Belagavi News In Kannada | News Belgaum

ಕಳಪೆ ಆಹಾರ: ಪೊಲೀಸರ ಆಕ್ರೋಶ

ಬೆಳಗಾವಿ:ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆದಿರುವ ಚಳಿಗಾಲ ಅಧಿವೇಶನ ಭದ್ರತೆಗಾಗಿ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ನೂರಾರು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಕಳಪೆ ಉಪಹಾರ ಹಾಗೂ ಆಹಾರ ಪೂರೈಸುತ್ತಿರುವ ಬಗ್ಗೆ ಬುಧವಾರ ಆಕ್ರೋಶ ಹೊರ ಹಾಕಿದ್ದಾರೆ.

ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನಾಕಾರರಿಗೆ ಹಾಕಲಾದ ಟೆಂಟ್ ಬಳಿ ಭದ್ರತೆಗೆ ನಿಯೋಜನೆಗೊಂಡಿರುವ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಆದರೆ, ಕಳೆದೆರೆಡು ದಿನಗಳಿಂದ ಸರಿಯಾದ ಊಟ ಬಡಿಸುತ್ತಿಲ್ಲ. ಇನ್ನೂ ಊಟ ಮಾಡುವವರಿದ್ದರೂ ಎಲ್ಲವೂ ಖಾಲಿ ಆಗಿದೆ ಎನ್ನುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಕಳೆದು ಎರಡು ದಿನಗಳಿಂದ ಸರಿಯಾಗಿ ಊಟ ಸಿಗುತ್ತಿಲ್ಲ. ಅರ್ಧ ಹೊಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಬುಧವಾರ ಮಧ್ಯಾಹ್ನ ಹಸಿಬಿಸಿಯಾಗಿ ಬೇಯಿಸಿದ ಪಲ್ಲೆ ಮಾಡಲಾಗಿದೆ. ಎರಡು ದಿನಗಳಿಂದ ಅನ್ನ, ಸಾಂಬರು ಊಟ ಮಾಡಲು ಸಹ ಆಗುತ್ತಿಲ್ಲ. ಉಪ್ಪು, ಖಾರಾ ಎರಡೂ ಇಲ್ಲದಂತಹ ಸಾಂಬಾರು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಆಹಾರ ಪೂರೈಸುವ ಗುತ್ತಿಗೆದಾರರ ವಿರುದ್ಧ ಹರಿಹಾಯ್ದರು.

ಸಕ್ಕರೆ ಕಾಯಿಲೆ, ಹೃದಯರೋಗಕ್ಕೆ‌ಒಳಗಾಗಿರುವ ಹಲವಾರು ಜನ ಪೊಲೀಸರು ಹಗಲು ರಾತ್ರಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಅವರಿಗೆ ಹೊಟ್ಟೆಗೆ ಸರಿಯಾಗಿ ಊಟ ಇಲ್ಲ ಅಂದರೆ ಹೇಗೆ ತಾನೆ ಕೆಲಸ ಮಾಡಬೇಕು. ಈ ಕಳಪೆ ಆಹಾರದಿಂದ ನಾವ್ಯಾರು ಸರಿಯಾಗಿ ಊಟ ಮಾಡಲಾಗುತ್ತಿಲ್ಲ. ಇದರಿಂದ ಆರೋಗ್ಯ ಸಮಸ್ಯೆ ಎದುತಿಸುತ್ತಿದ್ದೇವೆ. ಹಿರಿಯ ಅಧಿಕಾರಿಗಳು ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ  ಎಂದು ಪೊಲೀಸರು ದೂರಿದರು.

ಜರ್ಮನ್ ಟೆಂಟ್ ನಲ್ಲಿಯೂ ಸಮಸ್ಯೆ: ಸುಮಾರು 2 ಕೋಟಿ ರೂ.ಗಳ ವೆಚ್ಚದಲ್ಲಿ ಪೊಲೀಸರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿರುವ ಜರ್ಮನ್ ಟೆಂಟ್ ಪೊಲೀಸರ ಪಾಲಿಗೆ ವರದಾನವಾಗುವ ಬದಲಿಗೆ ಶಾಪವಾಗಿ ಪರಿಣಮಿಸಿದೆ.

ಈ ಟೆಂಟ್ ಸಂಪೂರ್ಣ ಪ್ಲಾಸ್ಟಿಕ್ ಹೊದಿಕೆಯಾಗಿರುವುದರಿಂದ ಗಾಳಿಯಾಡದೇ ರಾತ್ರಿ ಮಂಜಿನ ಹನಿಗಳು ಬೀಳುತ್ತಿದ್ದು, ಹಾಸಿಗೆ, ಹೊದಿಕೆ ಎರಡೂ ತೊಯ್ದು ತಂಪಾಗುತ್ತಿವೆ. ಇದರಿಂದ ರಾತ್ರಿ ನಿದ್ದೆ ಮಾಡಲು ಸಹ ಆಗುತ್ತಿಲ್ಲ ಎಂದು ಪೊಲೀಸರು ಅಳಲು ತೋಡಿಕೊಂಡಿದ್ದಾರೆ.cc