Belagavi News In Kannada | News Belgaum

ರಂಗಸಂಪದವರಿಂದ ಪತ್ರಿಕಾ ಗೋಷ್ಠಿ ನಿನಾಸಂ ತಂಡದವರಿಂದ ಎರಡು ನಾಟಕ

 

ಬೆಳಗಾವಿ 5- ನಗರದ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಭಾಭವನದಲ್ಲಿ ಇಂದು ದಿ. 5 ಮಂಗಳವಾರ ಮುಂಜಾನೆ 10-30 ಕ್ಕೆ ರಂಗಸಂಪದದವರು ದಿ. 9 ಶನಿವಾರ ಮತ್ತು ದಿ. 10 ರವಿವಾರದಂದು ಹಮ್ಮಿಕೊಂಡಿರುವ ನಿನಾಸಂ ತಂಡದವರಿಂದ ‘ನಿನಾಸಂ ತಿರುಗಾಟ’ ಎರಡು ನಾಟಕಗಳ ಪ್ರದರ್ಶನ ಕುರಿತಂತೆ ಪತ್ರಿಕಾ ಗೋಷ್ಠಿಯನ್ನು ಕರೆದಿದ್ದರು. ರಂಗಸಂಪದದ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿಯವರು ಮಾತನಾಡುತ್ತ ಎಲ್ಲ ವಿವರಗಳನ್ನು ನೀಡಿದರು.
ಬೆಳಗಾವಿಯ ರಂಗಸಂಪದ ತಂಡವು 1978ರಲ್ಲಿ ಪ್ರಾರಂಭವಾಯಿತು. ಸತತವಾಗಿ 45 ವರ್ಷಗಳಿಂದ ಈ ಸಂಸ್ಥೆಯು ರಂಗಭೂಮಿ ಚಟುವಟಿಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ನುರಿತ ಕಲಾವಿದರು, ನಿರ್ದೇಶಕರನ್ನು ಹೊಂದಿರುವ ರಂಗಸಂಪದ ಬೇರೆ ಬೇರೆ ನಾಟಕಗಳ ಪ್ರದರ್ಶನವನ್ನು ನೀಡುವುದಲ್ಲದೇ ಕರ್ನಾಟಕದ ಬೇರೆ ಬೇರೆ ಊರುಗಳಿಂದ ನಾಟಕ ತಂಡಗಳನ್ನು ಆಹ್ವಾನಿಸಿ ವೇದಿಕೆಯನ್ನೊದಗಿಸಿ ಕೊಡುವದರ ಮೂಲಕ ರಂಗಭೂಮಿಯನ್ನು ಪ್ರೋತ್ಸಾಹಿಸುತ್ತ ಬಂದಿದೆ.
ರಂಗಾಯಣ-ಮೈಸೂರು, ರಂಗಾಯಣ ಧಾರವಾಡ, ನಿನಾಸಂ, ರಂಗಶಂಕರ ಬೆಂಗಳೂರು ಹೀಗೆ ಮುಂತಾದ ಕಡೆಗಳಿಂದ ತಂಡಗಳನ್ನು ಆಹ್ವಾನಿಸಿ ಪ್ರತಿವರ್ಷವೂ ಸುಮಾರು 10 ರಿಂದ 12 ನಾಟಕಗಳ ಪ್ರದರ್ಶನವನ್ನು ರಂಗಸಂಪದ ನೀಡುತ್ತ ಬಂದಿದೆ.
ಕೆ. ವಿ. ಸುಬ್ಬಣ್ಣನವರು ಪ್ರಾರಂಭಿಸಿರುವ ಹೆಗ್ಗೋಡಿನ ನಿನಾಸಂ, ರಂಗಭೂಮಿ ಕುರಿತು ಕಲಿಯುವವರಿಗೊಂದು ವಿಶ್ವವಿದ್ಯಾಲಯವೇ ಆಗಿದೆ. ಇಲ್ಲಿ ಕಲಿತು ಹೊರಬಂದ ಕಲಾವಿದರು. ಚಲನಚಿತ್ರ, ನಾಟಕಗಳಲ್ಲಿ ತಮ್ಮ ಅತ್ಯುತ್ತಮ ಅಭಿನಯದಿಂದ ಹೆಸರು ಮಾಡಿದವರಾಗಿದ್ದಾರೆ ಅವರಲ್ಲಿ ಅಚ್ಯುತಕುಮಾರ, ನಿನಾಸಂ ಸತೀಶ, ದರ್ಶನ ತೂಗದೀಪ ಮುಂತಾದವರು ಪ್ರಮುಖರಾಗಿದ್ದಾರೆ.
ಪ್ರತಿವರ್ಷ ನಿನಾಸಂ ನಾಟಕಗಳನ್ನು ರಚಿಸಿ ‘ನಿನಾಸಂ ತಿರುಗಾಟ’ ಎಂಬ ಹೆಸರಿನಲ್ಲಿ ಕರ್ನಾಟಕದ ಬೇರೆ ಬೇರೆ ಊರುಗಳಲ್ಲಿ ನಾಟಕಗಳ ಪ್ರದರ್ಶನವನ್ನು ನೀಡುತ್ತಾರೆ. ಬೆಳಗಾವಿಯಲ್ಲಿ ರಂಗಸಂಪದವು ನಿನಾಸಂ ನಾಟಕಗಳನ್ನು ಆಹ್ವಾನಿಸಿ ಬೆಳಗಾವಿಯ ರಂಗಾಸಕ್ತರಿಗೆ ತೋರಿಸುತ್ತಿತ್ತು. ನಾಲ್ಕೈದು ವರ್ಷ ಕಾರಣಾಂತರದಿಂದ ಈ ಕಾರ್ಯ ಸ್ಥಗಿತಗೊಂಡಿತ್ತು. ಈ ವರ್ಷ ಮತ್ತೆ ರಂಗಸಂಪದ ನಿನಾಸಂ ನಾಟಕ ತಂಡವನ್ನು ಆಹ್ವಾನಿಸಿ ಪ್ರದರ್ಶನ ಮಾಡುತ್ತಿದೆ.
ಈ ನಿಟ್ಟಿನಲ್ಲಿ ನಗರದ ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮಂದಿರದಲ್ಲಿ ಎರಡು ನಾಟಕಗಳು ಪ್ರದರ್ಶನಗೊಳ್ಳಲಿದ್ದು ದಿ. 9 ಶನಿವಾರದಂದು ಸಾಯಂಕಾಲ 6-30 ಕ್ಕೆ ಕೆ. ಜಿ. ಕೃಷ್ಣಮೂರ್ತಿಯವರುÀ ನಿರ್ದೇಶಿಸಿರುವ, ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಡಾ. ಚಂದ್ರಶೇಖರ ಕಂಬಾರ ಇವರು ರಚಿಸಿರುವ ‘ಹುಲಿಯ ನೆರಳು’ ನಾಟಕ ಹಾಗೂ ದಿ. 10 ರವಿವಾರದಂದು ಸಾಯಂಕಾಲ 6-30 ಕ್ಕೆ ಇಂಗ್ಲೀಷ ಮೂಲದ ನಟರಾಜ ಹೊನ್ನವಳ್ಳಿ ಕನ್ನಡಕ್ಕೆ ಅನುವಾದಿಸಿದ್ದು ಶ್ರೀಮತಿ ಶ್ವೇತಾರಾಣಿ ಹೆಚ್. ಕೆ. ನಿರ್ದೇಶಿಸಿರುವ ‘ಆ ಲಯ ಈ ಲಯ’ ನಾಟಕದ ಪ್ರದರ್ಶನವಿದೆ.
ಈ ನಾಟಕೋತ್ಸವವನ್ನು ಹಿರಿಯ ನ್ಯಾಯವಾದಿಗಳಾದ ಎಸ್. ಎಂ. ಕುಲಕರ್ಣಿಯವರು ಮತ್ತು ರಂಗಸಂಪದದ ಪೋಷಕರು ಉದ್ಘಾಟಿಸಲಿದ್ದಾರೆ. ಈ ನಾಟಕೋತ್ಸವಕ್ಕೆ ಧನಸಹಾಯವನ್ನು ಮಾಡಿರುವ ಮಹನೀಯರನ್ನು ಪುಷ್ಪಗುಚ್ಛ ಕೊಟ್ಟು ಗೌರವಿಸಲಾಗುವುದು.
ರಂಗಾಸಕ್ತರು, ಪ್ರೇಕ್ಷಕರು ಈ ನಾಟಕೋತ್ಸವಕ್ಕೆ ಬಂದು ರಂಗಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕು ಅದರಂತೆ ಮಾಧ್ಯಮಮಿತ್ರರು ಹೆಚ್ಚಿನ ಪ್ರಚಾರ ನೀಡಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೇಳಿಕೊಂಡರು.
ಪತ್ರಿಕಾ ಗೋಷ್ಠಿಯಲ್ಲಿ ಗುರುನಾಥ ಕುಲಕರ್ಣಿ, ಪ್ರಸಾದ ಕಾರಜೋಳ, ಚಿದಾನಂದ ವಾಳ್ಕೆ ಉಪಸ್ಥಿತರಿದ್ದರು.