Belagavi News In Kannada | News Belgaum

ಕಂದಾಯ ಗ್ರಾಮ ಪರಿವರ್ತನೆಗೆ ಕ್ರಮ: ಸಚಿವ ಕೃಷ್ಣ ಭೈರೇಗೌಡ

ಬೆಳಗಾವಿ: ರಾಜ್ಯದ ವಿವಿಧೆಡೆ ಇರುವ ಲಂಬಾಣಿ ತಾಂಡಾ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ಕುರುಬರಹಟ್ಟಿ, ನಾಯಕರಹಟ್ಟಿ, ಮಜರೆಗ್ರಾಮ, ಹಾಡಿ, ದೊಡ್ಡಿ, ಪಾಳ್ಯ, ಕ್ಯಾಂಪ್, ಕಾಲೋನಿ ಮತ್ತು ಇತರೆ ದಾಖಲೆ ದಾಖಲೆ ರಹಿತ ಜನವಸತಿ ಪ್ರದೇಶಗಳು, ಕಂದಾಯ ಗ್ರಾಮ ಪಟ್ಟಿಯಿಂದ ಬಿಟ್ಟು ಹೋಗಿವೆ. ಅಂತಹುಗಳನ್ನು ಪರಿಶೀಲಿಸಿ ಕಂದಾಯ ಗ್ರಾಮವನ್ನಾಗಿ ಮಾಡಲು ಕ್ರಮ ವಹಿಸಲಾಗುವುದು ಎಂದು ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರು ಹೇಳಿದರು.
ದುರ್ಬಲ ಮತ್ತು ಹಿಂದುಳಿದ ಸಮುದಾಯದ ಜನರು ವಾಸಿಸುವ ಪ್ರದೇಶಗಳು ಕಂದಾಯ ಗ್ರಾಮಗಳಾಗದೇ ಹಾಗೆ ಉಳಿದು ತೀರಾ ಶೋಚನೀಯ ಸ್ಥಿತಿಯಲ್ಲಿವೆ. ಇದಕ್ಕಾಗಿ ಸಮಿತಿಯೊಂದನ್ನು ರಚಿಸಿ ಅದರಿಂದ ಗೊಲ್ಲರಹಟ್ಟಿಗಳನ್ನು ಗುರುತಿಸಿ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವ ಕಾರ್ಯವಾಗಬೇಕು ಎಂದು ವಿಧಾನ ಪರಿಷತ್‌ನಲ್ಲಿ ಡಿಸೆಂಬರ್ 6ರಂದು ಶಾಸಕರಾದ ಎಂ.ನಾಗರಾಜ ಅವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ದಾಖಲೆ ರಹಿತ ಮಜರೆ ಗ್ರಾಮಗಳನ್ನು ಅಧಿಕೃತವಾಗಿ ಗುರುತಿಸಿ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಕಾರ್ಯಕ್ಕೆ ಹೆಚ್ಚಿನ ಒತ್ತು ಕೊಡಬೇಕು ಎಂದು ಈಗಾಗಲೇ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಸಂಬAಧ ಆಗಾಗ ವಿಡಿಯೋ ಸಂವಾದ ನಡೆಸಿ ನಿರ್ದೇಶನ ನೀಡಲಾಗುತ್ತಿದೆ. ಈ ಬಗ್ಗೆ ಆಯಾ ಶಾಸಕರೊಂದಿಗೆ ಸಹ ಚರ್ಚಿಸಿದ್ದು ಆಯಾ ಕಡೆಗಳಲ್ಲಿ ಕಂದಾಯ ಗ್ರಾಮಗಳು ಪಟ್ಟಿಯಿಂದ ಬಿಟ್ಟು ಹೋಗಿರುವ ಲಂಬಾಣಿ ತಾಂಡಾ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ಕುರುಬರಹಟ್ಟಿ, ನಾಯಕರಹಟ್ಟಿ, ಮಜರೆಗ್ರಾಮ, ಹಾಡಿ, ದೊಡ್ಡಿ, ಪಾಳ್ಯ, ಕ್ಯಾಂಪ್, ಕಾಲೋನಿ ಮತ್ತು ಇತರೆ ದಾಖಲೆ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಗುರುತಿಸಿ ಪಟ್ಟಿಯಲ್ಲಿ ಸೇರಿಸಿ ಪ್ರಸ್ತಾವನೆ ಕಳುಹಿಸಿ ಎಂದು ತಿಳಿಸಲಾಗಿದೆ. ಅಂತಹ ಪಟ್ಟಿಯು ನಮಗೆ ಲಭ್ಯವಾದರೆ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗುವುದು ಎಂದು ಸಚಿವರು ತಿಳಿಸಿದರು.
ದಾಖಲೆ ರಹಿತ ಜನ ವಸತಿ ಪ್ರದೇಶಗಳು ಸಾಮಾನ್ಯವಾಗಿ ತಾಂಡಾ, ಹಟ್ಟಿ, ಹಾಡಿ, ದೊಡ್ಡಿ, ಪಾಳ್ಯ, ಮಜರೆ, ಕ್ಯಾಂಪ್, ಕಾಲೋನಿ ಇತ್ಯಾದಿ ಹೆಸರುಗಳಿಂದ ಗುರುತಿಸಲ್ಪಡುತ್ತವೆ. ಇಂತಹ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಹೊಸದಾಗಿ ಕಂದಾಯ ಗ್ರಾಮವೆಂದು ಘೋಷಿಸಲು ಇಲ್ಲವೇ ಅದನ್ನು ಹಾಲಿ ಇರುವ ಕಂದಾಯ ಗ್ರಾಮದ ಭಾಗವಾಗ ಪರಿಗಣಿಸಲು ಅಥವಾ ಅಸ್ತಿತ್ವದಲ್ಲಿರುವ ಗ್ರಾಮದಲ್ಲಿ ಸೇರ್ಪಡೆಗೊಳಿಸಲು ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಪ್ರಕರಣ 5ರಡಿಯಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಹೀಗಾಗಿ ರಾಜ್ಯದಲ್ಲಿ ವಿವಿಧೆಡೆಗಳಲ್ಲಿನ ಲಂಬಾಣಿ ತಾಂಡಾ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ಕುರುಬರಹಟ್ಟಿ, ನಾಯಕರಹಟ್ಟಿ, ಮಜರೆಗ್ರಾಮ, ಹಾಡಿ, ದೊಡ್ಡಿ, ಪಾಳ್ಯ, ಕ್ಯಾಂಪ್, ಕಾಲೋನಿ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಂಡು ಅಗತ್ಯ ಕ್ರಮ ವಹಿಸುವ ನಿಟ್ಟಿನಲ್ಲಿ ಡ್ರೋಣ ಸರ್ವೆ ನಡೆಸಲಾಗುತ್ತಿದೆ ಎಂದು ಸಚಿವರಾದ ಕೃಷ್ಣ ಭೈರೇಗೌಡ ಅವರು ಪ್ರತಿಕಿಯಿಸಿದರು.//////