Belagavi News In Kannada | News Belgaum

ಭಾರತೀಯ ಜೈನ ಸಂಘಟನೆಯ ಸಮಾಜ ಕಾರ್ಯ ಶ್ಲಾಘನೀಯ – ಅಭಯ ಪಾಟೀಲ

 

ಬೆಳಗಾವಿ.ಡಿ.5 : ಭಾರತದಲ್ಲಿ ಭಾರತೀಯ ಜೈನ ಸಂಘಟನೆಯು ಅತ್ಯಂತ ಶಿಸ್ತುಬದ್ದ ರೀತಿಯಲ್ಲಿ ಹಾಗೂ ಜೈನ ಸಮಾಜ ಸೇರಿದಂತೆ ಎಲ್ಲ ಸಮಾಜದ ವರ್ಗದವರಿಗೆ ಸಹಾಯ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅವರು ಹೇಳಿದರು.

ಬೆಳಗಾವಿಯ ಮಿಲೆನಿಯಂ ಗಾರ್ಡನದಲ್ಲಿ ಭಾರತೀಯ ಜೈನ ಸಂಘಟನಾ ವತಿಯಿಂದ ಹಮ್ಮಿಕೊಳ್ಳಲಾದ ಜೈನ ವಧು ವರ ಪರಿಚಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಸಮಾಜದಲ್ಲಿ ಅನೇಕ ಸಂಘಟನೆಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ ಸಮಾಜಮುಖಿ ಕಾರ್ಯದಲ್ಲಿ ಕೆಲವೇ ಕೆಲ ಸಂಘಟನೆಗಳು ತೊಡಗಿಸಿಕೊಂಡಿದ್ದು, ಅವುಗಳಲ್ಲಿ ಭಾರತೀಯ ಜೈನ ಸಂಘಟನೆ ಒಂದಾಗಿದೆ ಎಂದು ಅವರು ತಿಳಿಸಿದರು.

ಸಮಾರಂಭದಲ್ಲಿ ಭಾರತೀಯ ಜೈನ ಸಂಘಟನೆಯ ಬೆಳಗಾವಿಯ ವಿಭಾಗದ ಅಧ್ಯಕ್ಷ ಪ್ರಾಸ್ತಾವಿಕವಾಗಿ ಮಾತನಾಡಿದ ಅರುಣ ಯಲಗುದ್ರಿ ಅವರು ಭಾರತೀಯ ಜೈನ ಸಂಘಟನೆಯು ಇಂದಿನ ಯುವ ಪೀಳಿಗೆಯ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ವಿಶೇಷವಾದ ವಧು ವರ ಪರಿಚಯ ಸಮಾವೇಶವನ್ನು ಏರ್ಪಡಿಸಿದೆ. ಈ ಪರಿಚಯ ಸಮಾವೇಶದ ಮೂಲಕ ಯುವಕ-ಯುವತಿಯರು ಪರಿಸ್ಪರ ಅರಿತುಕೊಳ್ಳಬಹುದು.ತಮ್ಮ ತಮ್ಮ ವಿಚಾರಗಳನ್ನು ಹಂಚಿಕೊಳ್ಳಬಹುದು. ಇದರಿಂದ ಜೀವನ ಸಂಗಾತಿಯನ್ನು ಆಯ್ಕೆಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.

ಸಮಾರಂಭದಲ್ಲಿ ಸಂಘಟನೆಯ ಮಾಜಿ ಅಧ್ಯಕ್ಷ ಪ್ರಫುಲ ಪಟೇಲ ಮಾತನಾಡಿ ಕಾರ್ಯಕ್ರಮದ ಉದ್ದೇಶ , ಮಹತ್ವವನ್ನು ತಿಳಿಸಿಕೊಡುವುದರ ಜೊತೆಗೆ ಪರಿಚಯ ಸಮಾವೇಶವನ್ನು ನಡೆಸಿಕೊಟ್ಟರು. ಸಮಾರಂಭದ ವೇದಿಕೆ ಮೇಲೆ ಮಾಜಿ ಶಾಸಕ ಸಂಜಯ ಪಾಟೀಲ, ಹಿರಿಯ ನ್ಯಾಯವಾದಿ ರವಿರಾಜ ಪಾಟೀಲ,ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ, ಭಾರತೀಯ ಜೈನ ಸಂಘಟನೆಯ ರಾಜ್ಯ ಕಾರ್ಯಕಾರಣೀ ಸದಸ್ಯ ಶ್ರೀಪಾಲ ಖೇಮಲಾಪೂರೆ, ಮಹಿಳಾ ವಿಭಾಘದ ಸದಸ್ಯೆ ಪುಷ್ಪಾ ಲುಕ್ಕಡ, ಸುನಿಲ ಹನಮಣ್ಣವರ, ದೀಪಕ ಧಡೂತಿ, ಜಬ್ಬರಚಂದ ಜೈನ, ಉತ್ತಮ ಪೋರವಾಲ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಸಂಘಟನೆಯ ಬೆಳಗಾವಿ ವಿಭಾಗದ ಕಾರ್ಯದರ್ಶಿ ಹೀರಾಚಂದ ಕಲಮನಿ ಅತಿಥಿಗಳನ್ನು ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿಸುಮಾರು 200 ಕ್ಕು ಹೆಚ್ಚು ವಧು ವರ ಮತ್ತು ಪಾಲಕರು ಭಾಗವಹಿಸಿದ್ದರು.