವಿತರಿಸಲು ಕ್ರಮ ಕೈಗೊಳ್ಳಬೇಕು, ಪ್ರತಿ  3 ತಿಂಗಳಿಗೊಮ್ಮೆ ಸಂಘದ ಪದಾಧಿಕಾರಿಗಳ ಜೊತೆ ಕುಂದುಕೊರತೆ ಸಭೆ ನಡೆಸಿ, ತೀರ್ಮಾನ ಕೈಗೊಂಡಿರುವುದರ ಕುರಿತು ಅಧಿಕೃತ ಜ್ಞಾಪನಾ ಪತ್ರ ಹೊರಡಿಸಬೇಕು, ಶಿಕ್ಷಣ ವಿರೋಧಿ ಮತ್ತು ಕಾರ್ಮಿಕ ವಿರೋಧಿ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ (ಎನ್‌ಇಪಿ) ಯನ್ನು ರದ್ದುಗೊಳಿಸಬೇಕು, ಬಿಸಿ ಊಟದ ಕಾರ್ಮಿಕರಿಗೆ ಒಂದು ವರ್ಷದಲ್ಲಿ 10 ತಿಂಗಳು ಮಾತ್ರ ಗೌರವಧನವನ್ನು ನೀಡುತ್ತಿದ್ದು ಅದನ್ನು ವರ್ಷ ಪೂರ್ತಿ ನೀಡಬೇಕು ಎಂಬ ಬೇಡಿಕೆಗಳನ್ನು ಮುಂದಿರಿಸಿದ್ದಾರೆ.

 ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಚಿವ ರಾಮಲಿಂಗ ರೆಡ್ಡಿ: ಅಕ್ಷರ ದಾಸೋಹ ಕಾರ್ಮಿಕರ ಸಂಘದ ಕಾರ್ಯಕರ್ತೆಯರಿಂದ ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಸಚಿವ ರಾಮಲಿಂಗಾ ರೆಡ್ಡಿ  ಆಗಮಿಸಿ ಅವರ ಮನವಿ ಸ್ವೀಕರಿಸಿ ಬೇಡಿಕೆ ಈಡೇರಿಸುವಂತೆ ಭರವಸೆ ನೀಡಿದರು.
ಈ ಬೃಹತ್‌ ಪ್ರತಿಭಟನೆಯಲ್ಲಿ ರಾಜ್ಯ ನಾಯಕಿ ಭುವನಾ ಬಳ್ಳಾರಿ, ಎಐಯುಟಿಯುಸಿ ರಾಜ್ಯ ಸೆಕ್ರಟರಿಯೇಟ್ ಸದಸ್ಯ ಗಂಗಾಧರ ಬಡಿಗೇರ,  ಜಾಹೀದಾ ಹೊಂಬಳ, ರಾಜಮ್ಮ ಕುಂದಗೋಳ, ,ರೇಣುಕಾ ಕರಿಗಾರ,ಮಾಲತಿ ಮುಗಳಿ,ಲಲಿತಾ ಸೋಲದ, ಜ್ಯೋತಿ ವಾಯಚಾಳ, ಸಾವಿತ್ರಿ ಮುದ್ದೇಬಿಹಾಳ, ಲಲಿತಾ ಹೊಸಮನಿ, ಗೌರಮ್ಮ ಗುಡ್ಡದಮನಿ,ಉಮಾ ಹಿರೇಮಠ,ಲಕ್ಷಿö್ಮ ಗರಗ,ಜೈಬುನ ಮಾಳಗಿ,ಖುತೇಜಾ ಕೋಟೂರ, ಅನಿತಾ ಕುಸುಗಲ್, ಮುಂತಾದವರು  ಇದ್ದರು./////